ಧಾರವಾಡ: ಅಪಘಾತದಲ್ಲಿ ಕೈ ಕಳೆದುಕೊಂಡರೆ ಅಧಿಕ ಮಂದಿ ಧೃತಿಗೆಡುವುದೇ ಹೆಚ್ಚು. ಆದರೆ ಇಲ್ಲೊಬ್ಬರು ಒಂದೇ ಕೈಯಲ್ಲಿ ಆಟೋ ಓಡಿಸಿ ಜೀವನ ನಡೆಸುತ್ತಿದ್ದಾರೆ.
ಜಿಲ್ಲೆಯ ಕೊಳಿಕೇರಿಯ ನಿವಾಸಿ ಅಮಜದ್ ಹುನಗುಂದ ಒಂದು ಕೈಯಲ್ಲಿ ಆಟೋ ಓಡಿಸುವ ಮೂಲಕ ಧಾರವಾಡದ ಇತರರಿಗೆ ಪ್ರೇರಕರಾಗಿದ್ದಾರೆ. ಇವರು 8 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಒಂದು ಕೈಯನ್ನು ಕಳೆದುಕೊಂಡಿದ್ದರು. ಆದರೂ ಛಲ ಬಿಡದೆ ಆಟೋ ಓಡಿಸಿ ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ.
Advertisement
ಒಂದೇ ಕೈಯಲ್ಲಿ ಆಟೋ ಓಡಿಸಲು ಕಷ್ಟವಾಗುವ ಕಾರಣ ಆಟೋಗೆ ಕಾಲಿನಲ್ಲಿ ಎಕ್ಸಲೇಟರ್ ಮಾಡಿಸಲಾಗಿದೆ. ಪ್ರತಿ ದಿನ 200 ರಿಂದ 400 ರೂ. ವರೆಗೆ ದುಡಿಮೆ ಮಾಡಿ ಜೀವನ ನಡೆಸುತ್ತಿದ್ದಾರೆ. ಇವರಿಗೆ ಮನೆಯಲ್ಲಿ ತಂದೆ, ತಾಯಿ, ಪತ್ನಿ ಸೇರಿದಂತೆ ಇಬ್ಬರು ಮಕ್ಕಳು ಇದ್ದಾರೆ. ಆಟೋ ಓಡಿಸಿಯೇ ಇವರೆಲ್ಲರನ್ನು ಸಾಕುತ್ತಿದ್ದಾರೆ. ಆಟೋದಲ್ಲಿ ಕುಳಿತುಕೊಳ್ಳುವ ಕೆಲ ಪ್ರಯಾಣಿಕರು ಒಂದೇ ಕೈಯಲ್ಲಿ ಆಟೋ ಓಡಿಸುವುದನ್ನ ನೋಡಿ ಬೆರಗಾಗಿದ್ದು ಕೂಡಾ ಇದೆ.
Advertisement
ನನಗೆ ಈ ರೀತಿ ಆಗಿ 8 ವರ್ಷ ಆಯಿತು. ನನಗೆ ಆಟೋ ಓಡಿಸುತ್ತಿರುವುದರಿಂದ ಯಾವುದೇ ಸಮಸ್ಯೆ ಇಲ್ಲ. ಕೋರ್ಟ್‍ನಿಂದ ಅನುಮತಿ ಪಡೆದಿದ್ದೇನೆ. ಇಡೀ ಸಂಸಾರಕ್ಕೆ ನಾನೊಬ್ಬನೇ ಆಧಾರ. ಆದ್ದರಿಂದ ನಾನು ಆಟೋ ಓಡಿಸುತ್ತಿದ್ದೇನೆ. ಪ್ರಯಾಣಿಕರನ್ನು ಮನೆಗೆ ಬಿಟ್ಟಾಗ 100-200 ಕೊಡಲು ಬರುತ್ತಾರೆ. ಆದರೆ ನಾನು ದುಡಿದು ಸಂಪಾದನೆ ಮಾಡುತ್ತೇನೆ, ನನಗೆ ಬೇಡ ಎಂದು ಬರುತ್ತೇನೆ ಎಂದು ಅಮಜದ್ ಹುನಗುಂದ ಹೇಳಿದರು.