ಹಾಸನ: ಇಲ್ಲಿನ ಹಾಸನಾಂಬೆ ಜಾತ್ರಾ ಮಹೋತ್ಸವ ಶನಿವಾರವಷ್ಟೇ ಮುಗಿದಿದ್ದು, ಇಂದು ಬೆಳಗ್ಗೆಯಿಂದ ಹುಂಡಿ ಎಣಿಕೆ ಕಾರ್ಯ ಶುರುವಾಗಿದೆ.
ಇದಕ್ಕಾಗಿ ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಒಟ್ಟು 50 ಮಂದಿಯನ್ನು ನಿಯೋಜನೆ ಮಾಡಲಾಗಿದೆ. ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದು ಒಟ್ಟು 4 ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಚಿಕ್ಕದು, ದೊಡ್ಡದು ಸೇರಿ ಒಟ್ಟು 16 ಹುಂಡಿಗಳಿದ್ದು, ಎಲ್ಲಾ ಹುಂಡಿಗಳ ಎಣಿಕಾಕಾರ್ಯ ಸಂಜೆವರೆಗೂ ನಡೆಯುವ ಸಾಧ್ಯತೆ ಇದೆ. ಇದೇ ಮೊದಲ ಬಾರಿಗೆ ಅಹೋರಾತ್ರಿ ಹಾಸನಾಂಬೆ ದರ್ಶನ ಮತ್ತು ಶೀಘ್ರ ದರ್ಶನಕ್ಕೆ 300 ರೂ. ಜೊತೆಗೆ 1 ಸಾವಿರ ರೂ. ಶುಲ್ಕ ನಿಗದಿ ಮಾಡಿದ್ದರಿಂದ ಸುಮಾರು 5 ಕೋಟಿ ರೂ. ಅಧಿಕ ಆದಾಯ ಕಾಣಿಕೆ ರೂಪದಲ್ಲಿ ಬರುವ ಸಾಧ್ಯತೆ ಇದೆ.
ಕಳೆದ ವರ್ಷ ಸಂಗ್ರಹವಾಗಿದ್ದ 2.36 ಕೋಟಿ ರೂ. ಈವರೆಗಿನ ಅತ್ಯಧಿಕ ಆದಾಯವಾಗಿತ್ತು. ಈ ಬಾರಿ ಒಟ್ಟು 10 ದಿನಗಳ ಕಾಲ 6 ರಿಂದ 7 ಲಕ್ಷ ಭಕ್ತರು, ದೇವಿಯ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ.
ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ಶುಕ್ರವಾರ ಅಂತಿಮ ದಿನವಾಗಿತ್ತು. ಹೀಗಾಗಿ ಅಂದು ಬೆಳಗ್ಗೆ 5 ರಿಂದ ಸಂಜೆ 5 ಮತ್ತು ರಾತ್ರಿ 9 ರಿಂದ ಇಂದು ಬೆಳಗ್ಗೆ 6 ಗಂಟೆವರೆಗೆ ಭಕ್ತರು ದೇವಿಯ ದರ್ಶನ ಪಡೆಯಬಹುದಾಗಿತ್ತು. ಶನಿವಾರ ಮಧ್ಯಾಹ್ನ ವಿಶ್ವರೂಪ ದರ್ಶನದ ನಂತರ ಗರ್ಭಗುಡಿಯ ಬಾಗಿಲು ಹಾಕಲಾಗಿದೆ.
ದೇವಿ ದರ್ಶನಕ್ಕೆ ಶನಿವಾರ ಕಡೇ ದಿನವಾಗಿರುವ ಹಿನ್ನೆಲೆಯಲ್ಲಿ ಜನಸಾಗರವೇ ದೇಗುಲಕ್ಕೆ ಹರಿದು ಬಂದಿತ್ತು. ಭಕ್ತರ ಸಾಮಾನ್ಯ ದರ್ಶನದ ಸಾಲು 2 ಕಿಲೋ ಮೀಟರ್ ಗೂ ಹೆಚ್ಚಿತ್ತು. ದೇವಿಯ ವಿಶೇಷ ದರ್ಶನದ 300 ರೂ. ಪಾಸ್ ಹಾಗೂ 1000 ರೂ. ಪಾಸ್ ಗೂ ಭಾರೀ ಬೇಡಿಕೆ ಇತ್ತು. ದೇವಿ ದರ್ಶನದ ಕೊನೆಯ ದಿನವಾದ ಶುಕ್ರವಾರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಜೆಡಿಎಸ್ ಶಾಸಕ ಶರವಣ ದೇಗುಲಕ್ಕೆ ಭೇಟಿ ನೀಡಿದ್ದರು.
https://www.youtube.com/watch?v=7uuQGmRXoFk
https://www.youtube.com/watch?v=Xt40GinaJsM