ಬೆಂಗಳೂರು: ವಿಧಾನಸಭಾ ಚುನಾವಣೆ ಹೀನಾಯ ಸೋಲಿನ ಬಳಿಕ ಈಗ ರಾಜ್ಯ ಬಿಜೆಪಿ (BJP) ನಾಯಕರು, ಪರಸ್ಪರ ಕೆಸರೆರಚಾಟದಲ್ಲಿ ತೊಡಗಿ ಬೀದಿ ಜಗಳಕ್ಕಿಳಿದಿದ್ದಾರೆ. ಸೋಲಿಗೆ ಪಕ್ಷದೊಳಗಿನ ನಾಯಕರೇ ಕಾರಣ ಎಂದು ಹೇಳುತ್ತಾ ಕಿತ್ತಾಡಿಕೊಳ್ಳಲು ಆರಂಭಿಸಿದ್ದಾರೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರೇ, ಕೆಲವು ಕಡೆ ಒಳಒಪ್ಪಂದದ ಪರಿಣಾಮ ಪಕ್ಷಕ್ಕೆ ಸೋಲಾಯಿತು ಎಂದು ಬಹಿರಂಗವಾಗಿ ಹೇಳುವ ಮೂಲಕ ಆರಂಭವಾದ ಮುಸುಕಿನ ಗುದ್ದಾಟ ಈಗ ತಾರಕಕ್ಕೇರಿದೆ. ಸಿ.ಟಿ.ರವಿ ಬಳಿಕ ಸಂಸದ ಪ್ರತಾಪ್ ಸಿಂಹ, ರಮೇಶ್ ಜಿಗಜಿಣಗಿ, ಬಸನಗೌಡ ಯತ್ನಾಳ್, ಮುರುಗೇಶ್ ನಿರಾಣಿ ಮೊದಲಾದವರೂ ಕೂಡ ಬಹಿರಂಗವಾಗಿಯೇ ಸೋಲಿನ ಬಗ್ಗೆ ತಮ್ಮ ಪಕ್ಷದೊಳಗಿನ ನಾಯಕರ ಬಗ್ಗೆನೇ ಅಪಸ್ವರ ಎತ್ತಿದ್ದಾರೆ. ಇದನ್ನೂ ಓದಿ: ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಸಮರ್ಥನಿದ್ದೇನೆ: ರೇಣುಕಾಚಾರ್ಯ
Advertisement
Advertisement
ಅದು ಅಷ್ಟಕ್ಕೇ ನಿಂತಿಲ್ಲ. ಮಾಜಿ ಸಿಎಂ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಮೊದಲಾದ ಹಿರಿಯ ನಾಯಕರ ಸಮ್ಮುಖದಲ್ಲಿ ಕಾರ್ಯಕರ್ತರು, ಹಲವು ಹಿರಿಯ ಮುಖಂಡರು ಆತ್ಮಾವಲೋಕನ ಸಭೆಯಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಪರಿಸ್ಥಿತಿ ಯಾವ ಹಂತಕ್ಕೆ ಹೋಗಿದೆ ಅಂದರೆ, ನಾಯಕರು-ಕಾರ್ಯಕರ್ತರು ಲಂಗು ಲಗಾಮು ಇಲ್ಲದೇ ಹೇಳಿಕೆ ನೀಡುತ್ತಾ, ಪರಸ್ಪರ ಕಿತ್ತಾಡಿಕೊಂಡು ಕೈಕೈ ಮೀಲಾಯಿಸಿ ಬೀದಿ ಜಗಳದಲ್ಲೂ ತೊಡಗಿದ್ದಾರೆ.
