ರಾಯಚೂರು: ಗುರುವಾರ ಮಾಧ್ಯಮದವರ ಜೊತೆ ಜಗಳವಾಡಿದ್ದ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಅವರು ಇಂದು ವಿದ್ಯಾರ್ಥಿಗಳ ಜೊತೆ ಜಗಳ ಮಾಡಿದ್ದಾರೆ. ಸಮಸ್ಯೆಗಳಿಗೆ ಸ್ಪಂದಿಸದೇ ತಾಳ್ಮೆ ಕಳೆದುಕೊಂಡು ವಿದ್ಯಾರ್ಥಿಗಳ ಮೇಲೆಯೇ ರೇಗಾಡಿದ್ದಾರೆ.
ಹಾಸ್ಟೆಲ್‍ಗಳ ಮೂಲಭೂತ ಸೌಲಭ್ಯಕ್ಕಾಗಿ ಆಗ್ರಹಿಸಿ ಸಿಂಧನೂರು ನಗರದಲ್ಲಿ ವಿದ್ಯಾರ್ಥಿಗಳು ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಎಸ್‍ಎಫ್‍ಐ(ಭಾರತ ವಿದ್ಯಾರ್ಥಿಗಳ ಒಕ್ಕೂಟ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಈ ವೇಳೆ ಕಚೇರಿಗೆ ಮುತ್ತಿಗೆ ಹಾಕದಂತೆ ಶಾಸಕ ನಾಡಗೌಡರು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು. ಇದಕ್ಕೆ ವಿದ್ಯಾರ್ಥಿಗಳು ಒಪ್ಪದೇ ಶಾಸಕರ ಜೊತೆಗೆ ವಿದ್ಯಾರ್ಥಿಗಳು ವಾಗ್ವಾದಕ್ಕಿಳಿದಿದ್ದಾರೆ.
ಆಗ ನಾಡಗೌಡರು ಕೂಡ ಸಿಟ್ಟಾಗಿ, ಸಮಸ್ಯೆ ಏನು ಎಂದು ತೋರಿಸಿದರೆ, ಅದನ್ನು ನೋಡಿದರೆ ಗೊತ್ತಾಗುತ್ತೆ. ನಾನೇ ಖುದ್ದಾಗಿ ಅಧಿಕಾರಿಗಳ ಜೊತೆ ಬರುತ್ತೇನೆ ಎಂದರು ನೀವು ಒಪ್ಪುತ್ತಿಲ್ಲ. ಈಗ ನಾನು ಹೊರಗೆ ಹೋಗುತ್ತಿದ್ದೇನೆ. ಸಂಜೆಯವರೆಗೂ ಬರುವುದಿಲ್ಲ. ಕಾಯೋದಾದರೆ ಕಾಯಿರಿ ನಿಮ್ಮ ಇಷ್ಟ ಎಂದಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ವಿದ್ಯಾರ್ಥಿಗಳು, ಇಷ್ಟು ದಿನ ನಿಮಗೆ ಸಮಸ್ಯೆ ಕಾಣಲಿಲ್ಲವೇ ಎಂದು ಪ್ರಶ್ನಿಸಿದಾಗ ಶಾಸಕರು ಪ್ರತಿಕ್ರಿಯೆ ನೀಡದೇ ಹೊರಟು ಹೋಗಿದ್ದಾರೆ.
ಗುರುವಾರ ಕೊಪ್ಪಳದ ಮುನಿರಾಬಾದ್‍ನಲ್ಲಿ ಮಾಧ್ಯಮಗಳ ಜೊತೆ ಕೂಡ ಶಾಸಕ ನಾಡಗೌಡರು ವಾಗ್ದಾಳಿ ನಡೆಸಿದ್ದರು. ತುಂಗಭದ್ರಾ ಜಲಾಶಯಕ್ಕೆ ವೆಂಕಟರಾವ್ ನಾಡಗೌಡ ಭೇಟಿ ಕೊಟ್ಟ ವೇಳೆ ಕಾಲುವೆ ಗೇಟ್ ದುರಸ್ಥಿ ಪ್ರಕರಣ ಬಗ್ಗೆ ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದ್ದಕ್ಕೆ ನಾಡಗೌಡರು ಸಿಟ್ಟಾಗಿದ್ದರು. ನಾನು ಪ್ರತಿಕ್ರಿಯೆ ಕೊಡಲ್ಲ ನೀನ್ಯಾರು ಕೇಳೋಕೆ? ದಿಸ್ ಇಸ್ ಮೈ ಡಿಸಿಶನ್ ಎಂದು ಹೇಳಿ ಕೆಂಡಾಮಂಡಲರಾಗಿದ್ದರು.