– ನ.6ಕ್ಕೆ `ಕೈ’ ಅಭ್ಯರ್ಥಿ ಪರ ಸಿಎಂ, ಡಿಸಿಎಂ ಮತಯಾಚನೆ
– ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಹೆಚ್‌ಡಿಕೆ ತಂತ್ರ
ಹಾವೇರಿ: ದೀಪಾವಳಿ ಬಳಿಕ ಹಾವೇರಿ, ಚನ್ನಪಟ್ಟಣದಲ್ಲಿ ಉಪಚುನಾವಣೆ ಕಾವು ಹೆಚ್ಚಾಗಲಿದೆ. ಹಾವೇರಿಯ (Haveri) ಶಿಗ್ಗಾಂವಿಯಲ್ಲಿ (Shiggaon) ಬಿಜೆಪಿ ಆಭ್ಯರ್ಥಿ ಪರ ವಿಜಯೇಂದ್ರ, ಯಡಿಯೂರಪ್ಪ ಪ್ರಚಾರಕ್ಕೆ ಪ್ಲ್ಯಾನ್ ನಡೆಸಿದ್ದಾರೆ. ಅತ್ತ ಕಾಂಗ್ರೆಸ್ ಅಭ್ಯರ್ಥಿ ಯಾಸಿನ್ ಪರ ಸಿಎಂ, ಡಿಸಿಎಂ ಪ್ರಚಾರ ನಡೆಸಲಿದ್ದಾರೆ.
ದೀಪಾವಳಿ ಬಳಿಕ ಶಿಗ್ಗಾಂವಿ ಉಪಚುನಾವಣೆಯಲ್ಲಿ (By Election) ಪ್ರಚಾರ ಭರಾಟೆ ಜೋರಾಗಲಿದೆ. ದೊಡ್ಡ ದೊಡ್ಡ ರಾಜಕೀಯ ಘಟಾನುಘಟಿಗಳು ಪ್ರಚಾರದ ಅಖಾಡಕ್ಕೆ ಧುಮುಕಲಿದ್ದಾರೆ. ನವೆಂಬರ್ 5 ರಂದು ಭರತ್ ಬೊಮ್ಮಾಯಿ (Bharath Bommai) ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರಚಾರ ನಡೆಸಲಿದ್ದಾರೆ. ಇನ್ನು ನವೆಂಬರ್ 11 ರಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರಚಾರ ನಡೆಸಲಿದ್ದಾರೆ. ಈಗಾಗಲೇ ಬಿಎಸ್‌ವೈ ನೇತೃತ್ವದಲ್ಲಿ ಬೃಹತ್ ಸಮಾವೇಶ, ರೋಡ್ ಶೋಗೆ ಸಿದ್ಧತೆ ನಡೆಸಲಾಗಿದೆ. ಇತ್ತ ನವೆಂಬರ್ 6ರಂದು ಕೈ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ (Yasir Khan Patan) ಪರ ಸಿಎಂ ಸಿದ್ದರಾಮಯ್ಯ, ಡಿಕೆಶಿ ಎರಡನೇ ಸುತ್ತಿನ ಅದ್ಧೂರಿ ಪ್ರಚಾರ ನಡೆಸಲಿದ್ದಾರೆ. ಅಲ್ಲದೇ ಶಿಗ್ಗಾಂವಿಯಲ್ಲೇ ಕಾಂಗ್ರೆಸ್ ಸಚಿವರು, ಶಾಸಕರ ದಂಡು ಮೊಕ್ಕಾಂ ಹೂಡಲಿದ್ದಾರೆ. ಇದನ್ನೂ ಓದಿ: ದರ್ಶನ್ ಎಡಗಾಲಿಗೂ ಸಮಸ್ಯೆ – ಫಿಜಿಯೋಥೆರಪಿನಾ? ಆಪರೇಷನ್‌ನಾ?
