ತಿರುವನಂತಪುರಂ: ಬಿಜೆಪಿ ಹಿಂದುತ್ವದ ಹೆಸರನಲ್ಲಿ ತಾಲಿಬಾನ್ ಆರಂಭಿಸಿದೆಯಾ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರಶ್ನಿಸಿಸುವ ಮೂಲಕ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ಬಿಜೆಪಿ ನಾಯಕರು ನನ್ನನ್ನು ಪಾಕಿಸ್ತಾನಕ್ಕೆ ಹೋಗುವಂತೆ ಹೇಳುತ್ತಾರೆ. ನನಗೆ ಪಾಕಿಸ್ತಾನಕ್ಕೆ ಹೋಗು ಅಂತಾ ಹೇಳುವ ಅಧಿಕಾರ ನೀಡಿದವರು ಯಾರು? ನಾನು ಅವರಂತೆ ಹಿಂದೂ ಅಲ್ಲವೇ? ನನಗೆ ಭಾರತದಲ್ಲಿ ಬದುಕುವ ಹಕ್ಕಿಲ್ಲವೇ? ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಈ ಹಿಂದೆ ಶಶಿ ತರೂರ್ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ರೆ, ಭಾರತ ಹಿಂದೂ ಪಾಕಿಸ್ತಾನ ಆಗಲಿದೆ ಅಂತಾ ಹೇಳಿದ್ದರು. ಈ ಹೇಳಿಕೆ ಹಿನ್ನೆಲೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ನಾಯಕನ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ನಾಯಕರು ಪಟ್ಟುಹಿಡಿದಿದ್ದರು. ಇನ್ನೂ ಕೆಲ ನಾಯಕರು ಶಶಿ ತರೂರ್ ಬೇಕಾದರೆ ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳುವ ಮೂಲಕ ಆಕ್ರೋಶವನ್ನು ಹೊರ ಹಾಕಿದ್ದರು.
ಬಿಜೆಪಿಯು ಬರುವ ಲೋಕಸಭಾ ಚುನಾವಣೆಯಲ್ಲಿ ಮರು ಆಯ್ಕೆಯಾಗಿ ಅಧಿಕಾರಕ್ಕೆ ಬಂದರೆ, ನಮ್ಮ ಪ್ರಜಾಪ್ರಭುತ್ವದ ಎಲ್ಲ ಅಂಶಗಳನ್ನು ಭಾರತದ ಸಂವಿಧಾನದಿಂದ ತೆಗೆದು ಹಾಕುತ್ತಾರೆ. ತಮಗೆ ಬೇಕಾದಂತೆ ಮುಂದಿನ ದಿನಗಳಲ್ಲಿ ಹೊಸ ಸಂವಿಧಾನವನ್ನು ಸೃಷ್ಟಿಸುತ್ತಾರೆ ಎಂದು ಶಶಿ ತರೂರ್ ಭವಿಷ್ಯ ನುಡಿದಿದ್ದರು.
ಪಾಕಿಸ್ತಾನದಲ್ಲಿ ಭಯೋತ್ಪಾದನೆ ಹೇಗೆ ಉಗ್ರ ಸ್ವರೂಪ ಪಡೆದಿದೆಯೋ, ಅದೇ ರೀತಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಧರ್ಮ ಭಯೋತ್ಪಾದನೆಯನ್ನು ನಡೆಸುತ್ತದೆ. ಹಿಂದೂಗಳನ್ನು ಮಾತ್ರ ಪರಿಗಣಿಸಿ ಇತರೇ ಅಲ್ಪಸಂಖ್ಯಾತ ಪ್ರಜೆಗಳನ್ನು ನಿರ್ಲಕ್ಷಿಸುತ್ತದೆ ಎಂಬ ಅರ್ಥದಲ್ಲಿ `ಹಿಂದೂ ಪಾಕಿಸ್ತಾನ’ ಎಂದು ವ್ಯಂಗ್ಯವಾಗಿ ಶಶಿ ತರೂರ್ ಮಾತನಾಡಿದ್ದರು.
ಭಾರತವು ಬಿಜೆಪಿ ಸಾರಥ್ಯದಲ್ಲಿ ಪ್ರಗತಿ ಕಾಣುತ್ತಿರುವುದನ್ನು ಕಾಂಗ್ರೆಸ್‍ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ಅದಕ್ಕಾಗಿ ಅಧಿಕಾರ ಪಡೆಯಲು ಯಾವ ಮಟ್ಟಕ್ಕಾದರು ಇಳಿಯಲು ಕಾಂಗ್ರೆಸ್ ನಾಯಕರು ಸಿದ್ಧರಿದ್ದಾರೆ. ಅದ್ದರಿಂದ ಶಶಿ ತರೂರ್ ಮುಖಕ್ಕೆ ಯಾರು ಮಸಿ ಹಚ್ಚುತ್ತಾರೋ ಅವರಿಗೆ 11 ಸಾವಿರ ರೂ.ಗಳು ಬಹುಮಾನ ನೀಡಲಾಗುತ್ತದೆ ಎಂದು ಅಲಿಗಢ್ ನ ಮುಸ್ಲಿಂ ಯುವ ಸಂಘಟನೆಯ ಅಧ್ಯಕ್ಷ ಮೊಹಮದ್ ಅಮೀರ್ ರಶೀದ್ ಆಕ್ರೋಶ ವ್ಯಕ್ತಪಡಿಸಿದ್ದರು.