ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ಸಮ್ಮಿಶ್ರ ಸರ್ಕಾರಕ್ಕೆ ತಲೆನೋವಾಗಿದ್ದ ಅತೃಪ್ತ ಶಾಸಕರ ಅನರ್ಹತೆಗೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಚಿವ ಸ್ಥಾನ ಕಳೆದುಕೊಂಡ ಬಳಿಕ ಮುಂಬೈನಲ್ಲಿ ಕುಳಿತಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಬಂಡಾಯ ಬಾವುಟ ಕೈಯಲ್ಲಿ ಹಿಡಿದುಕೊಂಡು ನಿಂತಿರುವ ಚಿಂಚೋಳಿ ಶಾಸಕ ಉಮೇಶ್ ಜಾಧವ್, ನಾಗೇಂದ್ರ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹ ಮಾಡುವ ಮೂಲಕ ಉಳಿದ ಅಸಮಾಧಾನಿತರಿಗೆ ಎಚ್ಚರಿಕೆಯ ಸಂದೇಶ ನೀಡಲು ಶಾಸಕಾಂಗ ಸಭೆಯಲ್ಲಿ ನಿರ್ಧರಿಸಲಾಗಿದೆ.
ಅಜ್ಞಾತ ಸ್ಥಳದಲ್ಲಿ ಕುಳಿತುಕೊಂಡಿರುವ ರಮೇಶ್ ಜಾರಕಿಹೊಳಿ ಅವರ ನಡೆಯಿಂದ ಸಮ್ಮಿಶ್ರ ಸರ್ಕಾರ ಮುಜುಗರಕ್ಕೆ ಒಳಗಾಗುತ್ತಿರುವುನ್ನ ತಪ್ಪಿಸಿಕೊಳ್ಳಲು ಅನರ್ಹಗೊಳಿಸಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಈ ನಿರ್ಧಾರದಿಂದ ಉಳಿದ ಅತೃಪ್ತ ಶಾಸಕರಿಗೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ರೆ ಏನಾಗುತ್ತೆ ಎಂಬ ಸಂದೇಶ ನೀಡಲು ಸಿದ್ದರಾಮಯ್ಯನವರು ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಇತರೆ ಶಾಸಕರು ಸಿದ್ದರಾಮಯ್ಯರ ತೀರ್ಮಾನಕ್ಕೆ ಬದ್ಧ ಎಂಬ ಮಾತನ್ನು ಹೇಳಿದ್ದಾರೆ.
Advertisement
Advertisement
ಎಂಟು ಶಾಸಕರು ಗೈರು: ಇಂದು ನಡೆದ ಶಾಸಕಾಂಗ ಸಭೆಗೆ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಮಹೇಶ್ ಕುಮಟಳ್ಳಿ, ನಾಗೇಂದ್ರ, ಬಿ.ಸಿ.ಪಾಟೀಲ್, ಗಣೇಶ್, ಡಾ.ಸುಧಾಕರ್ ಮತ್ತು ರೋಷನ್ ಬೇಗ್ ಗೈರಾಗಿದ್ದಾರೆ. ಮುಂಬೈನಲ್ಲಿದ್ದಾರೆಂದು ಎನ್ನಲಾಗಿದ್ದ ಶಾಸಕ ಡಾ.ಸುಧಾಕರ್ ಕೊನೆಯಲ್ಲಿ ಸಭೆಗೆ ಹಾಜರಾದರು.
Advertisement
ಐವರನ್ನು ಹೊರತುಪಡಿಸಿ ಎಲ್ಲರು ಶಾಸಕಾಂಗ ಸಭೆಗೆ ಬಂದಿದ್ದು, ರೋಷನ್ ಬೇಗ್ ದೆಹಲಿಯ ಅಲ್ಪಸಂಖ್ಯಾತರ ಸಭೆಯಲ್ಲಿ ಭಾಗಿಯಾಗಿದ್ದಾರೆ. ಬಿಸಿ ಪಾಟೀಲ್ ಫೋನ್ ಮಾಡಿದ್ದು, ಮಧ್ಯಾಹ್ನದ 3 ಗಂಟೆಗೆ ಬಂದು ಭೇಟಿ ಮಾಡ್ತೀನಿ ಅಂತಾ ಹೇಳಿದ್ದಾರೆ.
