ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಕರಾವಳಿ ಕರ್ನಾಟಕದ ಪ್ರವಾಸಕ್ಕೆ ಸಿಕ್ಕಿದ ಪ್ರತಿಕ್ರಿಯೆ ಕರಾವಳಿಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಭರವಸೆ ಮತ್ತು ಹುಮ್ಮಸ್ಸು ಮೂಡಿಸಿದೆ. ರಾಹುಲ್ ಗಾಂಧಿ ಕಾರ್ಯಕರ್ತರ ಅಭಿಪ್ರಾಯ ಆಲಿಸಿದರು. ಇದರ ಜೊತೆಗೆ ಮುಖಂಡರ ನಿರೀಕ್ಷೆಗೂ ಮೀರಿ ಜನಾರ್ಶೀವಾದ ಸಮಾವೇಶದಲ್ಲಿ ಜನರು ಭಾವಹಿಸಿದ್ದರು.
ಇದೇ ಮೊದಲ ಬಾರಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರೊಬ್ಬರು ಬ್ಲಾಕ್ ಅಧ್ಯಕ್ಷರ ಮಾತುಗಳನ್ನು ಆಲಿಸಿರುವುದು ಮತ್ತು ಸಮಸ್ಯೆಗಳಿಗೆ ಬ್ಲಾಕ್ ಅಧ್ಯಕ್ಷರಿಂದಲೇ ಪರಿಹಾರ ಮಾರ್ಗಗಳನ್ನು ಕೂಡ ಕೇಳಿದ್ದು, ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಭರವಸೆಯ ಸಂದೇಶ ನೀಡಿದೆ.
Advertisement
ಮಾರ್ಚ್ 20 ರ ಬುಧವಾರದಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರು ಉಡುಪಿಯ ಕಾಪು, ಪಡುಬಿದ್ರೆ, ಸುರತ್ಕಲ್ ಮುಂತಾದೆಡೆ ರೋಡ್ ಶೋ ನಡೆಸಿ ಇಳಿ ಸಂಜೆ ಹೊತ್ತಿನಲ್ಲಿ ಮಂಗಳೂರು ನೆಹರೂ ಮೈದಾನದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು.
Advertisement
ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಸರ್ಕಾರಕ್ಕೂ, ಕಾರ್ಯಕರ್ತನಿಗೂ, ಪಕ್ಷದ ಮುಖಂಡರಿಗೂ ಬಡಪಾಯಿ ಕಾರ್ಯಕರ್ತನಿಗೂ ಯಾವುದೇ ಸಂಪರ್ಕವೇ ಇರುತ್ತಿರಲಿಲ್ಲ. ಹಾಗೊಂದು ವೇಳೆ ಸಭೆ ಕರೆದರೂ ವಾಸ್ತವ ಸಂಗತಿಯನ್ನು ಹೇಳುವ ಪರಿಸ್ಥಿತಿ ಇರಲಿಲ್ಲ. ಆದರೆ, ಈ ಬಾರಿ ರಾಹುಲ್ ಗಾಂಧಿ ಕರೆದಿದ್ದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬ್ಲಾಕ್ ಅಧ್ಯಕ್ಷರು ಮತ್ತು ಇತರ ಮುಖಂಡರ ಸಭೆಯಲ್ಲಿ ಮುಕ್ತ ಚರ್ಚೆ ನಡೆದಿದೆ. ರಾಹುಲ್ ಗಾಂಧಿ ಪ್ರತಿಯೊಬ್ಬ ಬ್ಲಾಕ್ ಅಧ್ಯಕ್ಷರಿಗೂ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೀಡುತ್ತಿರುವ ಬಿಡುವಿಲ್ಲದ ಕೆಲಸಗಳ ನಡುವೆಯೂ ಉತ್ತಮ ಮಟ್ಟದ ಉತ್ತೇಜನ ನೀಡಿದಂತಾಗಿದೆ.
Advertisement
ರಾಹುಲ್ ಗಾಂಧಿ ಇತ್ತೀಚೆಗೆ ಒತ್ತು ನೀಡುತ್ತಿರುವ ಕೇಡರ್ ಪಾರ್ಟಿ ಮತ್ತು ಮೈಕ್ರೋ ಮ್ಯಾನೇಜ್ಮೆಂಟಿಗೆ ಪೂರಕವಾಗಿ ಸ್ಥಾಪಿಸಲಾದ ತೆಂಕ ಎರ್ಮಾಳಿನ ರಾಜೀವ್ ಗಾಂಧಿ ಪೊಲಿಟಿಕಲ್ ಇನ್‍ಸ್ಟಿಟ್ಯೂಟನ್ನು ಉದ್ಘಾಟಿಸುವ ಮೂಲಕ ಜನಾರ್ಶೀವಾದ ಯಾತ್ರೆ ಆರಂಭವಾಯಿತು. ಇದು ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ತರಬೇತಿ ನೀಡಲು ನಿರ್ಮಿಸಲಾದ ವ್ಯವಸ್ಥೆಯಾಗಿದ್ದು, ಪೂರ್ಣಪ್ರಮಾಣದಲ್ಲಿ ಉಪಯೋಗವಾಗಲಿದೆ.
