ಹಾಸನ: ಹಣ ಡ್ರಾ ಮಾಡಲು ಸಹಕರಿಸುವ ನೆಪದಲ್ಲಿ ಎಟಿಎಂ (ATM) ಕಾರ್ಡ್ ಬದಲಿಸಿ ಮಹಿಳೆಗೆ 50,000 ರೂ. ಹಣ ವಂಚಿಸಿರುವ ಘಟನೆ ಬೇಲೂರಿನ ಅರೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಣ ಕಳೆದುಕೊಂಡ ಮಹಿಳೆಯನ್ನು ಪದ್ಮ ಎಂದು ಗುರುತಿಸಲಾಗಿದೆ. ಮಹಿಳೆ ಹಣ ಡ್ರಾ ಮಾಡಿಕೊಳ್ಳಲು ಕರ್ನಾಟಕ ಬ್ಯಾಂಕ್ ಎಟಿಎಂಗೆ ಬಂದಿದ್ದರು. ಈ ವೇಳೆ ಹಣ ಡ್ರಾ ಮಾಡಲು ಬಾರದ ಕಾರಣ, ಅಪರಿಚಿತನ ನೆರವು ಕೇಳಿದ್ದಾರೆ. ಯವಕ 10,000 ಹಣ ಡ್ರಾ ಮಾಡಿಕೊಟ್ಟು, ಖಾತೆಯಲ್ಲಿ ಹಣ ಖಾಲಿಯಾಗಿದೆ ಎಂದು ಹೇಳಿದ್ದಾನೆ. ಬಳಿಕ ಎಟಿಎಂ ಕಾರ್ಡ್ ಬದಲಿಸಿ ಮಹಿಳೆಯನ್ನು ಕಳಿಸಿದ್ದಾನೆ.
ಮಹಿಳೆ ಮನೆಗೆ ಬಂದ ಕೆಲ ನಿಮಿಷಗಳಲ್ಲಿ ಖಾತೆಯಿಂದ ಹಣ ಡ್ರಾ ಆಗುತ್ತಿರುವ ಬಗ್ಗೆ ಮೊಬೈಲ್‍ಗೆ ಮೆಸೇಜ್‍ಗಳು ಬಂದಿವೆ. ಗಾಬರಿಗೊಂಡು ತಕ್ಷಣ ಬ್ಯಾಂಕ್‍ಗೆ ಹೋಗಿ ಪರಿಶೀಲಿಸಿದ್ದಾರೆ. ಅಷ್ಟರೊಳಗೆ ವಂಚಕ 50,000 ರೂ. ದೋಚಿ ಪರಾರಿಯಾಗಿದ್ದಾನೆ.
ಈ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.