– 5 ಸಾವಿರಕ್ಕೂ ಹೆಚ್ಚು ಸಸಿಗಳ ನೆಟ್ಟು ಯುವಕರಿಗೆ ಮಾದರಿ
ಬಾಗಲಕೋಟೆ: ಪರಿಸರದ ಬಗ್ಗೆ ನಿರ್ಲಕ್ಷ್ಯ ಮನೋಭಾವನೆಯಿಂದ ಕಾಂಕ್ರಿಟ್ ಕಾಡು ಬೆಳೆಯುತ್ತಿದೆ. ಇದರಿಂದ ಎಲ್ಲೆಡೆ ತಾಪಮಾನ ಹೆಚ್ಚುತ್ತಿದೆ. ಆದರೆ ಇಲ್ಲೊಬ್ಬರು ಉಪನ್ಯಾಸಕ ನಿವೃತ್ತಿ ಹೊಂದಿದರೂ ಮನೆಯವರೊಂದಿಗೆ ಕಾಲ ಕಳೆಯದೇ, ತಮ್ಮ ನಿವೃತ್ತಿ ಜೀವನವನ್ನು ಪರಿಸರ ರಕ್ಷಣೆಗೆ ಮುಡಿಪಾಗಿಟ್ಟಿದ್ದಾರೆ.
ಪರಿಸರ ರಕ್ಷಣೆಗೆ ಮುಂದಾಗಿರುವ ಬಾದಾಮಿ ಪಟ್ಟಣದ ನಿವಾಸಿ ಶಿವರೆಡ್ಡಿ ವಾಸನ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ನಿಸರ್ಗ ಬಳಗ ಎಂಬ ಸಂಘಟನೆ ಹುಟ್ಟುಹಾಕಿ ಸುಂದರ ಪರಿಸರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಮೂಲಕ ಯುವಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುತ್ತ, ಇಡೀ ಪಟ್ಟಣವನ್ನೇ ಹಸಿರೀಕರಣ ಮಾಡಲು ಹೊರಟಿದ್ದಾರೆ. ಪಿಯು ಕಾಲೇಜ್‍ನಲ್ಲಿ ಜೀವಶಾಸ್ತ್ರದ ಉಪನ್ಯಾಸಕರಾಗಿದ್ದ ವಾಸನ್, 63ರ ಇಳಿ ವಯಸ್ಸಿನಲ್ಲಿಯೂ ಪರಿಸರ ಉಳಿಸಿ ಅಭಿಯಾನ ಆರಂಭಿಸಿದ್ದಾರೆ. ಈಗಾಗಲೇ ಪಟ್ಟಣದ ಸುತ್ತ ಸುಮಾರು 5 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಹಸರೀಕರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.
Advertisement
Advertisement
ಹೆಚ್ಚುತ್ತಿರುವ ತಾಪಮಾನವನ್ನು ಸಸಿ ನೆಡುವ ಮೂಲಕ ಕಡಿಮೆ ಮಾಡಬೇಕು. ನೀರಿನ ಅಂತರ್ಜಲ ಮಟ್ಟ ವೃದ್ಧಿಯಾಗಬೇಕು ಎಂಬ ಕನಸುಗಳನ್ನು ಹೊತ್ತು ಬಿಡುವಿನ ವೇಳೆಯಲ್ಲಿ ಊರೂರು ಸುತ್ತಿ ಪರಿಸರ ರಕ್ಷಣೆ, ಗಿಡ ನೆಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಪರಿಸರ ಪ್ರೇಮಿ ಎನಿಸಿಕೊಂಡಿದ್ದಾರೆ. ಯುವಕರು, ಮಹಿಳೆಯರು, ಶಿಕ್ಷಕರನ್ನೊಳಗೊಂಡ ಸುಮಾರು 50 ಸದಸ್ಯರ ನಿಸರ್ಗ ಬಳಗ ಹುಟ್ಟು ಹಾಕಿ ಚಾಲುಕ್ಯರ ನಾಡನ್ನು ಹಸಿರು ನಾಡು ಮಾಡಲು ಹೊರಟಿದ್ದಾರೆ.
Advertisement
ಬಾದಾಮಿ ಐತಿಹಾಸಿಕ ಪ್ರವಾಸಿ ತಾಣ, ಪಟ್ಟಣದಲ್ಲಿ ಚಾಲುಕ್ಯರ ಆಳ್ವಿಕೆಗೆ ಸಾಕ್ಷಿಯಾದ ಸುಂದರ ಕಲಾಶಿಲ್ಪಗಳಿವೆ. ಇದನ್ನು ವೀಕ್ಷಿಸಲು ದೇಶ-ವಿದೇಶದಿಂದ ಪ್ರವಾಸಿಗರು ಬರುತ್ತಾರೆ. ಆದರೆ ಪಟ್ಟಣ ಮಾತ್ರ ಬಿಸಿಲ ಕೂಪದಲ್ಲಿ ಸುಡುವಂತಿದೆ. ಇದನ್ನರಿತ ಎಸ್.ಎಚ್ ವಾಸನ್, ಬಾದಾಮಿ ಪಟ್ಟಣವನ್ನು ಸುಂದರ ಪರಿಸರದ ಪಟ್ಟಣವನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ, ಪಟ್ಟಣದ ಹಸರೀಕರಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.
Advertisement
ಸಸಿ ನೆಡುವುದರಲ್ಲಿಯೂ ಜಾಣತನ ಮೆರೆದಿರುವ ಇವರು, ಹೊಂಗೆ ಮರದಿಂದ ಮುಂದೊಂದು ದಿನ ಜೈವಿಕ ಇಂಧನ ಸಿಗುತ್ತೆ ಎಂಬ ಉದ್ದೇಶದಿಂದ ಹೆಚ್ಚಾಗಿ ಹೊಂಗೆ ಸಸಿಗಳನ್ನೇ ನೆಡುತ್ತಿದ್ದಾರೆ. ಅಲ್ಲದೆ, ಈ ಹಿಂದಿನ ಅರಣ್ಯ ಸಚಿವ ರಮಾನಾಥ್ ರೈ ಅವರನ್ನು ಭೇಟಿ ಮಾಡಿ, ಬಾದಾಮಿ ಪಟ್ಟಣಕ್ಕೆ ಸಾಲುಮರದ ತಿಮ್ಮಕ್ಕ ಉದ್ಯಾನವನ್ನು ಸಹ ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ. ಹೀಗಾಗಿ ಬಾದಾಮಿ ಜನ ಇವರನ್ನು ಪರಿಸರ ಪ್ರೇಮಿ ಎಂದು ಕರೆಯುತ್ತಾರೆ.