Advertisement
ಮಾಜಿ ಡಿಸಿಎಂ ಈಶ್ವರಪ್ಪ ಒಂದು ಹೆಜ್ಜೆ ಮುಂದೆ ಹೋಗಿ, ಸೋಲಿಗೆ ವಲಸಿಗರೇ ಕಾರಣ. ಶಿಸ್ತಿನ ಪಕ್ಷದಲ್ಲಿ ವಲಸಿಗರಿಂದಾಗಿ ಅಶಿಸ್ತು ಹೆಚ್ಚಾಯಿತು ಎಂದು ಹೇಳಿದ್ದಾರೆ. ಈ ಎಲ್ಲಾ ವಿದ್ಯಮಾನಗಳಿಂದಾಗಿ ಪಕ್ಷ ಬಹಳಷ್ಟು ಮುಜುಗರಕ್ಕೆ ಒಳಗಾಗಿದೆ. ಇಷ್ಟೆಲ್ಲಾ ಡ್ಯಾಮೇಜ್ ಆಗುತ್ತಿದ್ದರೂ ದೆಹಲಿಯ ನಾಯಕರು ಯಾರೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಸಣ್ಣ ಪುಟ್ಟ ವಿಷಯಗಳಿಗೂ ಮಾರ್ಗದರ್ಶನ ನೀಡಿ ಲಗಾಮು ಹಾಕುತ್ತಿದ್ದ ವರಿಷ್ಠರು, ಈಗ ಯಾಕೋ ಮೌನಕ್ಕೆ ಶರಣಾಗಿದ್ದಾರೆ. ಇದನ್ನೂ ಓದಿ: ಅಕ್ಕಿ ದೊರೆತ ತಕ್ಷಣದಿಂದಲೇ ಅನ್ನಭಾಗ್ಯ ಜಾರಿ: ಸಿದ್ದರಾಮಯ್ಯ
Advertisement
ನಿಮ್ಮ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳಿ ಎಂಬಂತೆ ನಿರ್ಲಕ್ಷ್ಯ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಅದು ಇರಲಿ ಫಲಿತಾಂಶ ಬಂದು ಒಂದೂವರೆ ತಿಂಗಳು ಕಳೆದರೂ ಕನಿಷ್ಠ ಶಾಸಕಾಂಗ ನಾಯಕನ ಆಯ್ಕೆಯನ್ನೂ ಮಾಡಿಲ್ಲ. ಪ್ರತಿಪಕ್ಷ ನಾಯಕನಿಲ್ಲದೇ ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಮೇಟಿಯಿಲ್ಲದೇ ಶಾಸಕರು ಅತಂತ್ರರಾಗಿದ್ದಾರೆ. ಅವಧಿ ಮುಗಿಸಿದ ರಾಜ್ಯಾಧ್ಯಕ್ಷ ಬದಲಾವಣೆ ಮಾಡದೇ ವಿಳಂಬ ಮಾಡುತ್ತಿರುವ ಹೈಕಮಾಂಡ್ ನಡೆ ನಿಗೂಢವೆನಿಸಿದೆ.
ವರಿಷ್ಠರನ್ನು ಪ್ರಶ್ನಿಸಲಾಗದೇ ರಾಜ್ಯ ನಾಯಕರು ತಮ್ಮ ಪಾಡಿಗೆ ಓಡಾಡಿಕೊಂಡಿದ್ದಾರೆ. ಕಾರ್ಯಕರ್ತರ ಆತಂಕಕ್ಕೆ ಉತ್ತರಿಸುವವರಿಲ್ಲ. ರಾಜ್ಯ ಬಿಜೆಪಿ ಮೇಟಿ ಇಲ್ಲದ ದೋಣಿಯಂತಾಗಿದೆ. ಜುಲೈ 3 ರಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗುತ್ತಿದೆ. ಒಂದೆರಡು ದಿನದಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ಆಗಲೇಬೇಕು. ಆದರೆ ಕೊನೆ ಕ್ಷಣದ ನಿರ್ಧಾರ, ವಿಳಂಬ ಧೋರಣೆ ನಿಷ್ಠಾವಂತರನ್ನು ಚಿಂತೆಗೆ ದೂಡಿದೆ. ಯಾವ ಸಮುದಾಯವರು ಪ್ರತಿಪಕ್ಷ ನಾಯಕರಾಗಬೇಕು? ಯಾರು ಉಪನಾಯಕ, ಸಚೇತಕ, ಪರಿಷತ್ ಪ್ರತಿಪಕ್ಷ ನಾಯಕ, ಪರಿಷತ್ ಸಚೇತಕ ಎಂಬ ಸಮೀಕರಣದಲ್ಲಿ ನೇಮಕ ನಡೆಯಲಿದೆ. ಎಲ್ಲದಕ್ಕೂ ಈ ವಾರದಲ್ಲೇ ಉತ್ತರ ಸಿಗಲಿದೆ. ಇದನ್ನೂ ಓದಿ: ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಡಿಕೆಶಿ, ಅಶ್ವಥ್ ನಾರಾಯಣ್ ಮುಖಾಮುಖಿ; ಪರಸ್ಪರ ಟಾಂಗ್