ಚಿಕ್ಕಮಗಳೂರು: ರಸ್ತೆ ಮಧ್ಯೆ ಒಂಟಿ ಸಲಗವನ್ನ ಕಂಡು ಒಂದು ಕಿ.ಮೀ. ಹಿಮ್ಮುಖವಾಗಿ ಬಸ್ ಚಲಾಯಿಸಿದ ಚಾಲಕ 50ಕ್ಕೂ ಅಧಿಕ ಪ್ರಯಾಣಿಕರ ಆತಂಕವನ್ನ ದೂರಮಾಡಿದ್ದಾರೆ.
ಜಿಲ್ಲೆಯ ತರೀಕೆರೆ ತಾಲೂಕಿನ ಸಂತವೇರಿ ಘಾಟ್ ಬಳಿ ನಡೆದಿದೆ. ಹಳ್ಳಿಗಳ ಮಾರ್ಗವಾಗಿ ತರೀಕೆರೆಯಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ಸರ್ಕಾರಿ ಬಸ್ ಸಂತವೇರಿ ಘಾಟ್ ರಸ್ತೆಯಲ್ಲಿ ಬರುತ್ತಿತ್ತು. ಈ ವೇಳೆ ಚಾಲಕ ನಡುರಸ್ತೆಯಲ್ಲಿ ರಾಜಗಾಂಭೀರ್ಯದಿಂದ ನಡೆದು ಬರುತ್ತಿದ್ದ ಆನೆ ಕಂಡು ಗಾಬರಿಯಾಗಿದ್ದಾರೆ. ತಕ್ಷಣ ಆತಂಕಗೊಳ್ಳದೇ ಬಸ್ ಹಿಮ್ಮುಖವಾಗಿ ಸುಮಾರು ಒಂದು ಕಿ.ಮೀ. ಚಲಾಯಿಸಿದ್ದಾರೆ. ಆನೆ ಹಾಗೂ ಅದರ ಉದ್ದನೆ ದಂತಗಳನ್ನ ನೋಡುತ್ತಿದ್ದಂತೆ ಪ್ರಯಾಣಕರು ಭಯದಿಂದ ಕೂಗಾಡಲು ಶುರುಮಾಡಿದ್ದರು. ಆದ್ರೆ, ಚಾಲಕ ಹಾಗೂ ನಿರ್ವಾಹಕರ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ಪ್ರಯಾಣಿಕರ ಆತಂಕ ದೂರಾಗಿದೆ.
Advertisement
Advertisement
ನಿರ್ವಾಹಕ ಹಿಂದೆ ನಿಂತು ಮಾರ್ಗ ಹೇಳುತ್ತಿದ್ದಂತೆ ಚಾಲಕ ಸುಮಾರು ಒಂದು ಕಿ.ಮೀ. ಬಸ್ಸನ್ನ ಹಿಮ್ಮುಖವಾಗಿಯೇ ಚಲಾಯಿಸಿದ್ದಾರೆ. ಬಳಿಕ ಬಸ್ಸನ್ನ ಹಿಂಬಾಲಿಸಿಕೊಂಡೇ ಬಂದ ಗಜರಾಜ ಕಾಡಿನೊಳಗೆ ಕಣ್ಮರೆಯಾಗಿದ್ದಾನೆ. ಈ ಮಾರ್ಗದ ರಸ್ತೆಯ ಇಕ್ಕೆಲಗಳಲ್ಲಿ ಬಿದಿರು ಯಥೇಚ್ಛವಾಗಿದ್ದು ಚಿಗುರಿ ಬಂದಿದೆ. ಆದ್ದರಿಂದ ಬಿದಿರು ತಿನ್ನಲು ಬಂದ ಆನೆ 15 ದಿನಗಳಲ್ಲಿ ಮೂರ್ನಾಲ್ಕು ಜನರಿಗೆ ಗೋಚರವಾಗಿದೆ. ಆದ್ರೆ ಭಯಪಡದೆ ಧೈರ್ಯದಿಂದ ಬಸ್ ಚಲಾಯಿಸಿದ್ದಕ್ಕೆ ಪ್ರಯಾಣಿಕರು ಚಾಲಕ-ನಿರ್ವಾಹಕನಿಗೆ ಭೇಷ್ ಎಂದಿದ್ದಾರೆ.