Advertisement
ಮುಂಬೈನಲ್ಲಿದ್ದಾರೆ ಎನ್ನಲಾದ ನಾಲ್ವರು ನನಗೆ ಪತ್ರ ಕಳುಹಿಸಿದ್ದು, ವೈಯಕ್ತಿಕ ಕಾರಣ ನೀಡಿ ಸಿಎಲ್‍ಪಿ ಸಭೆಗೆ ಗೈರಾಗಿದ್ದಾರೆ. ಅತೃಪ್ತರು ನೀಡಿರುವ ಕಾರಣಗಳು ಹೀಗಿವೆ.
1. ಉಮೇಶ್ ಜಾಧವ್: ವೈಯಕ್ತಿಕ ಕಾರಣಗಳಿಂದ ಸಭೆಗೆ ಬರಲು ಆಗುತ್ತಿಲ್ಲ. ಆದಷ್ಟು ಬೇಗ ನಿಮ್ಮನ್ನು ಭೇಟಿಯಾಗುತ್ತೇನೆ.
2. ರಮೇಶ್ ಜಾರಕಿಹೊಳಿ: ಮದುವೆ ಕಾರ್ಯಕ್ರಮವಿದ್ದು, ಈ ತಿಂಗಳ 15ರವರೆಗೆ ಬರೋದಕ್ಕೆ ಆಗಲ್ಲ.
3. ಮಹೇಶ್ ಕುಮಟಳ್ಳಿ: ಆರೋಗ್ಯ ಸರಿ ಇಲ್ಲದ ಕಾರಣ ಸಭೆಗೆ ಬಂದಿಲ್ಲ.
4. ನಾಗೇಶ್ : ವೈಯಕ್ತಿಕ ಕಾರಣಗಳಿಂದ ಬರೋದಕ್ಕೆ ಆಗುತ್ತಿಲ್ಲ.
5. ಗಣೇಶ್: ಕಂಪ್ಲಿ ಶಾಸಕ ಎಲ್ಲಿದ್ದಾರೋ ಗೊತ್ತಿಲ್ಲ. ನಮ್ಮ ಸಂಪರ್ಕಕ್ಕೂ ಸಿಕ್ಕಿಲ್ಲ.
ಈ ನಾಲ್ವರು ಫೆಬ್ರವರಿ 15ರವವರೆಗೆ ಯಾವುದೇ ಸಭೆ ಮತ್ತು ಅಧಿವೇಶನಕ್ಕೆ ಬರೋದಕ್ಕೆ ಆಗಲ್ಲ ಎಂದು ಅನುಮತಿ ಕೇಳಿದ್ದಾರೆ. ಈ ನಾಲ್ವರಿಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗಿತ್ತು. ಶೋಕಾಸ್ ನೋಟಿಸ್ ಜಾರಿ ಮಾಡಿ ಕಾರಣ ನೀಡುವಂತೆ ಕೇಳಿದ್ದೇವೆ. ಈ ಸಂಬಂಧ ಶಾಸಕರ ಅನರ್ಹತೆಗೆ ಶಿಫಾರಸ್ಸು ಮಾಡಲು ನಿರ್ಧರಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಜನವರಿ 18ರಂದು ನೀಡಿದ್ದ ಶೋಕಾಸ್ ನೋಟಿಸ್‍ಗೆ ಉತ್ತರ ನೀಡಿದ್ದ ನಾಲ್ವರು ಕಾಂಗ್ರೆಸ್ ನಲ್ಲಿ ಇದ್ದೇವೆ ಎಂದು ಉತ್ತರ ನೀಡಿದ್ದರು. ನಾನು ಸಭೆಗೆ ಅಥವಾ ನನ್ನನ್ನು ಪರ್ಸನಲ್ ಆಗಿ ಭೇಟಿಯಾಗಬೇಕೆಂಬ ಸಂದೇಶವನ್ನು ಕಳುಹಿಸಲಾಗಿತ್ತು. ಎರಡು ದಿನ ನಡೆದ ಅಧಿವೇಶನಕ್ಕೂ ಈ ನಾಲ್ವರು ಹಾಜರಾಗಿಲ್ಲ. ಇವತ್ತು ಬರೆದ ಪತ್ರದಲ್ಲಿಯೂ ಅಧಿವೇಶನಕ್ಕೆ ಬರಲ್ಲ ಅಂತಾ ತಿಳಿಸಿದ್ದಾರೆ. ಅನರ್ಹಗೊಳಿಸುವ ಕುರಿತಾಗಿ ದಾಖಲೆಗಳನ್ನು ಸಿದ್ಧ ಮಾಡಿಕೊಳ್ಳುತ್ತಿದ್ದು, ಸಂಜೆಯೊಳಗೆ ಸ್ಪೀಕರ್ ಅವರಿಗೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv