ಇಮ್ರಾನ್‌ ಖಾನ್‌ ಬೆನ್ನಲ್ಲೇ ಪಾಕ್‌ ವಿದೇಶಾಂಗ ಮಾಜಿ ಸಚಿವ ಅರೆಸ್ಟ್‌ – ಅಜ್ಞಾತ ಸ್ಥಳಕ್ಕೆ ಶಿಫ್ಟ್‌

Public TV
1 Min Read
Shah Mehmood Qureshi

ಇಸ್ಲಾಮಾಬಾದ್‌: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ಬಂಧನ ಬೆನ್ನಲ್ಲೇ, ಅವರ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿದ್ದ ಮಖ್ದೂಮ್‌ ಶಾ ಮೆಹಮೂದ್‌ ಖುರೇಷಿ (Shah Mehmood Qureshi) ಅವರನ್ನು ಇಸ್ಲಾಮಾಬಾದ್‌ ಪೊಲೀಸರು ಬಂಧಿಸಿದ್ದಾರೆ.

ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಉಪಾಧ್ಯಕ್ಷರೂ ಆಗಿರುವ ಖುರೇಷಿ ಅವರನ್ನು ಪೊಲೀಸರು ಗುರುವಾರ ಬಂಧಿಸಿ ಅಜ್ಞಾತ ಸ್ಥಳಕ್ಕೆ ವರ್ಗಾಯಿಸಿದ್ದಾರೆ ಎಂದು ಪಕ್ಷವು ಟ್ವೀಟ್‌ ಮಾಡಿ ತಿಳಿಸಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭುಗಿಲೆದ್ದ ಪ್ರತಿಭಟನೆ – ಸಾವಿರ ಮಂದಿ ಬಂಧನ

Shah Mehmood Qureshi

ಖುರೇಷಿಯನ್ನು ಇಸ್ಲಾಮಾಬಾದ್‌ನ ಗಿಲ್ಗಿಟ್-ಬಾಲ್ಟಿಸ್ತಾನ್ ಹೌಸ್‌ನಿಂದ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಪಂಜಾಬ್ ಮತ್ತು ಖೈಬರ್ ಪಖ್ತುಂಖ್ವಾದಲ್ಲಿ ನಡೆದ ಗಲಭೆ ಮತ್ತು ಬೆಂಕಿ ಹಚ್ಚಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಖುರೇಷಿ ಅವರನ್ನು ಬಂಧಿಸಲಾಗಿದೆ.

ಬಂಧನಕ್ಕೂ ಮುನ್ನ ಖುರೇಷಿ ತನ್ನ ಪಕ್ಷದ ಕಾರ್ಯಕರ್ತರಿಗೆ, “ದೇಶದಲ್ಲಿ ನಿಜವಾದ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಮುಂದುವರಿಸುವಂತೆ” ಕರೆ ನೀಡಿದ್ದರು. “ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಪಶ್ಚಾತ್ತಾಪ ಪಡುವ ಅಗತ್ಯವೂ ಇಲ್ಲ” ಎಂಬ ಸಂದೇಶ ರವಾನಿಸಿದ್ದರು. ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಅವರ ಬಂಧನದ ನಂತರ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಅಪಾರ ಸಾವುನೋವುಗಳಾಗಿದ್ದು, ಈ ಬಗ್ಗೆ ಖುರೇಷಿ ಆಘಾತ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್ ಅರೆಸ್ಟ್ – ಸೇನಾ ಕಚೇರಿ ಮೇಲೆ ಬೆಂಕಿ, ದೇಶಾದ್ಯಂತ ಇಂಟರ್‌ನೆಟ್ ಬಂದ್

Imran Khan 1

ಪಿಟಿಐ ಹಿರಿಯ ನಾಯಕ ಫವಾದ್ ಚೌಧರಿ ಅವರನ್ನು ಬುಧವಾರ ಇಸ್ಲಾಮಾಬಾದ್‌ನ ಸುಪ್ರೀಂ ಕೋರ್ಟ್ (ಎಸ್‌ಸಿ) ಹೊರಗೆ ಬಂಧಿಸಲಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಪಿಟಿಐ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ನಡುವೆಯೇ ಈ ಬೆಳವಣಿಗೆ ನಡೆದಿದೆ. ಫವಾದ್ ಚೌಧರಿ ಅವರು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನಲ್ಲಿ ಬೆಳಗ್ಗೆ 11 ಗಂಟೆಯಿಂದ (ಸ್ಥಳೀಯ ಕಾಲಮಾನ) ಹಾಜರಾಗಿದ್ದರು.

ಭ್ರಷ್ಟಾಚಾರ ಪ್ರಕರಣಗಳಲ್ಲಿ ಈಚೆಗೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಬಂಧಿಸಲಾಗಿತ್ತು. ಪಾಕಿಸ್ತಾನ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯವು ಖಾನ್‌ ಅವರನ್ನು 8 ದಿನಗಳ ಕಾಲ ಎನ್‌ಎಬಿ ವಶಕ್ಕೆ ನೀಡಿ ಆದೇಶಿಸಿದೆ. ಇದನ್ನೂ ಓದಿ: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅರೆಸ್ಟ್‌

Share This Article