ಬೆಂಗ್ಳೂರಲ್ಲಾಯ್ತು, ಈಗ ಹಾಸನದಲ್ಲೂ ಕೆರೆಗೆ ಬಿತ್ತು ಬೆಂಕಿ!

Public TV
1 Min Read
hsn lake

ಹಾಸನ: ಕೆರೆಯ ನೀರಿನ ಮಧ್ಯದಿಂದ ಬಾನೆತ್ತರಕ್ಕೆ ಸಾಗಿದ ಬೆಂಕಿ. ದಟ್ಟ ಹೊಗೆಯಿಂದ ಜನರೆಲ್ಲಾ ಕಂಗಾಲು. ಹೌದು, ಕೆರೆಗೂ ಬೆಂಕಿ ಬೀಳುತ್ತಾ ಎಂದು ಕೇಳಬೇಡಿ. ಯಾಕೆಂದರೆ ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ವಿಚಾರ ಜನಮಾನಸದಿಂದ ಮಾಸುವ ಮುನ್ನವೇ ಹಾಸನದಲ್ಲೂ ಇಂಥದ್ದೇ ಘಟನೆ ನಡೆದಿದೆ. ತಮ್ಮ ಸ್ವಾರ್ಥ ಸಾಧನೆಗಾಗಿ ಕೆಲವರು ಮಾಡುತ್ತಿರುವ ಸಣ್ಣ ಸಣ್ಣ ಲೋಪಗಳಿಂದಾಗಿ ಇಡೀ ಊರಿನ ಜನರೇ ಸಮಸ್ಯೆಗೆ ಸಿಲುಕುವಂತಾಗಿದೆ.

ಏನಾಯ್ತು?: ಹಾಸನದ ದೊಡ್ಡಬಸವನಹಳ್ಳಿ ಕೆರೆಯಲ್ಲಿ ಬಿಸಿಲ ಬೇಗೆಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಘಟಕದಿಂದ ಕಚ್ಚಾತೈಲಗಳನ್ನು ಕೆರೆಗೆ ಬಿಡಲಾಗುತ್ತಿದೆ ಇದರಿಂದಾಗಿಯೇ ಈ ಅವಘಡ ಸಂಭವಿಸಿದೆ. ಕುಡಿಯುವ ನೀರು ಸಂಪೂರ್ಣ ಕಲುಷಿತವಾಗಿದ್ದು ಪೆಟ್ರೋಲ್ ಮತ್ತು ಡೀಸೆಲ್ ವಾಸನೆ ಬರುತ್ತಿದೆ. ಐದಾರು ಗ್ರಾಮಗಳ ಜನ್ರು ಈ ಕೆರೆಯನ್ನೇ ಅವಲಂಬಿಸಿದ್ದಾರೆ. ಕುಡಿಯುವ ನೀರಿಲ್ಲದೇ ಜನರು ಪರದಾಡುತ್ತಿದ್ದಾರೆ.

ಮಂಗಳೂರಿನಿಂದ ಹಾಸನಕ್ಕೆ ಪೆಟ್ರೋಲಿಯಂ ಪೈಪ್ ಲೈನ್ ಹಾಕಿದ್ದಾರೆ. ಬಿಸಿಲು ಹೆಚ್ಚಾದಾಗ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳುತ್ತಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇಡೀ ಕೆರೆ ಪೆಟ್ರೋಲ್ ಮಯವಾಗಿದ್ದು ಕೆರೆಯ ನೀರಿಗೆ ಬೆಂಕಿ ಹೊತ್ತಿಕೊಂಡು ಹೊಗೆ ನೂರಾರು ಅಡಿ ಎತ್ತರಕ್ಕೆ ಹಾರುತ್ತಿದೆ. ಈ ಬಗ್ಗೆ ಹಿಂದೂಸ್ತಾನ್ ಪೆಟ್ರೋಲಿಯಂ ಘಟಕದ ಅಧಿಕಾರಿಗಳಿಗೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *