ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ನಟನೆಯ ಬೃಹಸ್ಪತಿ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
`ಬೃಹಸ್ಪತಿ’. ಆರ್.ಮನೋರಂಜನ್ ನಟನೆಯ ಎರಡನೇ ಸಿನಿಮಾ. ಸ್ಯಾಂಡಲ್‍ವುಡ್ ನ ಡಿಸಿಪ್ಲಿನ್ ಡೈರೆಕ್ಟರ್ ನಂದಕಿಶೋರ್ ಕಲ್ಪನೆಯಲ್ಲಿ ಈ ಸಿನಿಮಾ ಕಲರ್‍ಫುಲ್ ಆಗಿ ಮೂಡಿಬಂದಿದೆ. ಕನ್ನಡದ ಬಾವುಟವನ್ನು ಇಡೀ ಭಾರತೀಯ ಚಿತ್ರರಂಗದಲ್ಲಿ ಹಾರಿಸುತ್ತಿರುವ ನಿರ್ಮಾಪಕ ಧೀರ ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಅದ್ಧೂರಿ ಸಿನಿಮಾ ಕೂಡ ಇದಾಗಿದೆ. ಬರಿ ಪ್ರತಿಷ್ಟೆ ಅಷ್ಟೇ ಅಲ್ಲ ಪವರ್‍ಫುಲ್ ಎಂಟರ್‍ಟೈನ್ಮೆಂಟ್ ಪ್ಯಾಕೇಜ್ ಹೊತ್ತು ಬಂದಿದ್ದಾನೆ ಬೃಹಸ್ಪತಿ.
ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕತ್ವದ ಹಲವು ಸೂಪರ್ ಹಿಟ್ ಚಿತ್ರಗಳನ್ನ ನಿರ್ಮಾಣ ಮಾಡಿ ಗೆದ್ದಿದ್ದ ರಾಕ್‍ಲೈನ್ ಈಗ ರವಿಚಂದ್ರನ್ ಮಗನ ಸಿನಿಮಾ ನಿರ್ಮಿಸಿ ಗೆಲ್ಲಲು ಹೊರಟಿದ್ದಾರೆ. ಕಾಲಿವುಡ್‍ನ ಧನುಷ್ ನಟನೆಯ `ವಿಐಪಿ’ ಚಿತ್ರವನ್ನು ಕನ್ನಡ ನೇಟಿವಿಟಿಗೆ ತಕ್ಕಂತೆ ಬದಲಾಯಿಸಿ ಮನೋರಂಜನ್‍ಗೆ ಹೆಚ್ಚು ಸ್ಕೋಪ್ ಸಿಗುವಂತೆ ಈ ಚಿತ್ರ ಮಾಡಿದ್ದಾರೆ. ವಂಡರ್‍ಫುಲ್ ನಟನೆಯ ಜೊತೆಗೆ ಜಬರ್‍ದಸ್ತ್ ಡ್ಯಾನ್ಸ್, ಪವರ್‍ಫುಲ್ ಫೈಟಿಂಗ್ ಕೂಡ ಮಾಡಿದ್ದಾರೆ ಮರಿ ಕ್ರೇಜಿಸ್ಟಾರ್.
ಈ ಚಿತ್ರದ ಶಕ್ತಿಯೇ ಕಥೆ ಮತ್ತು ಸ್ಕ್ರೀನ್ ಪ್ಲೇ. ಈ ಜವಾಬ್ದಾರಿಯನ್ನು ನಿರ್ದೇಶಕ ನಂದಕಿಶೋರ್ ಹೊತ್ತಿದ್ದು ಟೀಸರ್ ಮತ್ತು ಟ್ರೇಲರ್‍ಗಳಲ್ಲಿ ಅದು ಎದ್ದು ಕಾಣುತ್ತಿದೆ. ಇನ್ನು ಸಂಗೀತದ ಬಗ್ಗೆ ಮಾತನಾಡದೇ ಮುಗಿಸಿದ್ರೇ ತಪ್ಪಾಗುತ್ತೆ. ವಿ.ಹರಿಕೃಷ್ಣ ತಮ್ಮ ಬತ್ತಳಿಕೆಯಿಂದ ಹೊಸ ಹೊಸ ರಾಗಗಳ ಬಾಣವನ್ನ ಇದರಲ್ಲಿ ಬಿಟ್ಟಿದ್ದಾರೆ. ಅದರಲ್ಲೂ ಪುನೀತ್ ರಾಜ್‍ಕುಮಾರ್ ಹಾಡಿರುವ ಹಾಡಂತೂ ಕೇಳುಗರ ಫೇವರೇಟ್ ಆಗಿದೆ.
ರಾಜ್ಯಾದ್ಯಂತ `ಬೃಹಸ್ಪತಿ’ಯ ಆಗಮನ ಭರ್ಜರಿಯಾಗಿಯೇ ಆಗಲಿದೆ. ಟ್ರೇಲರ್ ಹಾಗೂ ಹಾಡುಗಳಿಂದ ಗಮನ ಸೆಳೆದಿರುವ ಈ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಗಲಿದ್ದು, ಒಂದೇ ಸಾಲಿನಲ್ಲಿ ಹೇಳಿ ಮುಗಿಸಬೇಕೆಂದರೆ ಫ್ಯಾಮಿಲಿ ಕಮ್ ಮಾಸ್ ಪ್ರೇಕ್ಷಕರಿಗೆ ಈ ಚಿತ್ರ ಪರ್ಫೆಕ್ಟ್.