ಸೌರಮಂಡಲದ ಅನೇಕ ಗ್ರಹ ಉಪಗ್ರಹಗಳ ಬಗ್ಗೆ ಮನುಷ್ಯನ ಕುತೂಹಲ ಮುಗಿಯುವುದೇ ಇಲ್ಲ. ಈ ವಿಚಾರದಲ್ಲಿ ಇಂದು ತಿಳಿದ ವಿಷಯ ನಾಳೆಗೆ ಇನ್ನೊಂದು ತಿರುವು ಪಡೆದು ಬಿಡುತ್ತದೆ. ಇದೇ ಕಾರಣಕ್ಕೆ ನಿರಂತರ ಸಂಶೋಧನೆ, ಉಪಗ್ರಹಗಳ ಉಡಾವಣೆಯನ್ನು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಮಾಡುತ್ತಿವೆ. ಇನ್ನೂ ಹೊಸ ಹೊಸ ಯೋಜನೆಯನ್ನು ಈ ಬಗ್ಗೆ ರೂಪಿಸುತ್ತಿವೆ.
ಅಮೆರಿಕದ ನಾಸಾ (NASA) ಈ ಹಿಂದೆ ಮಂಗಳನಲ್ಲಿಗೆ (Mars) ಕಳಿಸಿದ್ದ ಹೆಲಿಕಾಪ್ಟರ್ ಮಾದರಿಯ ನೌಕೆ ಹಲವು ವರ್ಷಗಳ ಕಾಲ ತನ್ನ ಕೆಲಸ ಮಾಡಿ ವಾರದ ಹಿಂದೆ ಹಾನಿಗೊಳಗಾಗಿದೆ. ಇದೀಗ ನಾಸಾ ಮತ್ತೆ ಮಂಗಳನಲ್ಲಿಗೆ ವಿಮಾನದ ಮಾದರಿಯ ಉಪಗ್ರಹವೊಂದನ್ನು ಕಳುಹಿಸುವ ಚಿಂತನೆಯಲ್ಲಿದೆ. ಮಂಗಳನಲ್ಲಿ ನೀರಿನ ಅಂಶ ಇರುವ ಬಗ್ಗೆ ಅಧ್ಯಯನ ಮಾಡುವುದು ಇದರ ಮೂಲ ಉದ್ದೇಶವಾಗಿದೆ.
Advertisement
Advertisement
ಇದಕ್ಕಾಗಿ ದೈತ್ಯ ಸ್ಥಿರ ರೆಕ್ಕೆಯ ವಿಮಾನವನ್ನು ಕಳುಹಿಸುವ ಆಲೋಚನೆಯಲ್ಲಿ ಅಮೆರಿಕದ ವಿಜ್ಞಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಮ್ಯಾಗಿ ಎಂಬ ಹೆಸರಿನ ಈ ವಿಮಾನ, ಮಾರ್ಸ್ ಏರಿಯಲ್ ಮತ್ತು ಗ್ರೌಂಡ್ ಇಂಟೆಲಿಜೆಂಟ್ ಎಕ್ಸ್‌ಪ್ಲೋರರ್ ಸೌರಶಕ್ತಿ ಚಾಲಿತ ವಿಮಾನವಾಗಿದೆ. ಟೇಕ್ ಆಫ್ ಮತ್ತು ಲಂಬವಾಗಿ ಇಳಿಯಲು ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.
