ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಮಲೆನಾಡು ಭಾಗದ ಪ್ರಮುಖ ರಸ್ತೆಗಳು ಬಂದ್ ಆಗಿದೆ.
ಜಿಲ್ಲೆಯ ಮಲೆನಾಡು ಭಾಗದ ಪ್ರಮುಖ ರಸ್ತೆಗಳಾದ ಚಾರ್ಮಾಡಿ ಘಾಟ್, ಕಳಸ-ಕುದುರೆಮುಖ-ಮಂಗಳೂರು ರಸ್ತೆ ಸಂಚಾರ, ಕಳಸ-ಹೊರನಾಡು ರಸ್ತೆ ಸಂಚಾರ, ಶೃಂಗೇರಿ-ದಕ್ಷಿಣ ಕನ್ನಡ ರಾಷ್ಟ್ರೀಯ ಹೆದ್ದಾರಿ 169 ಬಂದ್ ಆಗಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Advertisement
ಭದ್ರಾ ಹಾಗೂ ಶೃಂಗೇರಿ ಶಾರದಾಂಭ ದೇವಾಲಯದ ಪಕ್ಕದಲ್ಲಿರುವ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸಂಧ್ಯವಂದನಾ ಮಂಟಪ ಹಾಗೂ ಕಪ್ಪೆ ಶಂಕರ ದೇವಸ್ಥಾನ ಮುಳುಗಡೆಯಾಗಿದೆ. ಶೃಂಗೇರಿ ದೇವಸ್ಥಾನಕ್ಕೆ ಸಾಗುವ ಪ್ಯಾರಲಲ್ ರಸ್ತೆ ಸಹ ಮುಳುಗಡೆಯಾಗಿದೆ.
Advertisement
Advertisement
ಇನ್ನೂ ರಾಷ್ಟ್ರೀಯ ಹೆದ್ದಾರಿ 169 ಶೃಂಗೇರಿ ಕೆರೆಕಟ್ಟೆ ಮಂಗಳೂರು ಬಸ್ ಸಂಚಾರ ಸ್ಥಗಿತವಾಗಿದ್ದು, ದಕ್ಷಿಣ ಕನ್ನಡದಿಂದ ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಸದ್ಯಕ್ಕೆ ಶಿವಮೊಗ್ಗ ಜಿಲ್ಲೆಯ ಅಗುಂಬೆ ಘಾಟ್ ನಲ್ಲಿ ಮಿನಿ ವಾಹನಗಳು ಸಂಚರಿಸುತ್ತಿದೆ.
Advertisement
ಚಿಕ್ಕಮಗಳೂರಲ್ಲಿ ಮುಂದುವರೆದ ಮಳೆಯಿಂದಾಗಿ ಚಿಕ್ಕಮಗಳೂರು-ಮಂಗಳೂರು ಬದಲಿ ಮಾರ್ಗವೂ ಬಂದ್ ಆಗಿದೆ. ಕಳಸ, ಕುದುರೆಮುಖ, ಮಂಗಳೂರು ಮಾರ್ಗವೂ ಬಂದ್ ಆಗಿದ್ದು, ಚಾರ್ಮಾಡಿ ರಸ್ತೆ ಬಂದ್ ಆದ ಮೇಲೆ ಕುದುರೆಮುಖ ಮಾರ್ಗವಾಗಿ ವಾಹನಗಳು ಸಂಚರಿಸುತ್ತಿತ್ತು. ಆದರೆ ಈಗ ಕಳಸ ಕುದುರೆಮುಖ ಮಾರ್ಗವೂ ಜಲಾವೃತಗೊಂಡಿದ್ದು, ಕಳಸಾದ 150 ಅಡಿ ನೆಲ್ಲಿಬೀಡು ಸೇತುವೆ ಇತಿಹಾಸದಲ್ಲಿ ಮೊದಲ ಬಾರಿ ಮುಳುಗಿದೆ.
