ನವದೆಹಲಿ: ಪಾದ ಪೂಜೆ ಸೇರಿದಂತೆ ಇತರೆ ಸನ್ಮಾನಗಳಿಂದ ಹೊಟ್ಟೆ ತುಂಬಲ್ಲ ಎಂದು ಪ್ರಧಾನಿ ಮೋದಿ ಅವರಿಂದ ಪಾದ ತೊಳೆಸಿಕೊಂಡ ಪೌರ ಕಾರ್ಮಿಕರು ಹೇಳಿದ್ದಾರೆ.
ಪಾದಪೂಜೆ ಮಾಡಿಸಿಕೊಂಡ ಪೌರ ಕಾರ್ಮಿಕರನ್ನು ಮಾಧ್ಯಮವೊಂದು ಸಂಪರ್ಕಿಸಿ ಅನುಭವಗಳನ್ನು ಬಿತ್ತರಿಸಿದೆ. ಕುಂಭ ಮೇಳದ ಕೊನೆಯ ದಿನ ಫೆಬ್ರವರಿ 24ರಂದು ಕಳೆದ ಐದು ನಿಮಿಷಗಳನ್ನು ಪೌರ ಕಾರ್ಮಿಕರು ಇನ್ನು ಮರೆತಿಲ್ಲ. ಕಣ್ಮುಚ್ಚಿದ್ರೆ ಸಾಕು ಪ್ರಧಾನಿಗಳು ನಮ್ಮ ಪಾದ ಪೂಜೆ ಮಾಡಿದ ದೃಶ್ಯಗಳು ಕಣ್ಮುಂದೆ ಬರುತ್ತವೆ. ಆದ್ರೆ ಪ್ರಧಾನಿಗಳ ಜೊತೆ ಮಾತನಾಡಲು ಅವಕಾಶ ಸಿಗಲಿಲ್ಲ. ಪ್ರಧಾನಿಗಳ ನಮ್ಮನ್ನು ಭೇಟಿ ಮಾಡಲಿದ್ದಾರೆ ಎಂಬ ವಿಷಯ ತಿಳಿದಾಗ, ಸಂಬಳ ಏರಿಕೆ, ಖಾಯಂ ನೌಕರಿ ಮತ್ತು ಸುಧಾರಿತ ಯಂತ್ರೋಪಕರಣಗಳನ್ನು ನೀಡಬೇಕೆಂದು ಮನವಿ ಮಾಡಲು ನಿರ್ಧರಿಸಲಾಗಿತ್ತು. ಆದ್ರೆ ಅಲ್ಲಿ ನಮಗೆ ಯಾವುದೇ ರೀತಿಯ ಅವಕಾಶಗಳು ಸಿಗಲಿಲ್ಲ ಎಂದು 35 ವರ್ಷದ ಹೋರಿಲಾಲ್ ಬೇಸರ ವ್ಯಕ್ತಪಡಿಸುತ್ತಾರೆ.
Advertisement
Advertisement
ಒಂದು ಕೋಣೆಯಲ್ಲಿ ನಮ್ಮನ್ನು ಸೇರಿಸಿದ ಅಧಿಕಾರಿಗಳು ಪ್ರಧಾನಿಗಳು ಬರಲಿದ್ದಾರೆ. ಬಂದ ಕೂಡಲೇ ಪಾದಪೂಜೆ ಮಾಡಲಿದ್ದಾರೆ ಎಂಬುದನ್ನು ತಿಳಿಸಿದ್ದರು. ಪಾದ ಪೂಜೆಗೂ ಮುನ್ನ ನಮಗೆ ಸ್ನಾನ ಮಾಡಿಸಲಾಗಿತ್ತು. ದೊಡ್ಡ ವ್ಯಕ್ತಿಗಳಿಂದ ಪಾದಗಳನ್ನು ತೊಳೆಸಿಕೊಂಡಾಗ ತುಂಬಾನೇ ಸಂಕೋಚವಾಯ್ತು ಎಂದು ಹೋರಿಲಾಲ್ ಹೇಳುತ್ತಾರೆ.
