ನೈರೋಬಿ: ಕೀನ್ಯಾದ ರಿಫ್ಟ್ ವ್ಯಾಲಿಯ ಸೊಲೈ ಪಟ್ಟಣದ ಬಳಿ ಭಾರತೀಯ ಮೂಲದ ಮನ್ಸೂಕಲ್ ಪಟೇಲ್ ನಿರ್ಮಿಸಿದ್ದ ಅಣೆಕಟ್ಟು ಒಡೆದು 47 ಮಂದಿ ಮೃತಪಟ್ಟಿದ್ದಾರೆ.
ಮನ್ಸೂಕಲ್ ಪಟೇಲ್ ಅವರ ಒಡೆತನದ ಮೂರು ಜಲಾಶಯಗಳಲ್ಲಿ ಇದು ಒಂದಾಗಿದೆ. ಈ ಜಲಾಶಯದ ನೀರನ್ನು ಮೀನುಗಾರಿಕೆ ಹಾಗೂ ಕೃಷಿಗಾಗಿ ಬಳಸಲಾಗುತ್ತಿತ್ತು. ಕೀನ್ಯಾದಿಂದ ಯುರೋಪ್‍ಗೆ ಹೆಚ್ಚಿನ ಪ್ರಮಾಣದಲ್ಲಿ ಹೂವುಗಳು ರಫ್ತಾಗುತ್ತಿತ್ತು. ಅಲ್ಲದೇ ಪಟೇಲ್ ಅವರು ಜರ್ಮನಿ ಹಾಗೂ ನೆದರ್ಲೆಂಡ್‍ಗೆ ಹೂವುಗಳನ್ನು ರಫ್ತು ಮಾಡುತ್ತಿದ್ದರು ಎನ್ನಲಾಗುತ್ತಿದೆ.
Advertisement
ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಡ್ಯಾಮ್ ಒಡೆದಿದ್ದು, ನೀರು ಹಾಗೂ ಕೆಸರು ಸಮೀಪದ ಎರಡು ಹಳ್ಳಿಗಳಿಗೆ ನುಗ್ಗಿದೆ. ಹೀಗಾಗಿ ಅಲ್ಲಿನ ನೂರಾರು ಮನೆಗಳು ಹಾನಿಯಾಗಿವೆ. ಅಲ್ಲದೇ ವಿದ್ಯುತ್ ವ್ಯತ್ಯಯವಾಗಿದ್ದು, ನೀರಿನಲ್ಲಿ ಕಾಣೆಯಾದ ವ್ಯಕ್ತಿಗಳಿಗಾಗಿ ಹುಡುಕಾಟ ನಡೆದಿದೆ. 47 ಜನರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದ್ದು, ಇನ್ನೂ ಅನೇಕ ಜನರು ಕಾಣೆಯಾಗಿದ್ದಾರೆ.
Advertisement
ಕೀನ್ಯಾ ರೆಡ್ ಕ್ರಾಸ್ ಮತ್ತು ನಾಯಕರು, ದೇಶದ ವಿಪತ್ತು ನಿರ್ವಹಣಾ ತಂಡ ಗುರುವಾರ ಬೆಳಿಗ್ಗೆಯಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ರೋಂಗೈ ಪೊಲೀಸ್ ಮುಖ್ಯಸ್ಥ ಜೋಸೆಫ್ ಕಿಯಾಕೊ ತಿಳಿಸಿದ್ದಾರೆ.
Advertisement
36ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು ಎರಡು ಕಿ.ಮೀ. ವಿಸ್ತೀರ್ಣದವೆರೆಗೆ ನೀರು ಆವರಿಸಿದ್ದು, ಅಲ್ಲಿನ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಮಾರ್ಚ್‍ನಿಂದ ಇಲ್ಲಿಯವರೆಗೂ ಕೀನ್ಯಾದಲ್ಲಿ ನಡೆದ ಪ್ರವಾಹ ಮತ್ತು ಜಲ ಸಂಬಂಧಿ ದುರಂತದಲ್ಲಿ 170 ಮಂದಿ ಮೃತಪಟ್ಟಿದ್ದಾರೆ. ಪ್ರವಾಹದ ಹಿನ್ನೆಲೆಯಲ್ಲಿ 2,25,436 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಸೇನಾ ಹೆಲಿಕಾಪ್ಟರ್‍ಗಳು ಮತ್ತು ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಕೀನ್ಯಾ ಸರಕಾರ ತಿಳಿಸಿದೆ.
ಸಂತ್ರಸ್ತರಿಗೆ 4 ಮಿಲಿಯನ್ ಯುರೋಗಳನ್ನು ಪರಿಹಾರವಾಗಿ ನೀಡಬೇಕು ಎಂದು ರೆಡ್ ಕ್ರಾಸ್ ಸಂಸ್ಥೆ ಮನವಿ ಮಾಡಿದೆ.