Advertisement
ಈ ವಿಮಾನ ಒಂದೇ ಚಾರ್ಜ್‍ನಲ್ಲಿ 179 ಕಿ.ಮೀ ದೂರದವರೆಗೆ ಹಾರಬಲ್ಲದು. ಅಲ್ಲದೇ ಒಂದೇ ಮಂಗಳನ ವರ್ಷದಲ್ಲಿ 16,000 ಕಿ.ಮೀ ಗಿಂತಲೂ ಹೆಚ್ಚು ಪ್ರಯಾಣಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಈ ಅವಧಿ ಭೂಮಿಯ ಮೇಲೆ ಸರಿಸುಮಾರು 24 ತಿಂಗಳುಗಳಿಗೆ ಸಮಾನವಾಗಿರುತ್ತದೆ. ಮ್ಯಾಗಿಯು ಮಂಗಳನ ಅಂಗಳದಿಂದ 1,000 ಮೀಟರ್ ಎತ್ತರದಲ್ಲಿ ಹಾರುತ್ತದೆ. ಇದು ಮೂರು ವಿಷಯದ ಬಗ್ಗೆ ಮಾಹಿತಿ ಕಲೆ ಹಾಕಲಿದೆ. ಮೊದಲನೆಯದಾಗಿ ಅಲ್ಲಿ ನೀರಿನ ಅಂಶ ಇರುವುದರ ಬಗ್ಗೆ, ಎರಡನೇಯದಾಗಿ ದುರ್ಬಲ ಕಾಂತೀಯ ಕ್ಷೇತ್ರದ ಮೂಲದ ಬಗ್ಗೆ ಹಾಗೂ ಕೊನೆಯದಾಗಿ ಮೀಥೇನ್‍ನ ಇರುವ ಬಗ್ಗೆ ಹುಡುಕಾಟ ನಡೆಸಲಿದೆ. ವಿಜ್ಞಾನಿಗಳ ಈ ಕಲ್ಪನೆ ಇನ್ನೂ ಅಭಿವೃದ್ಧಿಯ ಆರಂಭಿಕ ಹಂತದಲ್ಲಿದೆ.
Advertisement
ಮಂಗಳನ ಅಂಗಳಕ್ಕೆ ತೆರಳಿದ್ದ ನಾಸಾ ಹೆಲಿಕಾಪ್ಟರ್!
ಮಂಗಳ ಗ್ರಹದ ಅಧ್ಯಯನಕ್ಕೆ ತೆರಳಿದ್ದ ನಾಸಾದ ಬಾಹ್ಯಾಕಾಶ ನೌಕೆ ಇಂಜೆನ್ಯುಯಿಟಿ ತನ್ನ ಹಾರಾಟವನ್ನು ಇತ್ತೀಚೆಗೆ ನಿಲ್ಲಿಸಿತ್ತು. ಹೆಲಿಕಾಪ್ಟರ್‌ನಂತಿರುವ ಪುಟ್ಟ ನೌಕೆ 1.8 ಕೆ.ಜಿ ತೂಕವಿತ್ತು. ಇದೀಗ ನೌಕೆಯ ರೆಕ್ಕೆಗಳು ಜಖಂಗೊಂಡಿದ್ದು, ಇದರ ಕಾರ್ಯಸ್ಥಗಿತವಾಗಿದೆ. ಪ್ರಸ್ತುತ ಬಿದ್ದಿರುವ ನೌಕೆ ಮಂಗಳ ಗ್ರಹದಲ್ಲಿಯೇ ಇರಲಿದ್ದು, ನಿಯಂತ್ರಣ ಕೊಠಡಿ ಜೊತೆ ಸಂಪರ್ಕದಲ್ಲಿರಲಿದೆ.
ಅಲ್ಪಾವಧಿಯ ತಾಂತ್ರಿಕ ಪ್ರಾತ್ಯಕ್ಷಿಕೆ ಉದ್ದೇಶದ ಇಂಜೆನ್ಯುಯಿಟಿ ಹೆಲಿಕಾಪ್ಟರ್ 2021ರಲ್ಲಿ ಮಂಗಳ ಗ್ರಹಕ್ಕೆ ಹೆಜ್ಜೆ ಇಟ್ಟಿತ್ತು. ಮೂರು ವರ್ಷಗಳಲ್ಲಿ 72 ಬಾರಿ ಹಾರಾಟ ನಡೆಸಿದ್ದು, 19 ಕಿ.ಮೀ. ಕ್ರಮಿಸಿತ್ತು. ಇದು, ಉದ್ದೇಶಿತ ಯೋಜನೆಗಿಂತಲೂ 14 ಪಟ್ಟು ಅಧಿಕ. 24 ಮೀಟರ್ ಎತ್ತರದಲ್ಲಿ ಗಂಟೆಗೆ 36 ಕಿ.ಮೀ ವೇಗದಲ್ಲಿ ಈ ಹೆಲಿಕಾಪ್ಟರ್ ಕ್ರಮಿಸಿತ್ತು.