ಇನ್ನೂ ಮೂಡಿಗೆರೆ ತಾಲೂಕಿನ ಕಳಸ ಹಾಗೂ ಕುದುರೆಮುಖದಲ್ಲಿ ಬಾರಿ ಮಳೆಯಿಂದ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಒಂದು ಕಿ.ಮೀವರೆಗೂ ವಾಹನಗಳು ಸಾಲುಗಟ್ಟಿ ನಿಂತಿದೆ. ಶೃಂಗೇರಿಯ ಎಸ್.ಕೆ.ಬಾರ್ಡ್ ರಸ್ತೆ ಮಧ್ಯೆಯೇ ಮರ ಬಿದ್ದು ಹಾಗೂ ಮಣ್ಣು ಕುಸಿತವಾಗಿದೆ. ಹಾಗಾಗಿ ಬೈಕ್ ಹಾಗೂ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಇನ್ನೂ ಬಾರಿ ವಾಹನ ಸಂಚಾರಕ್ಕೆ ಪೊಲೀಸರು ತಡೆ ನೀಡಿದ್ದಾರೆ. ಕಳೆದೊಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ರಸ್ತೆಗಳು ಕೆರೆಯಂತಾಗಿದ್ದು, ಕೊಟ್ಟಿಗೆಹಾರದ ರಸ್ತೆ ಮೇಲೆ ನೀರಿ ವೈಭವ ಹರಿಯುತ್ತಿದೆ. ಅನೇಕ ಕಡೆಗಳಲ್ಲಿ ರಸ್ತೆ ಕಾಣದಂತೆ ಸಂಪೂರ್ಣ ನೀರು ಆವರಿಸಿದೆ. ಹಾಗಾಗಿ ರಸ್ತೆ ಸಂಚಾರಕ್ಕೆ ತೊಂದರೆ ಆಗಿದೆ. ಗುಡ್ಡದ ಮೇಲಿನಿಂದ ನೀರು ಹರಿದು ಬರುತ್ತಿರುವ ದೃಶ್ಯ ಸ್ಥಳೀಯರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದೊಂದು ವಾರದಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.
ಇನ್ನೂ ಮೂಡಿಗೆರೆ ತಾಲೂಕಿನ ಹೊರನಾಡು ಸಮೀಪದಲ್ಲಿರುವ ಹೆಬ್ಬಾಳೆ ಸೇತುವೆ ಕಾಣದಂತೆ ನೀರು ಹರಿಯುತ್ತಿದ್ದು, ಸೇತುವೆ ಸಂಪೂರ್ಣ ಮುಳುಗಿದೆ. ಕಳಸ – ಹೊರನಾಡು – ಕುದುರೆಮುಖ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ನೀರಿನ ಪ್ರಮಾಣ ತಗ್ಗುವವರೆಗೂ ಖಾಸಗಿ ಬಸ್, ಪ್ರವಾಸಿ ವಾಹನಗಳಿಗೆ ಸಂಚಾರ ಇಲ್ಲ. ಅಲ್ಲದೇ ಕಳಸ- ಹೊರನಾಡು ಸಂಪರ್ಕ ಬಂದ್ ಆಗಿದೆ. ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ಜನರು ಆತಂಕದಲ್ಲಿದ್ದಾರೆ.
ಚಿಕ್ಕಮಗಳೂರಲ್ಲಿ ಮುಂದುವರಿದ ಮಳೆಯ ಅಬ್ಬರಕ್ಕೆ ಶೃಂಗೇರಿಯ ಭಾರತಿ ಬೀದಿ ಹಾಗೂ ರಸ್ತೆಗಳು ಕೆರೆಯಂತಾಗಿದೆ. ಕಳೆದೊಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಶಂಗೇರಿಯ ಅನೇಕ ಕಡೆಗಳಲ್ಲಿ ರಸ್ತೆ ಕಾಣದಂತೆ ಸಂಪೂರ್ಣ ನೀರು ಆವರಿಸಿದೆ. ರಸ್ತೆಯ ತುಂಬೆಲ್ಲ ನೀರು ಹರಿಯುತ್ತಿದ್ದು ಸಂಚಾರಕ್ಕೆ ತೊಂದರೆ ಆಗಿದೆ. ಅಲ್ಲದೇ ತುಂಗಾ ನದಿ ತುಂಬಿ ಅಕ್ಕಪಕ್ಕದ ಜಮೀನಿಗೂ ನೀರು ನುಗ್ಗುತ್ತಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಮಳೆಯಿಂದಾಗಿ ಶೃಂಗೇರಿ, ಕೊಪ್ಪ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಭದ್ರಾ, ತುಂಗಾ, ಹೇಮಾವತಿ ನದಿಗಳ ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಅಪಾಯ ಮಟ್ಟವನ್ನು ಮೀರಿ ನೀರು ಹರಿಯುತ್ತಿದೆ.