Advertisement
ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಮಂಗಳೂರಿಗೆ ಆಗಮಿಸಿದ ಯಾತ್ರೆಗೆ ಮಂಗಳೂರಿನ ಅಂಬೇಡ್ಕರ್ ವೃತ್ತದಲ್ಲಿ ಭಾರೀ ಸ್ವಾಗತ ನೀಡಲಾಯಿತು. ರಾಹುಲ್ ಗಾಂಧಿ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದ್ದರು. ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು.
ಕತ್ತಲು ಕವಿಯುತ್ತಿದ್ದಂತೆ ಆರಂಭವಾದ ಸಮಾವೇಶದಲ್ಲಿ ಮೊದಲಿಗೆ ಮಾತನಾಡಿದ ರಾಹುಲ್ ಗಾಂಧಿ ಅವರು, ಕರಾವಳಿಯಲ್ಲಿ ಹೆಚ್ಚಿನ ಬೆಂಬಲಿಗರು ಇರುವ ಬಿಲ್ಲವ ಸಮುದಾಯವನ್ನು ಓಲೈಸಲು ಬ್ರಹ್ಮಶ್ರೀ ನಾರಾಯಣ ಗುರು ಅವರ ಹೆಸರನ್ನು, ಅವರ ಸಂದೇಶಗಳನ್ನು ಭಾಷಣದಲ್ಲಿ ಹಲವು ಬಾರಿ ಪ್ರಸ್ತಾಪಿಸಿದ್ರು. ಆನಂತರ ಜಗಜ್ಯೋತಿ ಬಸವಣ್ಣ, ಕರಾವಳಿಯ ವೀರಪುರುಷರಾದ ಕೋಟಿ ಚೆನ್ನಯ, ರಾಣಿ ಅಬ್ಬಕ್ಕ ಮುಂತಾದವರ ಹೆಸರು ಹೇಳಲು ಮರೆಯಲಿಲ್ಲ. ಇಂತಹ ಮಹನೀಯರ ಹೆಸರು ಉಲ್ಲೇಖಿಸಿಯೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಭಾಷಣ ಜನರಿಗೆ ಹೆಚ್ಚು ರುಚಿಸದಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಸಮಾವೇಶಕ್ಕೆ ಭಾರೀ ಜನಸಂದಣಿ ಸೇರಿರುವುದು ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡರು, ರಾಜ್ಯ ನಾಯಕರು ಮತ್ತು ಉಸ್ತುವಾರಿ ಮುಖಂಡರಿಗೆ ಅಚ್ಚರಿ ತಂದಿತ್ತು. ಮಾತ್ರವಲ್ಲದೆ, ರಾಹುಲ್ ಸಮಾವೇಶಕ್ಕೆ ದೊರೆತ ಜನಸ್ಪಂದನೆ ಗುಪ್ತಚರ ಇಲಾಖೆ ಅಧಿಕಾರಿಗಳಲ್ಲೂ ಗೊಂದಲ ಮೂಡಿಸಿತ್ತು ಎನ್ನುವುದು ಸುಳ್ಳಲ್ಲ.
ಭಾವನಾತ್ಮಕ ವಿಚಾರಗಳು ಮತ್ತು ಅಪಪ್ರಚಾರಗಳ ಮೂಲಕ ಮತದಾರರನ್ನು ಓಲೈಸುತ್ತಿದ್ದ ಪ್ರತಿಪಕ್ಷಕ್ಕೆ ರಾಹುಲ್ ಗಾಂಧಿ ಕಾರ್ಯಕ್ರಮ ಒಂದು ಸ್ಪಷ್ಟ ಸಂದೇಶ ನೀಡಿದರೆ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗಿದೆ. ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ ಈ ಸಮಾವೇಶಕ್ಕೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತೆ ಅನ್ನೋದನ್ನು ಸ್ವತಃ ಜಿಲ್ಲಾ ಕಾಂಗ್ರೆಸ್ ನಾಯಕರೇ ಊಹಿಸಿರಲಿಲ್ಲ.
ಈ ಹಿಂದೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಹಿಂದೂ ಫೈರ್ ಬ್ರಾಂಡ್ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳೂರಿಗೆ ಬಂದಾಗಲೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರದಿರೋದು ಬಿಜೆಪಿಗರನ್ನೂ ಕಂಗೆಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್ ನ ಶಾಸಕರಿದ್ದು, ಅದನ್ನು ಉಳಿಸಿಕೊಂಡು ಕೈತಪ್ಪಿಕೊಂಡಿರುವ ಒಂದು ಕ್ಷೇತ್ರವನ್ನೂ ಪಡೆಯಬೇಕೆಂಬ ಪ್ಲಾನನ್ನೂ ಕಾಂಗ್ರೆಸ್ ಮಾಡುತ್ತಿದೆ. ಇದಕ್ಕೆಲ್ಲಾ ಚುನಾವಣಾ ಪೂರ್ವದಲ್ಲಿ ನಡೆದ ಈ ಜನಾಶೀರ್ವಾದ ಯಾತ್ರೆಯ ಯಶಸ್ಸೂ ಹೆಚ್ಚು ಬಲ ಕೊಟ್ಟಂತಾಗಿದೆ. ಒಟ್ಟಿನಲ್ಲಿ ಇನ್ನೊಂದು ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸಮಾವೇಶದ ನೈಜ ಫಲಿತಾಂಶ ದೊರೆಯಲಿದೆ.
– ಸುಖ್‍ಪಾಲ್ ಪೊಳಲಿ, ಮಂಗಳೂರು