ಚಂಡೀಗಢ: ಪಂಚರಾಜ್ಯ ಚುನಾವಣೆಯಲ್ಲಿ ತೀವ್ರ ಮುಖಭಂಗಕ್ಕೀಡಾದ ಕಾಂಗ್ರೆಸ್ ತನ್ನ ಒಳಜಗಳಗಳಿಂದಾಗಿ ಪ್ರಮುಖ ನಾಯಕರನ್ನು ಕಳೆದುಕೊಳ್ಳುತ್ತಿದೆ. ಇಂದೂ ಸಹ ಪಂಜಾಬ್‌ನಲ್ಲಿಯೂ ಐವರು ಪ್ರಮುಖ ನಾಯಕರು ಸಾಮೂಹಿಕವಾಗಿ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದು, ಬಿಜೆಪಿ ಸೇರಲು ಮುಂದಾಗಿರುವುದು ಪಕ್ಷದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಕಳೆದ ತಿಂಗಳು ಪಂಜಾಬ್‌ನ ಮಾಜಿ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಜಾಖರ್ ಅವರು ಬಿಜೆಪಿ ಸೇರಿದ ನಂತರ ಕಾಂಗ್ರೆಸ್‌ನಿಂದ ಸಾಮೂಹಿಕ ವಲಸೆ ಪ್ರಾರಂಭವಾಗಿದೆ. ಪಂಜಾಬ್ ಸಂಪುಟದ ಮಾಜಿ ಸಚಿವರಾದ ಗುರುಪ್ರೀತ್ ಸಿಂಗ್ ಕಂಗಾರ್, ಬಲ್ಬೀರ್ ಸಿಂಗ್ ಸಿಧು, ರಾಜ್ ಕುಮಾರ್ ವೆರ್ಕಾ, ಸುಂದರ್ ಶಾಮ್ ಅರೋರಾ ಮತ್ತು ಮಾಜಿ ಶಾಸಕ ಕೇವಲ್ ಸಿಂಗ್ ಧಿಲ್ಲೋನ್ ಅವರಿಂದು ಬಿಜೆಪಿ ಸೇರ್ಪಡೆಯಾಗಲು ಸಿದ್ಧರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವಿಧಾನಸಭೆಯತ್ತ ಕಾಂಗ್ರೆಸ್ ಕಣ್ಣು: ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ, ಮಣಿಪುರ ಪಂಚರಾಜ್ಯಗಳ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮಾಡಲು ಪ್ರಯತ್ನ ಆರಂಭಿಸಿದೆ. ಅದಕ್ಕಾಗಿಯೇ ಕಾರ್ಯಕರ್ತರ ಸೇವೆ ಗಮನಿಸಿ 50 ವರ್ಷದೊಳಗಿನ ಶೇ.50 ಮಂದಿಗೆ ಮುಂಬರುವ ವಿಧಾನಸಭೆಯಲ್ಲಿ ಟಿಕೆಟ್ ನೀಡಲು ನಿರ್ಧರಿಸಿದೆ. ಅಲ್ಲದೆ, ಜೆಡಿಎಸ್, ಬಿಜೆಪಿಗೆ ಸರಿಸಮನಾಗಿ ಪಕ್ಷಕ್ಕೆ ಯುವ ಸಮೂಹವನ್ನು ಸೆಳೆಯುವುದೂ ಇದರ ಉದ್ದೇಶವಾಗಿದೆ.