370 ಕಿತ್ತು ಹಾಕಿದ ಬಳಿಕ ಮೊದಲ ಗುಂಡಿನ ಚಕಮಕಿ – ಉಗ್ರ ಹತ್ಯೆ, ಪೊಲೀಸ್ ಅಧಿಕಾರಿ ಹುತಾತ್ಮ

Public TV
1 Min Read
jammu kashmir Encounter AP

ಶ್ರೀನಗರ: ಉಗ್ರರು ಹಾಗೂ ಭದ್ರತಾ ಸಿಬ್ಬಂದಿಯ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಜಮ್ಮು ಕಾಶ್ಮೀರದ ವಿಶೇಷ ಪೊಲೀಸ್ ಅಧಿಕಾರಿ(ಎಸ್‍ಪಿಓ) ಹುತಾತ್ಮರಾಗಿ, ಮತ್ತೊರ್ವ ಸಬ್ ಇನ್ಸ್‍ಪೆಕ್ಟರ್ ಗಂಭೀರ ಗಾಯಗೊಂಡಿರುವ ಘಟನೆ ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದಿದೆ.

ಮಂಗಳವಾರ ತಡರಾತ್ರಿ ಉಗ್ರರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಪೊಲೀಸರು ಸಹ ಓರ್ವ ಉಗ್ರನನ್ನು ಗುಂಡಿಕ್ಕಿ ಕೊಂದಿದ್ದಾರೆ. ಹುತಾತ್ಮರಾದ ಎಸ್‍ಪಿಓ ಅವರನ್ನು ಬಿಲ್ಲಾಲ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಸಬ್ ಇನ್ಸ್ ಪೆಕ್ಟರ್ ಅಮರ್ ದೀಪ್ ಪರಿಹಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ಮಧ್ಯೆ ಮಂಗಳವಾರ ಸಂಜೆ ಪ್ರಾರಂಭವಾದ ಗುಂಡಿನ ಚಕಮಕಿ, ರಾತ್ರಿಯವರೆಗೂ ನಡೆದಿದ್ದು, ಇಂದು ಬೆಳಗ್ಗೆ ಜಮ್ಮು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿ ಮಾಹಿತಿ ನೀಡುವ ಮೂಲಕ ಎನ್‍ಕೌಂಟರ್ ಅಂತ್ಯವಾಗಿರುವುದನ್ನು ಖಚಿತಪಡಿಸಿದ್ದಾರೆ.

ಗುಂಡಿನ ಚಕಮಕಿ ಪೂರ್ಣಗೊಂಡಿದ್ದು, ಒಬ್ಬ ಉಗ್ರ ಹತನಾಗಿದ್ದಾನೆ. ಈತನ ಗುರುತನ್ನು ಪತ್ತೆ ಹಚ್ಚಲಾಗುತ್ತಿದೆ. ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ನಮ್ಮ ಸಹೋದ್ಯೋಗಿ ಎಸ್‍ಪಿಓ ಬಿಲ್ಲಾಲ್ ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಎಸ್‍ಐ ಅಮರ್ ದೀಪ್ ಪರಿಹಾರ್ ಅವರು ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಇಲಾಖೆ ಟ್ವೀಟ್ ಮಾಡಿ ಖಚಿತಪಡಿಸಿದೆ.

ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ನಡೆದ ಮೊದಲ ಗುಂಡಿನ ಚಕಮಕಿ ಇದಾಗಿದೆ. ಆಗಸ್ಟ್ 5ರಂದು ಕೇಂದ್ರ ಸರ್ಕಾರ 370ನೇ ವಿಧಿಯನ್ನು ರದ್ದುಪಡಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *