ಚೌಕಬಾರ, ಚೂರಿಕಟ್ಟೆ, ಪೆಂಟಗನ್ ರೀತಿಯ ಹೊಸ ಬಗೆಯ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ, ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ, ನಟ ರಾಘು ಶಿವಮೊಗ್ಗ (Raghu Shivamogga) ಇದೀಗ ಮತ್ತೊಂದು ಚಿತ್ರಕ್ಕೆ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಪೆಂಟಗನ್ ನಲ್ಲಿ ಬೋಲ್ಡ್ ಸಬ್ಜೆಕ್ಟ್ ಅನ್ನು ಆಯ್ಕೆ ಮಾಡಿಕೊಂಡಿದ್ದ ಇವರು, ಮುಂದಿನ ಸಿನಿಮಾಗಾಗಿ (New Movie) ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಂಡಿರಬಹುದು ಎನ್ನುವ ಕುತೂಹಲ ಮೂಡಿದೆ.
ಅವರ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೇ ಹೋದರೂ, ಅವರ ಹೊಸ ಚಿತ್ರದ ಶೀರ್ಷಿಕೆ (Title Launch) ಅನಾವರಣವನ್ನು ದುನಿಯಾ ವಿಜಯ್ (Duniya Vijay), ನಾಳೆ ಸಂಜೆ 5.31ಕ್ಕೆ ಮಾಡಲಿದ್ದಾರೆ. ವಿಜಯ್ ಈ ಸಿನಿಮಾದ ಟೈಟಲ್ ಲಾಂಚ್ ಮಾಡುತ್ತಿರುವುದರಿಂದ ಇದೊಂದು ಸಾಹಸ ಪ್ರಧಾನ ಸಿನಿಮಾ ಇರಬಹುದಾ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಆದರೆ, ನಾಳೆಯೇ ಒಂದಷ್ಟು ವಿಷಯಗಳನ್ನು ಬಹಿರಂಗವಾಗಬಹುದು. ಇದನ್ನೂ ಓದಿ:ಚಂದ್ರನನ್ನು ಮುಟ್ಟಿದ ಭಾರತ- ಇಸ್ರೋ ಸಾಧನೆಗೆ ಭೇಷ್ ಎಂದ ಸ್ಟಾರ್ಸ್
ನಿರ್ದೇಶಕನ ಕನಸ್ಹೊತ್ತು ಚಿತ್ರೋದ್ಯಮಕ್ಕೆ ಬಂದಿದ್ದ ರಾಘು, ಮೊದಲು ಚೌಕಬಾರ ಹೆಸರಿನ ಕಿರುಚಿತ್ರ ಮಾಡಿದರು. ಆ ಸಿನಿಮಾವನ್ನು ಥಿಯೇಟರ್ ಗೆ ರಿಲೀಸ್ ಮಾಡಿ, ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಆನಂತರ ಚೂರಿಕಟ್ಟೆ ಸಿನಿಮಾಗೆ ಆಕ್ಷನ್ ಕಟ್ ಹೇಳಿದರು. ಈ ಸಿನಿಮಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ಅವರಿಗೂ ಒಳ್ಳೆಯ ಹೆಸರು ಬಂತು. ನಂತರ ಆಕ್ಟ್ 1978 ಸಿನಿಮಾಗೆ ನಟರಾಗಿ ಪ್ರವೇಶ ಮಾಡಿದರು. ಈ ಸಿನಿಮಾದಲ್ಲಿನ ಪಾತ್ರ ಅವರನ್ನು ಬ್ಯುಸಿ ನಟನನ್ನಾಗಿ ಮಾಡಿತು. ಸಾಕಷ್ಟು ಸಿನಿಮಾಗಳಲ್ಲಿ ನಟನಾಗಿಯೇ ಬ್ಯುಸಿಯಾದರು. ಈಗ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ.
ಹೊಸ ಸಿನಿಮಾದ ನಟರು, ತಾಂತ್ರಿಕ ವರ್ಗ ಯಾವುದನ್ನೂ ರಾಘು ಶಿವಮೊಗ್ಗ ಅವರು ಬಿಟ್ಟುಕೊಟ್ಟಿಲ್ಲ. ಕೇವಲ ಟೈಟಲ್ ಶೀರ್ಷಿಕೆಯ ಕುರಿತಾಗಿ ಮಾತ್ರ ಮಾಹಿತಿ ನೀಡಿದ್ದಾರೆ. ಪದ್ಮಾ ಪಿಕ್ಚರ್ಸ್ ಮತ್ತು ಗೌರಿ ಟಾಕೀಸ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ.
Web Stories