ಚಂಡಿಘರ್: ಪಕ್ಷವನ್ನು ಮುನ್ನಡೆಸುವ ಹಾಗೂ ರಾಹುಲ್ ಗಾಂಧಿ ಅವರ ಸ್ಥಾನವನ್ನು ತುಂಬುವ ಶಕ್ತಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಮಾತ್ರ ಇದೆ. ಹೀಗಾಗಿ ಅವರೇ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಚಂಡೀಗಢದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೇ ಸೂಕ್ತ ಆಯ್ಕೆ. ಆದರೆ ಆಯ್ಕೆಯ ಕುರಿತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮಾತ್ರ ತೀರ್ಮಾನ ಕೈಗೊಳ್ಳಲು ಸಾಧ್ಯ. ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿರುವ ರಾಹುಲ್ ಗಾಂಧಿ ಅವರ ನಿರ್ಧಾರದ ಕುರಿತು ಸಿಂಗ್ ಬೇಸರ ವ್ಯಕ್ತಪಡಿಸಿದ್ದು, ಭಾರತ ಯುವ ರಾಷ್ಟ್ರ, ಯುವ ನಾಯಕರಿಗೆ ಸ್ಪಂದಿಸುತ್ತದೆ. ಹೀಗಾಗಿ ಯುವಕರೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಬೇಕು ಎಂದು ಸಿಂಗ್ ಹೇಳಿದ್ದಾರೆ.
Advertisement
Advertisement
ಈ ಹಿಂದೆ ಶಶಿ ತರೂರ್ ಸಹ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೇ ಉತ್ತಮ ಆಯ್ಕೆ ಎಂದು ಅಭಿಪ್ರಾಯಪಟ್ಟಿದ್ದರು. ಇದೀಗ ಅಮರೀಂದರ್ ಸಿಂಗ್ ಸಹ ಅದೇ ರೀತಿ ಹೇಳಿದ್ದಾರೆ.
Advertisement
ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಆಗಿರುವ ಹಾನಿ ಸರಿಪಡಿಸಲು ಕ್ರಿಯಾತ್ಮಕ ನಾಯಕರ ಅಗತ್ಯವಿದ್ದು, ಈ ಮೂಲಕ ಪಕ್ಷವನ್ನು ಮತ್ತೆ ಬಲಪಡಿಸಬಹುದಾಗಿದೆ. ಇಂತಹ ಕಾರ್ಯಕ್ಷಮತೆಯನ್ನು ಪ್ರಿಯಾಂಕಾ ಅವರು ಹೊಂದಿದ್ದು, ರಾಷ್ಟ್ರದ ಅಗತ್ಯತೆ ಅರಿತು, ಅದಕ್ಕೆ ಪರಿಹಾರ ಹುಡುಕುವ ಬುದ್ಧಿವಂತಿಕೆ ಮತ್ತು ಪ್ರವೃತ್ತಿ ಪ್ರಿಯಾಂಕಾ ಗಾಂಧಿ ಅವರಲ್ಲಿದೆ. ಅಲ್ಲದೆ, ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವ ಧೈರ್ಯವೂ ಸಹ ಅವರಿಗಿದೆ. ಹೀಗಾಗಿ ಯಾವುದೇ ರೀತಿಯ ಸವಾಲು ಸ್ವೀಕರಿಸಿ ಅದನ್ನು ವಿಜಯದತ್ತ ಕೊಂಡೊಯ್ಯುತ್ತಾರೆ ಎಂದು ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
Advertisement
ರಾಹುಲ್ ಗಾಂಧಿ ಅವರು ರಾಜೀನಾಮೆಯನ್ನು ಹಿಂಪಡೆಯಲು ಒಪ್ಪದ ಕಾರಣ ಪ್ರಿಯಾಂಕಾ ಗಾಂಧಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಹೊಸ ನಾಯಕರನ್ನು ನೇಮಿಸಬಹುದಾಗಿದೆ. ಅಲ್ಲದೆ ಪ್ರಿಯಾಂಕಾ ಅವರು ವಿವಿಧ ರಾಜ್ಯಗಳಲ್ಲಿನ ನಾಯಕರೊಂದಿಗೆ ಹಾಗೂ ಜನರೊಂದಿಗೆ ಬೇಗ ಬೆರೆಯುತ್ತಾರೆ. ಸುಲಭವಾಗಿ ಬೆಂಬಲ ಗಳಿಸುತ್ತಾರೆ ಎಂದು ಅಮರಿಂದರ್ ಸಿಂಗ್ ಹೇಳಿದರು.
ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನಿಡಿದ ನಂತರ ಸ್ವತಃ ರಾಹುಲ್ ಗಾಂಧಿ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ. ಅಲ್ಲದೆ, ಗಾಂಧಿ ಕುಟುಂಬದ ಯಾರೂ ಅಧ್ಯಕ್ಷರಾಗುವುದು ನನಗೆ ಇಷ್ಟವಿಲ್ಲ ಎಂದು ಪಟ್ಟು ಹಿಡಿದ್ದಾರೆ. ಇತ್ತ ರಾಹುಲ್ ಇಲ್ಲವೆ, ಪ್ರಿಯಾಂಕಾ ಅವರೇ ಅಧ್ಯಕ್ಷರಾಗಬೇಕು ಎಂದು ಶಶಿ ತರೂರ್ ಸೇರಿದಂತೆ ಇತರೆ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ತಿಂಗಳುಗಳೇ ಕಳೆದರೂ ಅಧ್ಯಕ್ಷರ ಆಯ್ಕೆ ಕಾಂಗ್ರೆಸ್‍ಗೆ ಸವಾಲಾಗಿ ಪರಿಣಮಿಸಿದೆ.