ನಿನ್ನ ನೇತೃತ್ವದಲ್ಲಿ ಪಕ್ಷಕ್ಕೆ ಶಕ್ತಿ ತುಂಬೋಣ – ಬೊಮ್ಮಾಯಿ ಆಶೀರ್ವಾದ ಪಡೆದ ವಿಜಯೇಂದ್ರ

Public TV
1 Min Read
basavaraj bommai by vijayendra

ಬೆಂಗಳೂರು: ಶಾಸಕ ಬಿ ವೈ ವಿಜಯೇಂದ್ರ (BY Vijayendra) ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಸೋಮವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ವಿಜಯೇಂದ್ರ, ನಿಕಟಪೂರ್ವ ಮುಖ್ಯಮಂತ್ರಿ, ನಮ್ಮೆಲ್ಲರ ಹಿರಿಯರಾದ ಬಸವರಾಜ ಬೊಮ್ಮಾಯಿ ಅವರನ್ನು ದೀಪಾವಳಿ ಶುಭ ಸಂದರ್ಭದಲ್ಲಿ ಭೇಟಿ ಮಾಡಿ ಅವರ ಆಶೀರ್ವಾದ ಪಡೆದಿದ್ದೇನೆ. ಅಲ್ಲದೆ ಮಾರ್ಗದರ್ಶನವನ್ನು ಕೋರಿದ್ದೇನೆ. ಅವರು ಬಹಳ ಸಂತೋಷ ಪಟ್ಟಿದ್ದಾರೆ. ರಾಜ್ಯಾಧ್ಯಕ್ಷರಾಗಿ ನಿನ್ನ ನೇಮಕ ಮಾಡುವ ಮೂಲಕ ರಾಷ್ಟ್ರೀಯ ನಾಯಕರು ಅತ್ಯುತ್ತಮ ನಿರ್ಣಯ ಮಾಡಿದ್ದಾಗಿ ಬೊಮ್ಮಾಯಿಯವರು ಹೇಳಿದ್ದಾರೆಂದು ತಿಳಿಸಿದರು.

ಈ ನೇಮಕದಿಂದ ರಾಜ್ಯಕ್ಕೆ, ರಾಜ್ಯ ಬಿಜೆಪಿಗೆ (Karnataka BJP) ದೊಡ್ಡ ಶಕ್ತಿ ಬಂದಂತಾಗಿದೆ ಎಂದು ತಿಳಿಸಿದ್ದಾಗಿ ವಿವರಿಸಿದರು. ನಾನಷ್ಟೇ ಅಲ್ಲ, ಹಿರಿಯರೆಲ್ಲರೂ ನಿನ್ನ ಜೊತೆ ಇರಲಿದ್ದೇವೆ. ಸಹಕಾರ ನೀಡುವ ಮತ್ತು ಮಾರ್ಗದರ್ಶನ ನೀಡುವ ಮಾತನಾಡಿದ್ದಾರೆ ಎಂದರು.  ಇದನ್ನೂ ಓದಿ: ದೀಪಾವಳಿಗೆ ಭಾರತದ ಕಂಪನಿಗಳು ದೀರ್ಘ ರಜೆ ನೀಡಲ್ಲ ಯಾಕೆ – ಎಡೆಲ್ವೀಸ್ ಮ್ಯೂಚುವಲ್‌ ಫಂಡ್‌ ಸಿಇಒ ಪ್ರಶ್ನೆ

ದೇಶದ ಭವಿಷ್ಯ ರೂಪಿಸುವ ಮುಂಬರುವ ಲೋಕಸಭಾ ಚುನಾವಣೆಯನ್ನು ನಾವೆಲ್ಲರೂ ಒಗ್ಗಟ್ಟಾಗಿ ಎದುರಿಸಬೇಕಾಗಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವನ್ನು ನಿನ್ನ ನೇತೃತ್ವದಲ್ಲಿ ಮಾಡೋಣ ಎಂದು ತಿಳಿಸಿದ್ದಾರೆ. ಇದೇ 15ರಂದು ಬುಧವಾರ ಜವಾಬ್ದಾರಿ ಸ್ವೀಕರಿಸುವ ಸಂದರ್ಭದಲ್ಲಿ ತಾವು ಬಂದು ಆಶೀರ್ವಾದ ಮಾಡಬೇಕೆಂದು ಕೋರಿದ್ದೇನೆ. ಕಾರ್ಯಕ್ರಮಕ್ಕೆ ಬರಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

 

ಈ ವೇಳೆ ಬಿ.ವೈ.ವಿಜಯೇಂದ್ರ ಅವರನ್ನು ಬಸವರಾಜ ಬೊಮ್ಮಾಯಿ ಅವರು ಅಭಿನಂದಿಸಿ ಶುಭ ಹಾರೈಸಿದರು. ಶಾಸಕ ಕೃಷ್ಣಪ್ಪ, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article