– ಸಿದ್ದರಾಮಯ್ಯಗೆ ‘ಕೈ’ ಹೈಕಮಾಂಡ್‍ನಿಂದ ಗೌಪ್ಯ ಸಂದೇಶ
ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಿಗ್ ಶಾಕ್ ಕೊಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಈ ನಿಟ್ಟಿನಲ್ಲಿ ಮಾಜಿ ಸಿದ್ದರಾಮಯ್ಯನವರಿಗೆ ಗೌಪ್ಯ ಸಂದೇಶ ವನ್ನು ಕಳುಹಿಸಿದೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸಿದ್ದರಾಮಯ್ಯ ಅವರ ಜೊತೆ ಖುದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಚರ್ಚೆ ಮಾಡಿದ್ದಾರೆ. ಮೇ 23 ಲೋಕಸಭಾ ಚುನಾವಣೆ ಫಲಿತಾಂಶ ಬರಲಿದೆ. ಹೀಗಾಗಿ ಅಲ್ಲಿಯವರೆಗೆ ಕಾಯಿರಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಬಳಿಕ ಅಧಿಕಾರ ಹಂಚಿಕೆ ನಡೆಯಲಿದೆ. ಈ ವೇಳೆ ಪ್ರಬಲ ಖಾತೆಗಾಗಿ ಬೇಡಿಕೆ ಇಡಲು ಹೈಕಮಾಂಡ್ ಪ್ಲಾನ್ ರೂಪಿಸಿದೆ. ಅಷ್ಟೇ ಅಲ್ಲದೆ ಸಿಎಂ ಸ್ಥಾನಕ್ಕೂ ಬೇಡಿಕೆ ಇಟ್ಟರೂ ಅಚ್ಚರಿ ಇಲ್ಲ ಎಂದು ಸಿದ್ದರಾಮಯ್ಯ ಆಪ್ತ ಬಳಗದಿಂದ ಸುದ್ದಿ ಕೇಳಿ ಬಂದಿದೆ.
ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ಖಾತೆಗಳಿಗೆ ಹೈಕಮಾಂಡ್ ಕೈ ಹಾಕುವ ಸಾಧ್ಯತೆಗಳಿವೆ. ಇತ್ತ ಸಿದ್ದರಾಮಯ್ಯ ಅವರ ಆಪ್ತರಾದ ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್ ಅವರಿಗೆ ಅದೃಷ್ಟ ಒಲಿಯಬಹುದು ಎನ್ನಲಾಗುತ್ತದೆ.
ಹೈಕಮಾಂಡ್ ಪ್ಲಾನ್ ಏನು?
ಅಧಿಕಾರ ಹಂಚಿಕೆ ಸೂತ್ರದ ಪ್ರಕಾರ ಸಿಎಂ ಸ್ಥಾನಕ್ಕೆ ಬೇಡಿಕೆ, ಡಿಸಿಎಂ ಪರಮೇಶ್ವರ್ ಅವರ ಬಳಿ ಇರುವ ಬೆಂಗಳೂರು ಅಭಿವೃದ್ಧಿ ಖಾತೆ ಕೈಬಿಟ್ಟು, ಸಿಎಂ ಕುಮಾರಸ್ವಾಮಿ ಬಳಿ ಇರುವ ಇಂಧನ ಖಾತೆ ಕೇಳುವುದು. ಚುನಾವಣೆ ವೇಳೆ ಪಕ್ಷದ ಬೆನ್ನಿಗೆ ನಿಂತ ಸಿದ್ದರಾಮಯ್ಯ ಅವರ ಆಪ್ತರಾದ ಕೆ.ಜೆ.ಜಾರ್ಜ್ ಹಾಗೂ ಎಂ.ಬಿ.ಪಾಟೀಲ್ ಅವರಿಗೆ ಪ್ರಬಲ ಖಾತೆ ನೀಡುವುದು.
ಹೈಕಮಾಂಡ್ ಸಿಟ್ಟಿಗೆ ಕಾರಣವೇನು?
ಲೋಕಸಭಾ ಚುನಾವಣೆ ವೇಳೆ ಸಿಎಂ ಕುಮಾರಸ್ವಾಮಿ ಅವರು ಪ್ರಚಾರಕ್ಕೆ ಕೈಕೊಟ್ಟಿದ್ದಾರೆ. ಡಿ.ಕೆ.ಶಿವಕುಮಾರ್ ಜಲ ಸಂಪನ್ಮೂಲ ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಲಾಗಿದೆ. ಪ್ರಬಲ ಖಾತೆಯನ್ನು ನೀಡಿದ್ದರೂ ಅವರು ಚುನಾವಣಾ ವೆಚ್ಚಕ್ಕೆ ನೆರವು ನೀಡಿಲ್ಲ. ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡದೇ ಉದ್ದೇಶಪೂರ್ವಕವಾಗಿ ಸಿಎಂ ಕಡೆಗಣಿಸಿರುವ ವಿಚಾರ ಹೈಕಮಾಂಡ್ ಸಿಟ್ಟಿಗೆ ಕಾರಣ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.