ಅತ್ತ ರಾಮನಗರದಲ್ಲೂ (Ramanagara) ಉಪಚುನಾವಣೆ ಪ್ರಚಾರ ಭರಾಟೆ ಜೋರಾಗಿದೆ. ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಕುಮಾರಸ್ವಾಮಿ ತಂತ್ರ ರೂಪಿಸಿದ್ದಾರೆ. ಹೇಗಾದರೂ ದಲಿತ ಹಾಗೂ ಹಿಂದಳಿದ ವರ್ಗಗಳ ಮತ ಕ್ರೂಡೀಕರಣಕ್ಕೆ ಪ್ಲ್ಯಾನ್ ಮಾಡುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಮಾಜಿ ಶಾಸಕ ಅನ್ನದಾನಿ ನೇತೃತ್ವದಲ್ಲಿ ದಲಿತ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಲಾಯಿತು. ಈ ವೇಳೆ ಎಸ್ಸಿ-ಎಸ್ಟಿ ಸಮುದಾಯ ನಿಖಿಲ್ ಕುಮಾರಸ್ವಾಮಿಗೆ (Nikhil Kumaraswamy) ಬೆಂಬಲ ನೀಡುವಂತೆ ಕರೆ ಕೊಡಲಾಗಿದ್ದು, ಯೋಗೇಶ್ವರ್ ಪದೇಪದೇ ಪಕ್ಷ ಬದಲಿಸುವ ವ್ಯಕ್ತಿ. ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವ ಯೋಗೇಶ್ವರ್ ನಂಬಬೇಡಿ. ಈ ಬಾರಿ ನಿಖಿಲ್ ಕುಮಾರಸ್ವಾಮಿಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾಳಿ ಪೂಜೆ ವೇಳೆ ಅಗ್ನಿ ಅವಘಡ – ಬೆಂಕಿ ಕೆನ್ನಾಲಿಗೆಗೆ ಮೂವರು ಮಕ್ಕಳು ಬಲಿ
ಇನ್ನು ನಿಖಿಲ್ ವಿರುದ್ಧ ಕುಟುಂಬ ರಾಜಕಾರಣ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೂ ಮಾಜಿ ಶಾಸಕ ಅನ್ನದಾನಿ ಟಾಂಗ್ ಕೊಟ್ಟಿದ್ದಾರೆ. ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಕೂಡ ಕುಟುಂಬ ರಾಜಕಾರಣದಿಂದ ಬಂದವರು. ಉತ್ತರ ಪ್ರದೇಶದಲ್ಲಿ ಹುಟ್ಟಿದ್ದರೂ ಕೇರಳದ ವಯನಾಡಿನಲ್ಲಿ ಬಂದು ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ ಈ ಭಾಗದಲ್ಲಿ ಅಭಿವೃದ್ಧಿ ಮಾಡಿರೋ ನಾಯಕರ ಮಗ ಇಲ್ಲಿ ಸ್ಪರ್ಧೆ ಮಾಡೋದು ತಪ್ಪಾ ಎಂದು ಪ್ರಶ್ನೆ ಮಾಡಿ ಕಾಂಗ್ರೆಸ್ ವಿರುದ್ಧ ಮಳವಳ್ಳಿ ಮಾಜಿ ಶಾಸಕ ಅನ್ನದಾನಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಯಚೂರು| ಪಟಾಕಿ ಕಿಡಿ ತಗುಲಿ ಅಂಗಡಿಗೆ ಬೆಂಕಿ – ಅಂಗಡಿಯಲ್ಲಿದ್ದ ವಸ್ತುಗಳು ಭಸ್ಮ
ಒಟ್ಟಾರೆ ಶಿಗ್ಗಾಂವಿಯಲ್ಲಿ ಘಟಾನುಘಟಿಗಳ ಅಭ್ಯರ್ಥಿಗಳ ಪರ ಪ್ರಚಾರ ಮಾಡೋದು ಒಂದೆಡೆ ಆದರೆ ಚನ್ನಪಟ್ಟಣದಲ್ಲಿ ನಿಖಿಲ್ ಗೆಲ್ಲಿಸಲು ಜೆಡಿಎಸ್ ಸಭೆ ಮೇಲೆ ಸಭೆ ನಡೆಸುತ್ತಿದೆ. ಗೆಲುವು ಯಾರಿಗೆ ಎಂಬುದು ಚುನಾವಣಾ ಫಲಿತಾಂಶದ ದಿನ ತಿಳಿಯಬೇಕಿದೆ. ಇದನ್ನೂ ಓದಿ: ದಶಕಗಳ ಬಳಿಕ ಅಪ್ಪಳಿಸಿದ ಭೀಕರ ಪ್ರವಾಹಕ್ಕೆ ಸ್ಪೇನ್ ತತ್ತರ – ಸಾವಿನ ಸಂಖ್ಯೆ 205ಕ್ಕೆ ಏರಿಕೆ