ಮಡಿಕೇರಿ: ಕೊಡಗು.. ಹೇಳಿಕೇಳಿ ರಾಜ್ಯದ ಪ್ರಕೃತಿ ಪ್ರವಾಸೋದ್ಯಮದ ಹಾಟ್ ಸ್ಪಾಟ್ ಆಗಿದೆ. ಕಣ್ಣು ಹಾಯಿಸಿದಲ್ಲೆಲ್ಲಾ ಕಾಣೋ ಹಚ್ಚ ಹಸಿರು, ಮುಗಿಲಿಗೆ ಮುತ್ತಿಡುವಂತೆ ಕಾಣೋ ಗಿರಿಶಿಖರಗಳು, ಹೋದಲ್ಲೆಲ್ಲಾ ಸದ್ದುಮಾಡೋ ಜಲರಾಶಿಗಳು ಕಣ್ಮನಸೂರೆಗೊಳ್ಳುತ್ತವೆ.
ಮುಂಗಾರು ಮಳೆ ಆರಂಭವಾದ್ರೆ ಸಾಕು, ಮುಗಿಲ ಮರೆಯಿಂದ ಧುಮ್ಮಿಕ್ಕೋ ಜಲಪಾತಗಳು ನಿಸರ್ಗದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಇಂತಹ ಸುಂದರ ಜಲಪಾತಗಳ ಸಾಲಿಗೆ ಸೇರುವ ಚೆಲವಾರ ಫಾಲ್ಸ್ ನ ವಯ್ಯಾರ ಪ್ರಕೃತಿ ಪ್ರಿಯರನ್ನು ಸೆಳೆಯುತ್ತಿದ್ದು, ಮುಂಗಾರಿನ ಅಭಿಷೇಕ್ಕೆ ಮೈದುಂಬಿ ಹರಿಯುತ್ತಾ ಕಣ್ಣು ಕುಕ್ಕುತ್ತಿದೆ.
Advertisement
Advertisement
ಕೊಡಗಿನ ಸುಂದರ ಜಲಪಾತಗಳಲ್ಲೊಂದಾದ ಚೆಲವಾರ ಫಾಲ್ಸ್ ಮಳೆಗಾಲದಲ್ಲಿ ಬೋರ್ಗರೆಯುತ್ತಾ ಮುಗಿಲೆತ್ತರದಿಂದ ಧುಮ್ಮಿಕ್ಕೋ ಜಲಪಾತದ ಸೌಂದರ್ಯ ಸವಿಯೋದು ಕಣ್ಣಿಗೆ ಹಬ್ಬವಾಗಿದೆ. ಇನ್ನು ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಂಡು ನಲಿಯುವ ಈ ಜಲರಾಣಿ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ವಿಸ್ತಾರವಾದ ಗುಡ್ಡದ ಮೇಲಿಂದ ಹಾಲು ಚೆಲ್ಲಿದಂತೆ ಧರೆಗಿಳಿಯೋ ಜಲರಾಶಿ ನೋಡೋದೆ ಅಂದ. ರಾಜ್ಯದ ವಿವಿಧೆಡೆಗಳಿಂದ ಇಲ್ಲಿಗೆ ಬರುವ ಪ್ರವಾಸಿಗರು ಜಲಪಾತದ ಸೊಬಗು ನೋಡಿ ಮೈ ಮರೆಯುತ್ತಾರೆ. ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಂಡು ಎಂಜಾಯ್ ಮಾಡುತ್ತಾರೆ.
Advertisement
ವಿರಾಜಪೇಟೆ ತಾಲೂಕಿನ ಕಕ್ಕಬ್ಬೆ ಸಮೀಪದ ಬೆಟ್ಟಗುಡ್ಡಗಳ ನಡುವಿನಿಂದ ಧುಮ್ಮಿಕ್ಕುವ ಈ ಜಲಪಾತ ಕೊಡಗಿನ ಪ್ರಮುಖ ಜಲಪಾತಗಳಲ್ಲೊಂದು. ಹಚ್ಚಹಸಿರ ನಡುವಿನಿಂದ ಕಾರ್ಗಲ್ಲನ್ನು ಸೀಳಿಕೊಂಡು ಧುಮುಕುವ ಜಲಪಾತ, ಕಷ್ಟಪಟ್ಟು ಬರೋ ಪ್ರವಾಸಿಗರಿಗೆ ಲಾಸ್ ಮಾಡೋದಿಲ್ಲ. ಫಾಲ್ಸ್ ಬಗ್ಗೆ ಮಾಹಿತಿಯಿಲ್ಲದೆ ಕೆಲ ಪ್ರವಾಸಿಗರು ಅಪಾಯದ ಸ್ಥಳದಲ್ಲಿ ನೀರಿಗಿಳಿದು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.
Advertisement
ಮಳೆಯ ನಡುವೆಯೂ ಇಲ್ಲಿಗೆ ಬರುವ ಪ್ರವಾಸಿಗರು ಕಷ್ಟದ ಹಾದಿಯಲ್ಲಿ ಸಾಗಿ ಜಲಪಾತವನ್ನು ಕಣ್ತುಂಬಿಕೊಳ್ಳುತ್ತಾರೆ. ನಿತ್ಯವೂ ನೂರಾರು ಜನರನ್ನು ತನ್ನತ್ತ ಸೆಳೆಯೋ ಫಾಲ್ಸ್ ಗೆ ತೆರಳೋಕೆ ಇರೋದು ಖಾಸಗಿ ದಾರಿ. ಹಾಗಾಗಿ ಇಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು, ಜಲಪಾತದ ನೀರಲ್ಲಿ ಇಳಿದರೆ ಅಪಾಯವಿದ್ದು, ಅಲ್ಲಿ ಎಚ್ಚರಿಕೆ ಫಲಕಗಳನ್ನೂ ಅಳವಡಿಸಬೇಕು. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನೋದು ಜನರ ಒತ್ತಾಯವಾಗಿದೆ. ಸೌಂದರ್ಯದ ನಡುವೆ ಅಪಾಯವನ್ನೂ ಮಡಿನಲ್ಲಿಟ್ಟುಕೊಂಡಿರುವ ಜಲಪಾತಕ್ಕೆ ಸೂಕ್ತ ಕಾಯಕಲ್ಪ ಮಾಡಿದರೆ ಮತ್ತಷ್ಟು ಜನರನ್ನ ಸೆಳೆಯಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಪಶ್ಚಿಮ ಘಟ್ಟದ ತಪ್ಪಲಿನ ಪುಟ್ಟ ಜಿಲ್ಲೆ ಕೊಡಗು ತನ್ನ ಪ್ರಕೃತಿ ಸೌಂದರ್ಯದಿಂದ ಇಡೀ ಜಗತ್ತನ್ನೆ ತನ್ನತ್ತ ಸೆಳೆಯುತ್ತಿದೆ. ಇಂತಹ ನಿಸರ್ಗದ ತಪ್ಪಲಿನ ಪ್ರವಾಸಿತಾಣಗಳು ಮುಂಗಾರು ಮಳೆಯ ಸಿಂಚನಕ್ಕೆ ಹೊಸರೂಪ ತಳೆದು ಕಣ್ಮನ ಸೆಳೆಯುತ್ತವೆ. ಇಷ್ಟಿದ್ದರೂ ಪ್ರವಾಸೋದ್ಯಮ ಇಲಾಖೆ ಮಾತ್ರ ಸೂಕ್ತ ವ್ಯವಸ್ಥೆ ಕೊಡದೆ ನಿರ್ಲಕ್ಷ ವಹಿಸುತ್ತಿದೆ.