ಲಕ್ನೋ: ಉತ್ತರ ಪ್ರದೇಶದ ಅಮೇಥಿ ಹಾಗೂ ರಾಯ್‍ಬರೇಲಿ ಲೋಕಸಭಾ ಕ್ಷೇತ್ರದಿಂದ ಯಾಕೆ ಎಸ್‍ಪಿ-ಬಿಎಸ್‍ಪಿ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ನಾಯಕಿ ಮಾಯಾವತಿ ಸ್ಪಷ್ಟನೆ ನೀಡಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆಯ ಜೊತೆಗೆ ಮಾತನಾಡಿರುವ ಮಾಯಾವತಿ ಅವರು, ದೇಶದ ಜನಹಿತಕ್ಕಾಗಿ ಹಾಗೂ ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್ ) ಶಕ್ತಿಯನ್ನು ಕುಂದಿಸಲು ಅಮೇಥಿ ಹಾಗೂ ರಾಯ್‍ಬರೇಲಿ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿದ್ದೇವೆ. ಈ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸ್ವಕ್ಷೇತ್ರದಿಂದ ಜಯಗಳಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ನಾವು ಅಮೇಥಿ ಹಾಗೂ ರಾಯ್‍ಬರೇಲಿ ಕ್ಷೇತ್ರದಿಂದ ಎಸ್‍ಪಿ-ಬಿಎಸ್‍ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ ಅವರು ಎರಡು ಕ್ಷೇತ್ರಗಳ ಪ್ರಚಾರದಲ್ಲಿಯೇ ಕಳೆದುಹೋಗುತ್ತಿದ್ದರು. ಉತ್ತರ ಪ್ರದೇಶ ಬಿಟ್ಟು ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರ ಗೈರು ಬಿಜೆಪಿಗೆ ದೊಡ್ಡ ಅವಕಾಶ ನೀಡುತ್ತಿತ್ತು. ಹೀಗಾಗಿ ಮುಂದಾಲೋಚನೆಯಿಂದ ಉತ್ತರ ಪ್ರದೇಶದ ಎರಡು ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿದ್ದೇವೆ ಎಂದು ಹೇಳಿದರು.
ಅಮೇಥಿ ಹಾಗೂ ರಾಯ್‍ಬರೇಲಿ ಲೋಕಸಭಾ ಕ್ಷೇತ್ರಗಳಲ್ಲಿ ಎಸ್‍ಪಿ-ಬಿಎಸ್‍ಪಿ ಮೈತ್ರಿಯ ಪ್ರತಿಯೊಂದು ಮತವೂ ಕಾಂಗ್ರೆಸ್‍ಗೆ ಸಿಗುತ್ತವೆ ಎನ್ನುವ ವಿಶ್ವಾಸ ನನಗಿದೆ ಎಂದು ಮಾಯಾವತಿ ತಿಳಿಸಿದರು.
ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಿದ್ದು, ಎಸ್‍ಪಿ-ಬಿಎಸ್‍ಪಿ ಮೈತ್ರಿ ಮಾಡಿಕೊಂಡಿವೆ. ಈ ಮೂಲಕ ಎಸ್‍ಪಿ 37 ಹಾಗೂ ಬಿಎಸ್‍ಪಿ 38 ಕ್ಷೇತ್ರಗಳನ್ನು ಹಂಚಿಕೊಂಡು ಸ್ಪರ್ಧೆ ಮಾಡಿವೆ. ಉಳಿದ ಐದು ಕ್ಷೇತ್ರಗಳ ಪೈಕಿ ಮೂರು ಪಕ್ಷೇತರ ಅಭ್ಯರ್ಥಿಗಳಿಗೆ ಹಾಗೂ ಎರಡು ಕಾಂಗ್ರೆಸ್‍ಗೆ ಬಿಟ್ಟುಕೊಡಲಾಗಿದೆ. ಉತ್ತರ ಪ್ರದೇಶದ ಅಮೇಥಿ, ರಾಯ್‍ಬರೇಲಿ ಲಕ್ನೋ, ಘಾಜಿಯಾಬಾದ್ ಸೇರಿದಂತೆ 14 ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ. ಈ ಮೂಲಕ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.