ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶ ಸಂಬಂಧ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ ಬಳಿಕ, ಇದೀಗ ಮಸೀದಿಯೊಳಗೆ ಪ್ರವೇಶಿಸಿ ಮಹಿಳೆಯರೂ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಬೇಕೆಂದು ಕೋರಿ ಪುಣೆ ಮೂಲದ ದಂಪತಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿಸಿದ್ದು, ಕೇಂದ್ರ ಸರ್ಕಾರ, ಮಹಿಳಾ ಆಯೋಗ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಕೇಂದ್ರೀಯ ವಕ್ಫ್ ಮಂಡಳಿಗೆ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್.ಎ ಬೊಬ್ಡೆ ಹಾಗೂ ಎಸ್ ಅಬ್ದುಲ್ ನಝೀರ್ ನೇತೃತ್ವದ ಪೀಠ ನೋಟಿಸ್ ಜಾರಿಗೊಳಿಸಿದೆ. ಶಬರಿಮಲೆ ದೇಗುಲ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಒಂದೇ ಕಾರಣಕ್ಕಾಗಿ ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.
Advertisement
Advertisement
ಇಸ್ಲಾಂ ಧರ್ಮಗ್ರಂಥ ಕುರಾನ್‍ನಲ್ಲಿ ಪುರುಷ ಹಾಗೂ ಮಹಿಳೆಯರ ನಡುವೆ ಬೇಧಬಾವ ಮಾಡಿಲ್ಲ. ಆದ್ರೆ ಇತ್ತೀಚಿಗೆ ಇಸ್ಲಾಂ ಧರ್ಮವು ಮಹಿಳೆಯರನ್ನು ತುಳಿಯುವ ಧರ್ಮವಾಗಿ ಮಾರ್ಪಾಡಾಗಿದೆ. ಪ್ರವಾದಿಗಳ ಕಾಲದಲ್ಲಿ ಮಹಿಳೆಯರಿಗೆ ಮಸೀದಿಯೊಳಗೆ ಪ್ರವೇಶವಿತ್ತು. ಆದರೆ ಕಾಲಕ್ರಮೇಣ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯಲು ಆರಂಭವಾದ ಬಳಿಕ ಮುಖ್ಯ ಪ್ರರ್ಥನಾ ಸಭಾಂಗಣಕ್ಕೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಯಿತು ಎಂದು ಅರ್ಜಿದಾರ ದಂಪತಿ ಯಾಸ್ಮಿನ್ ಹಾಗೂ ಝಬರ್ ಅಹ್ಮದ್ ಪೀರ್ಜಾಡೆ ತಿಳಿಸಿದ್ದಾರೆ.
Advertisement
Advertisement
ಮುಸ್ಲಿಂ ಧರ್ಮದ ಪ್ರಕಾರ ಅನಾದಿ ಕಾಲದಿಂದಲೂ ಮಹಿಳೆಯರಿಗೆ ಮಸೀದಿ ಪ್ರವೇಶ ನಿಷೇಧಿಸಲಾಗಿದೆ. ಆದ್ದರಿಂದ ಪುರುಷರಂತೆ ಮಹಿಳೆಯರು ಮಸೀದಿಗೆ ಹೋಗಿ ದೇವರ ಪ್ರಾರ್ಥನೆ ಮಾಡಲು ಅವಕಾಶವಿಲ್ಲ. ಇದು ಸಮಾನತೆ ಮತ್ತು ಮೂಲಭೂತ ಹಕ್ಕಿನ ಉಲ್ಲಂಘನೆ, ಪುರುಷರಂತೆ ಮಹಿಳೆಯರಿಗೂ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿ, ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ. ಅದರಂತೆ ಮುಸ್ಲಿಂ ಮಹಿಳೆಯರಿಗೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಮೆಕ್ಕಾ ಮತ್ತು ಕೆನಡಾದಲ್ಲಿ ಮಹಿಳೆಯರಿಗೆ ಇಂತಹ ಅವಕಾಶವಿದೆ ಎಂದು ಅರ್ಜಿದಾರರು ಸುಪ್ರೀಂಗೆ ಮನವಿ ಮಾಡಿದ್ದರು.