ಬೆಂಗಳೂರು: ಲೋಕಸಭಾ ಚುನಾವಣೆಯ ಮತದಾನ ಮುಗಿಯುತ್ತಿದ್ದಂತೆ ಸಿಲಿಕಾನ್ ಸಿಟಿಯ ಹಲವೆಡೆ ಮಳೆರಾಯ ಕಾಣಿಸಿಕೊಂಡಿದ್ದಾನೆ. ಹೀಗಾಗಿ ಇವಿಎಂ ಪ್ಯಾಡ್ ಸುರಕ್ಷತೆಯ ಬಗ್ಗೆ ಚುನಾವಣಾ ಅಧಿಕಾರಿಗಳು ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.
ನಗರದ ವಿಜಯನಗರ, ಮಾಗಡಿರೋಡ್, ಯಶವಂತಪುರ, ಹೆಬ್ಬಾಳ, ಮೆಜೆಸ್ಟಿಕ್, ಕಾರ್ಪೊರೇಷನ್ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಬೆಂಗಳೂರು ಹೊರ ವಲಯದ ನೆಲಮಂಗಲ ತಾಲೂಕಿನಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ.
ದಕ್ಷಿಣ ಒಳನಾಡಿನಲ್ಲಿ ಗಾಳಿಯ ಒತ್ತಡ ಕಡಿಮೆ ಹಿನ್ನೆಲೆ ನಿನ್ನೆ ಸುರಿದ ಮಳೆಗೆ ಸಿಲಿಕಾನ್ ಸಿಟಿ ಮಂದಿ ತತ್ತರಿಸಿ ಹೋಗಿದ್ದರು. ಇಂದು ಸಂಜೆ ಕೂಡ ಮಳೆರಾಯನ ಸಿಂಚನ ಶುರುವಾಗಿದೆ. ಇನ್ನೂ ಎರಡು ದಿನಗಳ ಕಾಲ ಇದೇ ರೀತಿ ಮಳೆಯಾಗುವ ಸಾಧ್ಯತೆ ಎಂದು ನೈಸರ್ಗಿಕ ವಿಕೋಪ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಮೈಸೂರ್ ರೋಡ್ ಸುತ್ತಮುತ್ತ ಮಳೆರಾಯನ ಆರ್ಭಟ ಜೋರಾಗಿತ್ತು. ಹೀಗಾಗಿ ಅತ್ತಿಕುಪ್ಪೆ ಮತಗಟ್ಟೆಯಲ್ಲಿ ಇವಿಎಂ ಮಿಷನ್‍ಗಳನ್ನು ಪ್ಯಾಕ್ ಮಾಡಲು ವಿದ್ಯುತ್ ಕೊರತೆ ಕಾಡಿತ್ತು. ಈ ವೇಳೆ ಚುನಾವಣಾ ಅಧಿಕಾರಿಗಳು ತಮ್ಮ ಮೊಬೈಲ್ ಬ್ಯಾಟರಿ ಹಚ್ಚಿಕೊಂಡ ಇವಿಎಂ ಪ್ಯಾಕ್ ಮಾಡಿದ್ದಾರೆ. ಸ್ಟ್ರಾಂಗ್ ರೂಮ್‍ಗೆ ಇವಿಎಂಗಳನ್ನು ಸಾಗಿಸಲು ಚುನಾವಣಾ ಸಿಬ್ಬಂದಿಗಳ ಪರದಾಡುವಂತಾಗಿದೆ.