ಮಂಡ್ಯ: ಜಿಲ್ಲೆಯಲ್ಲಿ ಲೀಥಿಯಂ ನಿಕ್ಷೇಪ ಪತ್ತೆಯಾಗಿರುವ ಬೆನ್ನಲ್ಲೆ ಇದೀಗ ಮತ್ತೊಂದು ಅಮೂಲ್ಯವಾದ ಖನಿಜ ಸಂಪನ್ಮೂಲ ಇದೆ ಎಂದು ಹೇಳಲಾಗುತ್ತಿದೆ.
ಸದ್ಯ ಕೆಲವು ದಿನಗಳ ಹಿಂದೆಯಷ್ಟೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅಲ್ಲಾಪಟ್ಟಣ ಹಾಗೂ ಮರಳಗಾಲ ಪ್ರದೇಶದಲ್ಲಿ ಎಲೆಕ್ಟ್ರಿಕಲ್ ವಾಹನ ತಯಾರಿಕೆಗೆ ಬೇಕಾದ ಅಪರೂಪದ ಲೀಥಿಯಂ ನಿಕ್ಷೇಪ ಪತ್ತೆಯಾಗಿತ್ತು. ಈಗಾಗಲೇ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ವಿಜ್ಞಾನಿಗಳ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಇದೀಗ ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಅತ್ಯಮೂಲ್ಯವಾದ ಖನಿಜ ಸಂಪತ್ತಾದ ಚಿನ್ನದ ನಿಕ್ಷೇಪ ಇರುವುದು ಬೆಳಕಿಗೆ ಬಂದಿದೆ. ಅದೂ ಸಹ ಶ್ರೀರಂಗಪಟ್ಟಣ ತಾಲೂಕಿನಲ್ಲೇ ಇದೆ ಎನ್ನಲಾಗುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಹುಂಜನಕೆರೆ ಅರಣ್ಯ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳಿಗೆ ಬೇಕಾಗಿರುವ ಲೀಥಿಯಂ ನಿಕ್ಷೇಪ ಮಂಡ್ಯದಲ್ಲಿ ಪತ್ತೆ
Advertisement
Advertisement
ಬ್ರಿಟಿಷ್ ಕಾಲದಲ್ಲೇ ಸಂಶೋಧನೆ:
ಇಷ್ಟು ದಿನ ಜನರು ಹುಂಜನಕೆರೆ ಅರಣ್ಯ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇದೆ ಎಂದು ಮಾತಾನಾಡಿಕೊಳ್ಳುತ್ತಿದ್ದರು. ಹೀಗಾಗಿಯೇ ಈ ಅರಣ್ಯ ಪ್ರದೇಶವನ್ನು ಬಂಗಾರದ ಗುಡ್ಡ ಅಂತಾನೇ ಕರೆಯುತ್ತಿದ್ದರು. ಇದೀಗ ಈ ಅರಣ್ಯ ಪ್ರದೇಶದಲ್ಲಿ ಮೂರು ಗುಹೆಗಳು ಪತ್ತೆಯಾಗಿವೆ. ಅವು ಕೂಡ ಬ್ರಿಟಿಷ್ ಕಾಲದಲ್ಲಿ ಕೊರೆಯಲಾಗಿರುವ ಗುಹೆಗಳಾಗಿದ್ದು, ಈ ಗುಹೆಗಳನ್ನು ಚಿನ್ನದ ನಿಕ್ಷೇಪದ ಕುರಿತು ಸಂಶೋಧನೆ ಮಾಡಲು ಕೊರೆಯಲಾಗಿದೆ ಎನ್ನಲಾಗುತ್ತಿದೆ. ಬ್ರಿಟಿಷ್ ವಿಜ್ಞಾನಿಗಳು 1882ರಿಂದ 1913ರವರೆಗೆ ಈ ಸ್ಥಳದಲ್ಲಿ ಚಿನ್ನದ ನಿಕ್ಷೇಪದ ಕುರಿತು ಸಂಶೋಧನೆ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಈ ಸಂಶೋಧನೆ ಬಗ್ಗೆ ಮಂಡ್ಯ ಗೆಜೆಟ್‍ನಲ್ಲೂ ಸಹ ಉಲ್ಲೇಖ ಆಗಿರುವುದು ಗಮನಾರ್ಹವಾಗಿದೆ.
Advertisement
Advertisement
ಬಂಗಾರದ ಗುಡ್ಡ:
ಇಂದಿಗೂ ಸಹ ಹುಂಜನಕೆರೆ ಅರಣ್ಯ ಪ್ರದೇಶವನ್ನು ಜನರು ಬಂಗಾರದ ಗುಡ್ಡ ಎಂದೇ ಕರೆಯುತ್ತಾರೆ. ಇಲ್ಲಿ ಚಿನ್ನಕ್ಕಾಗಿ ನಡೆದ ಸಂಶೋಧನೆಯಿಂದಾಗಿ ಜನರು ಅಂದಿನಿಂದ ಇಂದಿನವರೆಗೂ ಇಲ್ಲಿ ಅಪಾರ ಪ್ರಮಾಣದ ಚಿನ್ನ ಇದೆ ಎನ್ನುವ ಕಾರಣಕ್ಕೆ ಬಂಗಾರದ ಗುಡ್ಡ ಎನ್ನುತ್ತಾರೆ. ಈ ಪ್ರದೇಶದ ನಕಾಶೆಯಲ್ಲೂ ಸಹ ಬಂಗಾರದ ಗಣಿ ಎಂದೇ ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಅಂದು ಬ್ರಿಟಿಷ್ ವಿಜ್ಞಾನಿಗಳು ನಡೆಸಿದ ಸಂಶೋಧನೆಯ ಪಳೆಯುಳಿಕೆಗಳು ಇಂದಿಗೂ ಸಹ ಇರುವುದು ಅಚ್ಚರಿಯಾಗಿದೆ. ಸದ್ಯ ಇಲ್ಲಿರುವ ಮೂರು ಗುಹೆಗಳು ಮುಚ್ಚಿಕೊಂಡಿದ್ದು, ಗುಹೆಗಳ ಸ್ವಲ್ಪ ಭಾಗ ಮಾತ್ರ ಕಾಣಲು ಸಿಗುತ್ತಿದೆ.
ಮಂಡ್ಯ ಇಷ್ಟು ದಿನ ಸಕ್ಕರೆ ನಗರಿ ಎಂದು ಕರೆಯಲ್ಪಡುತ್ತಿತ್ತು. ಆದರೆ ಇದೀಗ ಮಂಡ್ಯ ಜಿಲ್ಲೆಯಲ್ಲಿ ಲೀಥಿಯಂ ನಿಕ್ಷೇಪ ಪತ್ತೆ ಬೆನ್ನಲ್ಲೆ ಚಿನ್ನದ ನಿಕ್ಷೇಪದ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಈ ಚಿನ್ನದ ನಿಕ್ಷೇಪದ ಬಗ್ಗೆ ಸರ್ಕಾರ ಸಂಶೋಧನೆ ನಡೆಸಿ ಇಲ್ಲಿ ಚಿನ್ನ ಇರುವುದು ನಿಜನಾ? ಇದ್ದರು ಸಹ ಎಷ್ಟು ಪ್ರಮಾಣದಲ್ಲಿ ಇದೆ? ಹಾಗೂ ದೇಶಕ್ಕೆ ಎಷ್ಟರ ಮಟ್ಟಿಗೆ ಪ್ರಯೋಜನವಾಗುತ್ತೆ ಎನ್ನುವುದನ್ನ ಪತ್ತೆ ಮಾಡಬೇಕಿದೆ.