ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಾ (ಆರ್‌ಎಸ್‌ಎಸ್) ಸಂಘದ ಮುಖ್ಯಸ್ಥರಾದ ಮೋಹನ್ ಭಾಗವತ್ ನೇತೃತ್ವದ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಆಹ್ವಾನ ನೀಡಲು ಸಿದ್ಧತೆ ನಡೆಸುತ್ತಿದೆ.
ಹೌದು, ಸೆಪ್ಟಂಬರ್ ನ 17 ರಿಂದ 19 ರವರೆಗೆ ಆರ್‌ಎಸ್‌ಎಸ್ `ಭಾರತದ ಭವಿಷ್ಯ’ ಹೆಸರಿನಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರ ನೇತೃತ್ವವನ್ನು ಮೋಹನ್ ಭಾಗವತ್‍ರವರು ವಹಿಸಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಘವನ್ನು ತೀಕ್ಷ್ಣವಾಗಿ ಟೀಕಿಸುವ ಕಾಂಗ್ರೆಸ್ಸಿನ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಆಹ್ವಾನಿಸಲು ಸಿದ್ದತೆ ನಡೆಸಿರುವುದಾಗಿ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್‍ರವರು ವಿವಿಧ ಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದು, ರಾಷ್ಟ್ರಕ್ಕೆ ಸಂಬಂಧಿಸಿದ ಮಹತ್ವದ ವಿಚಾರಗಳ ಬಗ್ಗೆ ಚರ್ಚೆಯಾಗಲಿವೆ ಎನ್ನುವ ಮಾಹಿತಿ ಲಭಿಸಿದೆ. ಕಾರ್ಯಕ್ರಮಕ್ಕೆ ಸಿಪಿಎಂ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸೇರಿದಂತೆ ಎಡರಂಗದ ಪ್ರಮುಖ ನಾಯಕರನ್ನು ಆಹ್ವಾನಿಸಲಾಗುತ್ತದೆ ಎನ್ನಲಾಗಿದೆ.
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಆರ್‌ಎಸ್‌ಎಸ್‌ನ ಪ್ರಮುಖ ಪ್ರಚಾರಕರಾದ ಅರುಣ್ ಕುಮಾರ್ ರವರು, ದೆಹಲಿಯ ವಿಜ್ಞಾನ ಭವನದಲ್ಲಿ ಸೆಪ್ಟಂಬರ್ 17 ರಿಂದ 19 ರವರೆಗೆ ಮೂರು ದಿನಗಳವರೆಗೆ ಮೋಹನ್ ಭಾಗವತ್‍ರವರ ನೇತೃತ್ವದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಿನ್ನ ದೃಷ್ಟಿಕೋನ ಹೊಂದಿರುವ ನಾಯಕರುಗಳಿಗೆ ಆಹ್ವಾನ ನೀಡಬೇಕೆಂದು ನಿರ್ಧಾರ ಮಾಡಿದ್ದೇವೆ. ಆದರೆ ಇದುವರೆಗೂ ಯಾವೆಲ್ಲಾ ನಾಯಕರುಗಳಿಗೆ ಆಹ್ವಾನ ನೀಡಬೇಕೆಂಬುದು ಅಂತಿಮವಾಗಿಲ್ಲವೆಂದು ತಿಳಿಸಿದ್ದಾರೆ.
Advertisement
ಲಂಡನ್ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು, ಲಂಡನ್ನಿನ ಇಂಟರ್‌ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಟ್ರಾಟೆಜಿಕ್ ಸ್ಟಡೀಸ್ ಕಾಲೇಜಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪರೋಕ್ಷವಾಗಿ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅರಬ್ ರಾಷ್ಟ್ರಗಳಲ್ಲಿರುವ ಮುಸ್ಲಿಂ ಬ್ರದರ್ ಹುಡ್ ರೀತಿಯಲ್ಲಿ ಆರ್‌ಎಸ್‌ಎಸ್ ಸಂಘಟನೆ ಕಾರ್ಯನಿರ್ವಹಿಸುತ್ತಿದೆ. ಎರಡು ಸಂಘಟನೆಗಳ ಕಲ್ಪನೆಗಳು ಒಂದೇ ಆಗಿದೆ. ಇದು ಭಾರತದಲ್ಲಿನ ಸ್ವರೂಪವನ್ನೇ ಬದಲಿಸುವ ಯತ್ನ ಮಾಡುತ್ತಿದೆ ಎಂದು ಹೇಳುವ ಮೂಲಕ ಆರ್‌ಎಸ್‌ಎಸ್ ನಾಯಕರುಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಇದೀಗ ಆರ್‌ಎಸ್‌ಎಸ್ ತನ್ನ ಉಪನ್ಯಾಸ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿಯವರನ್ನು ಆಹ್ವಾನಿಸಲು ಮುಂದಾಗಿರುವುದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv