ಶಿವಮೊಗ್ಗ: ಹರ್ಷನ ಕೊಲೆ ನಂತರ ಮತ್ತೊಂದು ಕೊಲೆಗೆ ಸಂಚು ರೂಪಿಸಲಾಗಿತ್ತು ಎಂಬ ಅಂಶ ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಸೀಗೆಹಟ್ಟಿಯಲ್ಲಿ ಫೆ.20 ರಂದು ಭಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ನಡೆದಿತ್ತು. ಹರ್ಷನ ಕೊಲೆಗೆ ಪ್ರತೀಕಾರವಾಗಿ ಅನ್ಯಕೋಮಿನ ರೌಡಿಶೀಟರ್ ಓರ್ವನ ಹತ್ಯೆಗೆ 13 ಮಂದಿ ಯುವಕರ ತಂಡ ಸಂಚು ರೂಪಿಸಿತ್ತು ಎಂಬ ಅಂಶ ಪೊಲೀಸರ ತನಿಖೆ ಮೂಲಕ ಬಹಿರಂಗವಾಗಿದೆ. ಇದನ್ನೂ ಓದಿ: ಯುವತಿಯನ್ನು ಚುಡಾಯಿಸಿದಕ್ಕೆ ಬುದ್ದಿ ಹೇಳಿದವನನ್ನೆ ಕೊಂದ ಪಾಪಿ
ತನಿಖೆಯಲ್ಲಿ ತಿಳಿದಿದ್ದೇನು?
ಹರ್ಷನ ಕೊಲೆ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವಾಸ್‍ನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಪೊಲೀಸರ ಮುಂದೆ ಹರ್ಷನ ಹತ್ಯೆಗೆ ಪ್ರತೀಕಾರವಾಗಿ ಮತ್ತೊಂದು ಹತ್ಯೆಯ ಸಂಚು ರೂಪಿಸಿರುವುದನ್ನು ಬಾಯ್ಬಿಟ್ಟಿದ್ದಾನೆ. ಈ ವಿಷಯ ತಿಳಿದ ನಂತರ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮಿಪ್ರಸಾದ್ ಅವರು ಕುಂಸಿ ಠಾಣೆ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ನೇತೃತ್ವದಲ್ಲಿ ತಂಡ ರಚಿಸಿ ಫೀಲ್ಡ್‌ಗೆ ಇಳಿಸಿದ್ದರು.
ಯಾರಿಗೂ ಅನುಮಾನವೇ ಬಾರದ ರೀತಿ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಈ ಬಗ್ಗೆ ಅಗತ್ಯ ಮಾಹಿತಿ ದಾಖಲೆ ಸಂಗ್ರಹಿಸಿತ್ತು. ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ರಾಖಿ, ವಿಶ್ವಾಸ್, ನಿತಿನ್, ಯಶವಂತ್, ಕಾರ್ತಿಕ್, ಆಕಾಶ್, ಪ್ರವೀಣ್, ಸುಹಾಸ್, ಸಚಿನ್, ಸಂಕೇತ್, ರಾಘು, ಮಂಜು, ವಿಶ್ವಾಸ್ ಆರೋಪಿಗಳನ್ನು ವಶಕ್ಕೆ ಪಡೆದು ಎಫ್‍ಐಆರ್ ದಾಖಲಿಸಿದ್ದಾರೆ. ಅಲ್ಲದೇ ಬಂಧಿತರನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಶಿವಮೊಗ್ಗದಲ್ಲಿ ಸದ್ಯದಲ್ಲಿಯೇ ಮತ್ತೊಂದು ಕೊಲೆ ನಡೆಯಬೇಕಿತ್ತು. ಕೊಲೆಗೆ ವ್ಯವಸ್ಥಿತವಾಗಿ ಸಂಚು ಸಹ ನಡೆದಿತ್ತು. ಆದರೆ ಎಸ್.ಪಿ ಅವರೇ ಫೀಲ್ಡ್‍ಗೆ ಇಳಿದು ಕಾರ್ಯಾಚರಣೆ ನಡೆಸಿದ್ದರಿಂದ ನಡೆಯಬೇಕಿದ್ದ ಕೊಲೆ ತಪ್ಪಿಸಿದ್ದಾರೆ. ಇದನ್ನೂ ಓದಿ: ಭಾರತೀಯತೆಗೆ ಯಾರೆಲ್ಲಾ ವಿರೋಧ ಮಾಡುತ್ತಾರೋ ಇಲ್ಲಿ ಇರಬಾರದು: ಅದಮಾರು ಶ್ರೀ