Connect with us

ಗುಜರಾತ್ ಚುನಾವಣಾ ದಿನಾಂಕ ಪ್ರಕಟಿಸದ ಚುನಾವಣಾ ಆಯೋಗದ ವಿರುದ್ಧ ಚಿದಂಬರಂ ವ್ಯಂಗ್ಯ

ಗುಜರಾತ್ ಚುನಾವಣಾ ದಿನಾಂಕ ಪ್ರಕಟಿಸದ ಚುನಾವಣಾ ಆಯೋಗದ ವಿರುದ್ಧ ಚಿದಂಬರಂ ವ್ಯಂಗ್ಯ

ನವದೆಹಲಿ: ಕೇಂದ್ರ ಚುನಾವಣಾ ಆಯೋಗವು ಗುಜರಾತ್ ಚುನಾವಣೆಗೆ ದಿನಾಂಕ ಘೋಷಣೆ ಮಾಡದಿರುವ ಕುರಿತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಆಯೋಗದ ವಿರುದ್ಧದ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಚುನಾವಣಾ ಅಯೋಗವು ಗುಜರಾತ್ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ. ಕೇಂದ್ರದ ಬಿಜೆಪಿ ಸರ್ಕಾರವು ಚುನಾವಣಾ ಆಯೋಗದ ಮೇಲೆ ಒತ್ತಡವನ್ನು ಹೇರಿದೆ ಎಂದು ಚಿದಂಬರಂ ಹೇಳಿದ್ದಾರೆ.

ಗುಜರಾತ್ ಜನತೆಗೆ ಸರ್ಕಾರವು ಎಲ್ಲಾ ಯೋಜನೆಗಳು ಹಾಗೂ ಉಚಿತ ಉಡುಗೊರೆಗಳನ್ನು ವಿತರಿಸಿದ ನಂತರ ಚುನಾವಣಾ ಆಯೋಗ ತನ್ನ ಮುಂದುವರಿದ ರಜೆ ದಿನಗಳನ್ನು ಮುಕ್ತಾಯ ಮಾಡಿಕೊಂಡು ಚುನಾವಣಾ ದಿನಾಂಕವನ್ನು ಘೋಷಿಸುತ್ತದೆ. ಮೋದಿಯವರ ಚುನಾವಣಾ  ರ‍್ಯಾಲಿಯು ಮುಕ್ತಾಯದ ನಂತರ ಅಧಿಕೃತ ದಿನಾಂಕ ಪ್ರಕಟವಾಗಲಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‍ನ ಹಲವು ನಾಯಕರು ಚುನಾವಣಾ ಆಯೋಗದ ಈ ಕ್ರಮವನ್ನು ಟೀಕಿಸಿದ್ದು, ಹಿಮಾಚಲ ಪ್ರದೇಶ ಹಾಗೂ ಗುಜರಾತ್‍ನ ವಿಧಾನಸಭಾ ಅವಧಿ ಒಂದು ವಾರದ ಅಂತರದಲ್ಲಿ ಮುಕ್ತಾಯಗೊಳ್ಳುತ್ತವೆ. ಆದರೂ ಚುನಾವಣಾ ಆಯೋಗ ಕೇಂದ್ರ ಸರ್ಕಾರ ಒತ್ತಡದಿಂದ ಹಿಮಾಚಲ ಪ್ರದೇಶದ ಚುನಾವಣೆ ದಿನಾಂಕವನ್ನು ಮಾತ್ರ ಘೋಷಿಸಿದೆ ಎಂದು ಆರೋಪಿಸಿದ್ದಾರೆ.

ಹಿಮಾಚಲ ಪ್ರದೇಶದ ಚುನಾವಣೆಗೆ ಚುನಾವಣಾ ಆಯೋಗ ನವೆಂಬರ್ 09 ರಂದು ದಿನಾಂಕವನ್ನು ಘೋಷಿಸಿದೆ. ಅಲ್ಲದೇ ಚುನಾವಣೆಯ ಮತ ಎಣಿಕೆ ಡಿಸೆಂಬರ್ 18 ರಂದು ನಡೆಯಲಿದ್ದು, ಇದಕ್ಕೂ ಮುಂಚೆ ಗುಜರಾತ್ ಚುನಾವಣೆ ನಡೆಯಲಿದೆ ಎಂದು ಅಯೋಗ ಹೇಳಿದೆ.

ಗುಜರಾತ್‍ನಲ್ಲಿ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದ ನಂತರ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಇದಕ್ಕೂ ಮುಂಚೆಯೇ ಸರ್ಕಾರ ಗುಜರಾತ್ ಜನರಿಗೆ ಉಡುಗೊರೆಗಳನ್ನ ನೀಡಲು ಅವಕಾಶ ಮಾಡುವಂತೆ ಚುನಾವಣಾ ಆಯೋಗದ ಮೇಲೆ ಬಿಜೆಪಿ ಸರ್ಕಾರ ಒತ್ತಡ ಹೇರಿದೆ ಎಂದು ಚಿದಂಬರಂ ಹೇಳಿದ್ದಾರೆ.

ಕಳೆದ ವಾರ ಗುಜರಾತ್‍ನ ಗಾಂದಿ ನಗರದಲ್ಲಿ ಏರ್ಪಡಿಸಿದ್ದ ಬಿಜೆಪಿಯ ಬೃಹತ್ ರ‍್ಯಾಲಿಯನ್ನು ಕಾಂಗ್ರೆಸ್ ಅಕ್ಷೇಪಿಸಿತ್ತು. ಅಲ್ಲದೇ ಪ್ರಧಾನಿ ಮೋದಿಯವರು ಅಕ್ಟೋಬರ್ 22 ರಂದು ಮತ್ತೊಂದು ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ಅತ್ತ ಬಿಜೆಪಿ ನಾಯಕರು ಕಾಂಗ್ರೆಸ್‍ನ ಆರೋಪಗಳನ್ನು ನಿರಾಕರಿಸಿದ್ದು, ಕಾಂಗ್ರೆಸ್ ಮತ್ತೊಮ್ಮೆ ಗುಜರಾತ್ ನಲ್ಲಿ ಚುನಾವಣೆಯಲ್ಲಿ ಸೋಲಲು ಕಾತುರವಾಗಿದೆ ಎಂದಿದ್ದಾರೆ.

ಗುಜರಾತ್ ಚುನಾವಣಾ ರ‍್ಯಾಲಿಯ ವೇಳೆ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ದೇಶಕ್ಕೆ ಉತ್ತಮ ನಾಯಕರನ್ನು ನೀಡಿದ ಪಕ್ಷವು ಇಂದು ಸುಳ್ಳು ಹೇಳಿಕೆಗಳನ್ನು ಹರಡಲು ಮಾತ್ರ ತನ್ನ ಗಮನವನ್ನು ಕೇಂದ್ರೀಕರಿಸಿದ್ದು, ನಿರಾಶಾವಾದದ ವಾತಾವರಣ ಸೃಷ್ಟಿಸುತ್ತಿದೆ ಎಂದಿದ್ದರು.

 

 

Advertisement
Advertisement