Advertisement
ಹೋರಿಲಾಲ್ ಕುಂಭ ಮೇಳ ಕೆಲಸಕ್ಕಾಗಿಯೇ ಕುಟುಂಬ ಸಮೇತರಾಗಿ ನವೆಂಬರ್ ನಲ್ಲಿ ವಾರಣಾಸಿಗೆ ಆಗಮಿಸಿದ್ದರು. ಪತ್ನಿ ರಾಜಕುಮಾರಿ (32), ಮಕ್ಕಳಾದ ಅಮಿತ್ (15), ಆಕಾಶ್ (12) ಮತ್ತು ಕಪಿಲ್ (10) ಎಲ್ಲರೊಂದಿಗೆ ಆಗಮಿಸಿ ಸ್ವಚ್ಛತೆಯ ಕೆಲಸದಲ್ಲಿ ತೊಡಗಿಕೊಂಡಿದ್ದರು. ಪತ್ನಿ ರಾಜಕುಮಾರಿ ಸಹ ಸ್ವಚ್ಛತಾ ಕೆಲಸದಲ್ಲಿ ತೊಡಗಿದ್ರೆ ಮಕ್ಕಳು ಶಾಲೆಗೆ ಹೋಗುತ್ತಾರೆ. ಪೌರ ಕಾರ್ಮಿಕನಾಗಿ ನಾಲ್ಕನೇ ಬಾರಿಗೆ ಹೋರಿಲಾಲ್ ಕುಂಭಮೇಳದಲ್ಲಿ ಭಾಗಿಯಾಗಿದ್ದರು.
Advertisement
ಮೋದಿ ಅವರು ದೊಡ್ಡ ವ್ಯಕ್ತಿ. ನಮ್ಮನ್ನ ಸನ್ಮಾನಿಸಿದ್ದಕ್ಕೆ ನಾವೆಲ್ಲ ಆಭಾರಿಯಾಗಿದ್ದೇವೆ. ಈ ಸನ್ಮಾನದಿಂದ ಜೀವನದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಮೊದಲು ಸ್ವಚ್ಛತೆಯ ಕೆಲಸವನ್ನೇ ಮಾಡುತ್ತಿದ್ದೂ, ಸದ್ಯ ಕೂಡ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಸನ್ಮಾನದ ಬದಲಾಗಿ ಖಾಯಂ ನೌಕರಿ ಅಥವಾ ಸಂಬಳ ಸೇರಿದಂತೆ ಜೀವನಕ್ಕೆ ಏನಾದ್ರೂ ಭದ್ರತೆ ನೀಡಿದ್ದರೆ ಚೆನ್ನಾಗಿರುತ್ತಿತ್ತು ಅಂತಾ ಹೋರಿಲಾಲ್ ಹೇಳಿದ್ದಾರೆ.
ಮತ್ತೋರ್ವ ಪೌರಕಾರ್ಮಿಕ ಪ್ಯಾರೇ ಲಾಲ್ ಪ್ರತಿಕ್ರಿಯಿಸಿ, ತಮ್ಮ ಬಿಡುವಿಲ್ಲದ ಸಮಯಲ್ಲಿ ಪ್ರಧಾನಿಗಳು ನಮ್ಮನ್ನು ಭೇಟಿಯಾಗಿದ್ದು ಸಂತಸ ತಂದಿದೆ. ಸನ್ಮಾನದ ಬಳಿಕ ಪ್ರಧಾನಿಗಳು ನಮ್ಮ ಸಂಬಳವನ್ನು ಹೆಚ್ಚಿಸಬೇಕಿತ್ತು. ಪ್ರತಿದಿನಕ್ಕೆ ಕನಿಷ್ಠ 500 ರೂ. ದಿನಗೂಲಿಯನ್ನು ಘೋಷಿಸಬೇಕಿತ್ತು. ಐದು ನಿಮಿಷದ ಕಾರ್ಯಕ್ರಮದಲ್ಲಿ ಪ್ರಧಾನಿಗಳ ಜೊತೆ ನಮಗೆ ಮಾತನಾಡುವ ಅವಕಾಶವೇ ಸಿಗಿಲಿಲ್ಲ ಎಂದರು.
ನಾನು ಕಳೆದ ಕೆಲವು ವರ್ಷಗಳಿಂದ ಈ ಕೆಲಸ ಮಾಡಿಕೊಂಡು ಬಂದಿದ್ದೇನೆ. ನನ್ನ ಪತಿಯೂ ಸಹ ಇದೇ ಉದ್ಯೋಗದಲ್ಲಿದ್ದಾರೆ. ಪ್ರಧಾನಿಗಳು ಭೇಟಿಯಾದಾಗ ನಮ್ಮನ್ನು ಖಾಯಂ ಮಾಡಿ ಎಂಬ ಬೇಡಿಕೆ ನನ್ನಲ್ಲಿತ್ತು. ಪಿಎಂ ಏನು ಬೇಕಾದರು ಮಾಡುವ ಶಕ್ತಿಯನ್ನು ಹೊಂದಿದ್ದಾರೆ. ಈ ಸನ್ಮಾನಗಳಿಂದ ದಿನನಿತ್ಯ ಹೊಟ್ಟೆ ತುಂಬಲ್ಲ ಎಂಬುವುದು ಪೌರ ಮಹಿಳೆ ಜ್ಯೋತಿ ಮಾತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv