ಅಂದುಕೊಂಡಂತೆ ಆಗಿದ್ದರೆ ಯಶ್ (Yash) ನಟನೆಯ ಟಾಕ್ಸಿಕ್ (Toxic) ಸಿನಿಮಾದ ಶೂಟಿಂಗ್ ಶುರುವಾಗಬೇಕಿತ್ತು. ಯಶ್ ಆಪ್ತರ ಪ್ರಕಾರ ಈಗಾಗಲೇ ಚಿತ್ರೀಕರಣ (Shooting) ಶುರುವಾಗಿ ಎರಡ್ಮೂರು ವಾರಗಳೇ ಕಳೆದಿರಬೇಕಿತ್ತು. ಆದರೆ, ಸೆಟ್ ಸೇರಿದಂತೆ ಹಲವು ಕೆಲಸಗಳು ಬಾಕಿ ಇರುವ ಕಾರಣದಿಂದಾಗಿ ಟಾಕ್ಸಿಕ್ ಸಿನಿಮಾದ ಚಿತ್ರೀಕರಣ ಇನ್ನಷ್ಟು ಮುಂದೆ ಹೋಗುವ ಸಾಧ್ಯತೆ ಹೆಚ್ಚಿದೆ.
ಬೆಂಗಳೂರಿನಲ್ಲಿ ಬೃಹತ್ ಸೆಟ್ ಗಳು ನಿರ್ಮಾಣ ತಡವಾಗುತ್ತಿದ್ದರಿಂದ, ಆ ಸಮಯವನ್ನು ಯಶ್ ರಾಮಾಯಣ (Ramayana) ಚಿತ್ರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ರಾಮಾಯಣ ಚಿತ್ರದಲ್ಲಿ ಯಶ್, ರಾವಣನಾಗಿ ನಟಿಸುತ್ತಿದ್ದು ಈ ಪಾತ್ರಕ್ಕಾಗಿ ಬರೋಬ್ಬರಿ 15 ಕೆಜಿ ತೂಕವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಒಂದಷ್ಟು ಕೇಜಿ ತೂಕ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮಾಯಣ ಚಿತ್ರದಲ್ಲಿ ಯಶ್ ಕೇವಲ ರಾವಣನಾಗಿ ಮಾತ್ರ ನಟಿಸುತ್ತಿಲ್ಲ, ನಿರ್ಮಾಪಕ ಕೂಡ ಆಗಿದ್ದಾರೆ. ಹಾಗಾಗಿ ಡಬಲ್ ಜವಾಬ್ದಾರಿಯನ್ನು ಅವರು ಹೊತ್ತಿದ್ದಾರೆ. ಈ ಕಾರಣದಿಂದಾಗಿಯೇ ಟಾಕ್ಸಿಕ್ ತಯಾರಿಗೆ ಸ್ವಲ್ಪ ಸಮಯ ಕೊಟ್ಟು, ರಾಮಾಯಣದತ್ತ ಮುಖ ಮಾಡಿದ್ದಾರೆ. ಕೆಲವೇ ದಿನಗಳ ಡೇಟ್ ಇರುವ ಕಾರಣದಿಂದಾಗಿ ರಾಮಾಯಣ ಚಿತ್ರೀಕರಣ ಮುಗಿಸಿಕೊಂಡು ಟಾಕ್ಸಿಕ್ ನಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಮುಂಬೈನಲ್ಲಿ ರಾಮಾಯಣ ಚಿತ್ರದ ಶೂಟಿಂಗ್ ಶುರುವಾಗಿದೆ. ಶೂಟಿಂಗ್ ಶುರುವಾದ ಮೊದಲನೇ ದಿನವೇ ಶೂಟಿಂಗ್ ಸೆಟ್ ಫೋಟೋ ಲೀಕ್ (Photo leak) ಆಗಿತ್ತು. ಎರಡನೇ ದಿನ ನಟ ಅರುಣ್ ಗೋವಿಲ್ ಮತ್ತು ನಟಿ ಲಾರಾ ದತ್ತ ಹಾಗೂ ಮತ್ತಿತರರು ಶೂಟಿಂಗ್ ನಲ್ಲಿ ಭಾಗಿಯಾದ ಫೋಟೋಗಳು ಲೀಕ್ ಆಗಿವೆ. ಹಾಗಾಗಿ ಚಿತ್ರೀಕರಣ ಸ್ಥಳದಲ್ಲಿ ಮೊಬೈಲ್ ನಿಷೇಧಿಸಿದಸಲಾಗಿತ್ತು. ಆದರೂ, ಇಂದು ರಣವೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಫೋಟೋಗಳು ಕೂಡ ಲೀಕ್ ಆಗಿವೆ.