– ತನಿಖೆ ವೇಳೆ ಸ್ಫೋಟಕ ಮಾಹಿತಿ ಔಟ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ‘ಡೆವಿಲ್’ ಗ್ಯಾಂಗ್ ಕರಾಳ ಮುಖಗಳು ಒಂದೊಂದಾಗಿಯೇ ರಿವೀಲ್ ಆಗುತ್ತಿದೆ. ಬಡಪಾಯಿಯನ್ನು ಚಿತ್ರ-ವಿಚಿತ್ರವಾಗಿ ಹಿಂಸೆ ನೀಡಿ ಕೊಲೆ ಮಾಡಿದ್ದು ಮಾತ್ರವಲ್ಲದೇ ಮೈಮೇಲಿದ್ದ ಒಡವೆಯನ್ನು ಕೂಡ ದೋಚಿರುವುದು ತನಿಖೆಯ ವೇಳೆ ಬಯಲಾಗಿದೆ.
ರೇಣುಕಾಸ್ವಾಮಿ ಬರ್ಬರ ಕೊಲೆಯ ಬಳಿಕ ಅವರ ಮೈಮೇಲಿದ್ದ ಚಿನ್ನಾಭರಣವನ್ನು ಕಳವು ಮಾಡಲಾಗಿದೆ. ಪೊಲೀಸರ ತನಿಖೆ ವೇಳೆ ಈ ಸ್ಫೋಟಕ ಮಾಹಿತಿಯನ್ನು ಆರೋಪಿ ರವಿ ಬಾಯ್ಬಿಟ್ಟಿದ್ದಾನೆ. ರೇಣುಕಾಸ್ವಾಮಿ ಮೈಮೇಲಿದ್ದ ಚಿನ್ನವನ್ನು ಆರೋಪಿ ಜಗ್ಗ ದೋಚಿದ್ದಾನೆ ಎಂದು ಪೊಲೀಸರ ಮುಂದೆ ರವಿ ಸತ್ಯ ಕಕ್ಕಿದ್ದಾನೆ.
ಸುಮ್ಮನಹಳ್ಳಿ ಬಳಿ ರೇಣುಕಾಸ್ವಾಮಿ ಶವವನ್ನ ಎಸೆದರು. ಬಳಿಕ ಪೊಲೀಸ್ ಠಾಣೆಗೆ ಶರಣಾಗುವಂತೆ ಹೇಳಿದರು. ಆದರೆ ಭಯದಿಂದ ಠಾಣೆಗೆ ಹೋಗದೆ ಕಾರಿನಲ್ಲಿ ದುರ್ಗಕ್ಕೆ ಬಂದೆ. ಕಾರಿನಲ್ಲಿ ಜಗ್ಗನ ಜೊತೆ ಚಿತ್ರದುರ್ಗಕ್ಕೆ ಬಂದುಬಿಟ್ಟೆ. ಆರೋಪಿ ಜಗ್ಗ ಚಿನ್ನಾಭರಣ ತೆಗೆದುಕೊಂಡು ಬಂದಿದ್ದ ಎಂದು ರವಿ ಹೇಳಿದ್ದಾನೆ. ಇದನ್ನೂ ಓದಿ: ಮೈಸೂರಿನಲ್ಲಿ `ದಾಸ’ ತಂಗಿದ್ದ ಹೊಟೇಲ್, ಇತರೆಡೆ ಮಹಜರ್- ಡಿಫೆಂಡರ್ ಕಾರಿಗೆ ಬರುತ್ತಾ ಕಂಟಕ?
ಘಟನೆ ವಿವರ: ಜೂನ್ 8 ರಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತರಲಾಗಿತ್ತು. ಬಳಿಕ ಬೆಂಗಳೂರಿನ ಪಟ್ಟಣಗೆರೆ ಶೆಡ್‍ನಲ್ಲಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಹತ್ಯೆಯ ನಂತರ ಶವವನ್ನು ಸುಮ್ಮನಹಳ್ಳಿ ಮೋರಿಗೆ ಬಿಸಾಕಿ ಪಾತಕಿಗಳು ತೆರಳಿದ್ದಾರೆ. ಇತ್ತ ಮೂವರು ಹಣದ ವಿಚಾರಕ್ಕೆ ಕೊಲೆ ನಡೆದಿರುವುದಾಗಿ ಕಾಮಾಕ್ಷಿಪಾಳ್ಯ ಪೊಲೀಸರ ಮುಂದೆ ಶರಣಾಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರಿಗೆ ಸ್ಟಾರ್ ನಟ ಭಾಗಿಯಾಗಿರುವುದು ಗಮನಕ್ಕೆ ಬಂದಿದೆ.
ಕೂಡಲೇ ಎಸಿಪಿ ಚಂದನ್ ಮತ್ತು ಇನ್ಸ್ ಪೆಕ್ಟರ್ ಗಿರೀಶ್ ನಾಯ್ಕ್ ತಂಡ ಮೈಸೂರಗೆ ತೆರಳಿ ದರ್ಶನ್‍ನನ್ನು ಅರೆಸ್ಟ್ ಮಾಡಿ ಬೆಂಗಳೂರಿಗೆ ಕರೆತಂದಿದ್ದಾರೆ. ಇತ್ತ ದರ್ಶನ್ ಗೆಳತಿ ಪವಿತ್ರಾ ಗೌಡರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ಇದುವರೆಗೆ 17 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಸ್ಥಳ ಮಹಜರು ಜೊತೆಗೆ ತನಿಖೆ ನಡೆಸುತ್ತಿದ್ದಾರೆ.