ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಬಲಗೊಳ್ಳುತ್ತಿದ್ಯಾ? ಮೈತ್ರಿಕೂಟ ಸರ್ಕಾರ ರಚನೆ ಬಳಿಕ ಕಾಂಗ್ರೆಸ್ ದುರ್ಬಲ ಆಗಿದ್ಯಾ ಹೀಗೊಂದು ಸಂಶಯ ಕಾಂಗ್ರೆಸ್ ವಲಯದಲ್ಲಿ ದಟ್ಟವಾಗಿ ಹಬ್ಬಿದೆ.
ದೆಹಲಿಯಲ್ಲಿ ಸೋಮವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿಯಾದ ಬಳಿಕ ಕಾಂಗ್ರೆಸ್ಸಿನಲ್ಲಿ ಒಳಗೊಳಗೆ ಅಸಮಾಧಾನದ ಕಿಡಿ ಹತ್ತಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ ಕಾಂಗ್ರೆಸ್ ನಾಯಕರನ್ನು ಕಡೆಗಣನೆ ಮಾಡಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಎದ್ದಿದೆ.
Advertisement
ಕುಮಾರಸ್ವಾಮಿ ಪ್ರಸ್ತಾಪಿಸಿದ ಎಲ್ಲ ವಿಚಾರಗಳಿಗೂ ರಾಹುಲ್‍ಗಾಂಧಿ ಸಮ್ಮತಿ ಸೂಚಿಸಿರುವುದು ಸರಿಯಲ್ಲ ಎನ್ನುವ ಮಾತುಗಳೂ ಕೇಳಿಬಂದಿದೆ. ಮುಂದೆ ಲೋಕಸಭಾ ಚುನಾವಣೆ ಎದುರಾಗುತ್ತಿದ್ದು ಕಾಂಗ್ರೆಸ್ ಪ್ರಾಬಲ್ಯವಿರುವ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡುವ ಸ್ಥಿತಿ ಬರಬಹುದು. ಆಗ ನಮ್ಮ ಕತೆಯೇನು ಎನ್ನುವ ಗಂಭೀರ ಪ್ರಶ್ನೆಯನ್ನೂ ಆಕಾಂಕ್ಷಿಗಳು ಎತ್ತಿದ್ದಾರೆ.
Advertisement
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸ್ವಲ್ಪಮಟ್ಟಿಗೆ ಬಲವಾಗಿದೆ. ಆದರೆ ಕಾಂಗ್ರೆಸ್ ಹೈಕಮಾಂಡೇ ಪಕ್ಷವನ್ನು ನಿರ್ನಾಮ ಮಾಡೋದಕ್ಕೆ ಕೈ ಹಾಕಿದೆ ಅಂತ ಸಿಟ್ಟು ಹೊರಹಾಕಿದ್ದಾರೆ.
Advertisement
ದೆಹಲಿಯಲ್ಲಿ ಎರಡು ದಿನ ನಾಯಕರ ಗೌರವ ನನಗೆ ಅಚ್ಚರಿ ಮೂಡಿಸಿದೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಅತ್ತ, ದೆಹಲಿಯಲ್ಲಿ ರಾಹುಲ್ ಗಾಂಧಿ ಹುಟ್ಟುಹಬ್ಬಕ್ಕೆ ಶುಭಕೋರಿದ ಬಳಿಕ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಯಾರೂ ಯಾರ ಬಗ್ಗೆಯೂ ಮಾತನಾಡಬಾರದು ಅಂತ ರಾಹುಲ್‍ಗಾಂಧಿ ಹೇಳಿದ್ದಾರೆ ಎಂದು ತಿಳಿಸಿದರು.
Advertisement
ಅಸಮಾಧಾನಕ್ಕೆ ಕಾರಣವೇನು?
5 ವರ್ಷ ಕುಮಾರಸ್ವಾಮಿಯೇ ಸಿಎಂ ಎಂದು ಘೋಷಿಸಿದ ವಿಚಾರಕ್ಕೆ ಆರಂಭದಲ್ಲಿ ಅಸಮಾಧಾನಕ್ಕೆ ಎದ್ದಿತ್ತು. ಇದಾದ ಬಳಿಕ ಪೂರ್ಣ ಬಜೆಟ್ ಮಂಡನೆಗೆ ಒಪ್ಪಿಗೆ ಸೂಚಿಸಬಾರದಿತ್ತು. ಬಜೆಟ್ ಬಗ್ಗೆ ನಿರ್ಧಾರ ಪ್ರಕಟಿಸುವ ಮುನ್ನ ರಾಜ್ಯ ನಾಯಕರ ಜೊತೆ ಚರ್ಚಿಸಬೇಕಿತ್ತು. ಹೈಕಮಾಂಡ್ ಒಪ್ಪಿಗೆ ನೀಡಿದ ಪರಿಣಾಮ ಈಗ ರಾಜ್ಯ ನಾಯಕರನ್ನು ಎಚ್‍ಡಿಕೆ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ದೇವೇಗೌಡರು ಮತ್ತು ಸಿಎಂ ನೇರವಾಗಿ ಹೈಕಮಾಂಡ್ ಸಂಪರ್ಕಿಸುತ್ತಾರೆ. ಇದರಿಂದಾಗಿ ನಮ್ಮ ಹೇಳಿಕೆಗೆ ಬೆಲೆ ಇರುವುದಿಲ್ಲ. ಈ ಎಲ್ಲ ಕಾರಣಕ್ಕಾಗಿ ರಾಜ್ಯ ನಾಯಕರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ವೇಳೆ ಏನಾಗಬಹುದು?
ಮೈತ್ರಿ ಧರ್ಮಪಾಲನೆ ಹೆಸರಿನಲ್ಲಿ ಜೆಡಿಎಸ್ ಒತ್ತಡ ಹೇರಬಹುದು. ಹಳೆ ಮೈಸೂರು ಭಾಗದ ಕ್ಷೇತ್ರಗಳಿಗೆ ಬೇಡಿಕೆ ಇಟ್ಟರೆ ಕಾಂಗ್ರೆಸ್ ಹಿಡಿತದ ಕ್ಷೇತ್ರಗಳು ಕೈ ತಪ್ಪಬಹುದು. ಮುಂದೆ ಈ ಭಾಗದಲ್ಲಿ ಪಕ್ಷ ಸಂಘಟನೆಯೂ ಕಷ್ಟವಾಗಬಹುದು. ಸದ್ಯದ ಮಾಹಿತಿ ಪ್ರಕಾರ ಮೈಸೂರು, ಮಂಡ್ಯ, ಹಾಸನ, ಬೆಂಗಳೂರು ಉತ್ತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಶಿವಮೊಗ್ಗ ಕ್ಷೇತ್ರಕ್ಕೆ ಜೆಡಿಎಸ್ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಇದರಲ್ಲಿ ಮಂಡ್ಯ, ಹಾಸನ ಮಾತ್ರ ಜೆಡಿಎಸ್ ಗೆದ್ದಿದೆ. ಮೈಸೂರು- ಶಿವಮೊಗ್ಗ ಬಿಜೆಪಿಯ ಹಿಡಿತದಲ್ಲಿದೆ. ಇದನ್ನೂ ಓದಿ: ಮೋದಿ ಅಲೆ ಎದುರಿಸಲು ರಾಹುಲ್ ಬಿಗ್ ಪ್ಲಾನ್ – ಕೊನೆಗೂ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆ ಅನ್ನೋದು ನಿರ್ಧಾರವಾಯ್ತು!