ಚಾಮರಾಜನಗರ: ಕರ್ನಾಟಕದ ನಯಾಗರ ಫಾಲ್ಸ್ ಎಂದೇ ಹೆಸರು ವಾಸಿಯಾಗಿರುವ ಕೊಳ್ಳೆಗಾಲ ತಾಲೂಕಿನ ಗಗನಚುಕ್ಕಿ-ಭರಚುಕ್ಕಿ ಜಲಪಾತಗಳು ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಹಿನ್ನೆಲೆಯಲ್ಲಿ ಮೂರು ವರ್ಷದ ಬಳಿಕ ಜಲಪಾತೋತ್ಸವ ನಡೆಸಲು ಸರ್ಕಾರ ಮುಂದಾಗಿದೆ.
ಇಂದು ಗಗನಚುಕ್ಕಿ-ಭರಚುಕ್ಕಿ ಜಲಪಾತಕ್ಕೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಜಲಪಾತೋತ್ಸವದ ದಿನಾಂಕವನ್ನು ನಿಗದಿ ಮಾಡಿದ್ದಾರೆ.
ಆಗಸ್ಟ್ ತಿಂಗಳ 18 ಮತ್ತು 19 ರಂದು ಜಲಪಾತೋತ್ಸವ ನಡೆಯಲಿದೆ. ಜಲಪಾತದಲ್ಲಿ ನೀರಿಲ್ಲದ ಕಾರಣ ಮೂರು ವರ್ಷಗಳ ಕಾಲ ಜಲಪಾತೋತ್ಸವ ನಿಂತು ಹೋಗಿತ್ತು. ಆದರೆ ಈ ಬಾರಿ ಕಾವೇರಿ ಮತ್ತು ಕಬಿನಿ ನದಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಜಲಪಾತಗಳಲ್ಲಿ ಭೋರ್ಗರೆದು ನೀರು ಧುಮುಕುತ್ತಿದೆ. ಹೀಗಾಗಿ ಪ್ರವಾಸಿಗರು ಹಾಗೂ ಸ್ಥಳೀಯರು ಈ ಬಾರಿ ಜಲಪಾತೋತ್ಸವ ನಡೆಸಬೇಕೆಂದು ಒತ್ತಾಯ ಮಾಡಿದ್ದರಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಸಾ.ರಾ. ಮಹೇಶ್ ತಿಳಿಸಿದರು. ಇದನ್ನೂ ಓದಿ: ಭೋರ್ಗರೆದು ಹರಿಯುತ್ತಿರುವ ಕರ್ನಾಟಕದ ನಯಾಗರ ಫಾಲ್ಸ್
ಈ ಹಿಂದಿನ ಜಲಪಾತೋತ್ಸವದ ವೇಳೆ ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಬಾಯಲ್ಲಿ ನೀರೂರಿಸುವ ಖಾದ್ಯಗಳು ಸ್ಥಳದಲ್ಲೇ ತಯಾರಾಗುತ್ತಿದ್ದವು. ಪ್ರವಾಸಿಗರು ಅದನ್ನು ಚಪ್ಪರಿಸಿಕೊಂಡು ತಿನ್ನುತ್ತಿದ್ದರು. ಇನ್ನೂ ಸ್ಟಾರ್ ನಟರು ಹಾಗೂ ಕಲಾವಿದರನ್ನು ಆಹ್ವಾನಿಸಿ ಪ್ರತಿ ನಿತ್ಯ ರಾತ್ರಿ ಅದ್ಧೂರಿ ಕಾರ್ಯಕ್ರಮಗಳು ನಡೆಯುತಿತ್ತು.
ಪ್ರವಾಸಿಗರು ಸಂಗೀತಕ್ಕೆ ಹುಚ್ಚೆದ್ದು ಕುಣಿಯುತ್ತಿದ್ದರು. ಭರಚುಕ್ಕಿ ಜಲಪಾತೋತ್ಸವ ಪ್ರವಾಸಿಗರಿಗೆ ಅಕ್ಷರಶಃ ಸ್ವರ್ಗವೇ ಆಗಿತ್ತು. ಸತತ ಮೂರು ವರ್ಷಗಳ ಕಾಲ ಯಶಸ್ವಿಯಾಗಿ ನಡೆದಿದ್ದ ಕಾರ್ಯಕ್ರಮವನ್ನು ಈ ವರ್ಷವೂ ಆಯೋಜಿಸಿ ಎಂದು ಪ್ರವಾಸಿಗರು ಹಾಗೂ ಜನ ಕಳೆದ ವರ್ಷ ಬೇಡಿಕೆ ಇಟ್ಟಿದ್ದರು. ಆದರೆ ಸರ್ಕಾರ ಜಲಪಾತೋತ್ಸವನ್ನು ಆಯೋಜಿಸಿರಲಿಲ್ಲ.