ಹಾಸನ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳ ಸೆರೆ ಕಾರ್ಯಾಚರಣೆ ನಾಳೆಯಿಂದ (ಶನಿವಾರ) ಮತ್ತೆ ಆರಂಭಗೊಳ್ಳಲಿದೆ. ದುಬಾರೆ ಹಾಗೂ ಮತ್ತಿಗೋಡು ಶಿಬಿರದಿಂದ ಎಂಟು ಸಾಕಾನೆಗಳು ಆಗಮಿಸಿದ್ದು, ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದ ಬಳಿಯ ಕ್ಯಾಂಪ್‌ನಲ್ಲಿವೆ. ಈ ಭಾರಿ ನುರಿತ ತಂಡದೊಂದಿಗೆ ಕಾರ್ಯಾಚರಣೆ ಆಗಮಿಸಲಿದ್ದು ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಅಂಬಾರಿ ಹೊತ್ತಿದ್ದ ಅಭಿಮನ್ಯು (Abhimanyu Elephant) ಸಹ ಕಾಡಾನೆಗಳ ಹಂಟಿಂಗ್ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದೆ. ಇಂದು (ಶುಕ್ರವಾರ) ಎಂಟು ಸಾಕಾನೆಗಳಿಗೆ ಪೂಜೆ ಸಲ್ಲಿಸಿ ಕಬ್ಬು, ಬೆಲ್ಲ ನೀಡಲಾಯಿತು. ಈಗಾಗಲೇ ಸೆರೆ ಹಿಡಿಯುವ ಸಲಗಗಳನ್ನು ಗುರುತಿಸಲಾಗಿದ್ದು, ನಾಳೆಯಿಂದ ಸತತ ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಯಲಿದೆ. ಇದನ್ನೂ ಓದಿ: ಅರ್ಜುನನ ಕಾಲಿಗೆ ಗುಂಡೇಟು ಬಿದ್ದಿಲ್ಲ, ಯಾವುದೇ ಲೋಪ ಆಗಿಲ್ಲ: ವೈದ್ಯ ರಮೇಶ್ ಸ್ಪಷ್ಟನೆ
Advertisement
Advertisement
ಮಲೆನಾಡ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ನ.24 ರಿಂದ ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿ ಆರು ಸಾಕಾನೆಗಳೊಂದಿಗೆ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಎರಡು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅಲ್ಲಿಯೇ ಬಿಡಲಾಗಿದ್ದರೆ, ಮೂರು ಪುಂಡಾನೆಗಳನ್ನು ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು. ಡಿ.4 ರಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮದಗಜದೊಂದಿಗೆ ಕಾದಾಟದ ವೇಳೆ ಅರ್ಜುನ ವೀರಮರಣವನ್ನಪ್ಪಿದ್ದ. ಅಂದಿನಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಕಾರ್ಯಾಚರಣೆ ಮುಂದುವರೆಸಲು ತೀರ್ಮಾನಿಸಲಾಗಿದ್ದು, ನಾಳೆಯಿಂದ ಕಾಡಾನೆ ಹಂಟಿಂಗ್ ಆಪರೇಷನ್ ಶುರುವಾಗಲಿದೆ.
Advertisement
ದುಬಾರೆ, ಮತ್ತಿಗೋಡು ಆನೆ ಶಿಬಿರದಿಂದ ಅಭಿಮನ್ಯು, ಪ್ರಶಾಂತ, ಸುಗ್ರೀವ, ಅಶ್ವತ್ಥಾಮ, ಕರ್ನಾಟಕ ಭೀಮ, ಹರ್ಷ, ಮಹೇಂದ್ರ, ಧನಂಜಯ ಸೇರಿ ಎಂಟು ಸಾಕಾನೆಗಳು ಬಿಕ್ಕೋಡು ಬಳಿಯ ಶಿಬಿರಕ್ಕೆ ಆಗಮಿಸಿದ್ದು ಇಂದು ಸ್ಥಳೀಯ ಶಾಸಕ ಹೆಚ್.ಕೆ.ಸುರೇಶ್ ಹಾಗೂ ಅರಣ್ಯ ಅಧಿಕಾರಿಗಳು ಪೂಜೆ ಸಲ್ಲಿಸಿ ಕಬ್ಬು, ಬೆಲ್ಲ ನೀಡಿ ಆಪರೇಷನ್ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಬೇಲೂರು ಭಾಗದಲ್ಲಿ ಸುಮಾರು ನಲವತ್ತು ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು ಕಳೆದ ವಾರ ಮತ್ತಾವರ ಗ್ರಾಮದಲ್ಲಿ ಕಾಡಾನೆ ದಾಳಿಗೆ ವಸಂತ ಎಂಬವರು ಬಲಿಯಾಗಿದ್ದರು. ಇದರಿಂದ ಸರ್ಕಾರದ ಹಾಗೂ ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಆದ್ದರಿಂದ ನಾಳೆ ಬೇಲೂರು ಭಾಗದಿಂದಲೇ ನರಹಂತಕ ಆನೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭವಾಗಲಿದ್ದು, ಜನರಿಗೆ ಆಗುವ ಸಮಸ್ಯೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಹೆಚ್.ಕೆ.ಸುರೇಶ್ ಹೇಳಿದ್ದಾರೆ. ಇದನ್ನೂ ಓದಿ: ಸಕಲೇಶಪುರದ ಗ್ರಾಮದೊಳಗೆ ಎಂಟ್ರಿ ಕೊಟ್ಟ ಗಜಪಡೆ – ಗುಂಪಿನಲ್ಲಿ ಸೇರಿಕೊಂಡ ಅರ್ಜುನನನ್ನು ಕೊಂದ ಪುಂಡಾನೆ
Advertisement
ಕಳೆದ ಬಾರಿಯ ಕಾರ್ಯಾಚರಣೆಯಲ್ಲಿ ಆದ ಅನಾಹುತದಿಂದ ಎಚ್ಚೆತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು ಈ ಸಲ ನುರಿತ ಅರವಳಿಕೆ ವೈದ್ಯರು ಹಾಗೂ ತಂಡದೊಂದಿಗೆ ಕಾರ್ಯಾಚರಣೆ ನಡೆಸಲಿದ್ದಾರೆ. ಇಂದು ಪೂಜೆ ನಂತರ ಕಾರ್ಯಾಚರಣೆಯಲ್ಲಿ ಭಾಗಿಯಾಗುವ ತಂಡದ ಜೊತೆ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ಸಮಾಲೋಚನೆ ನಡೆಸಿ ಅಗತ್ಯ ಸಲಹೆ ಹಾಗೂ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಿದರು. ಮೊದಲು ಮುಂದುವರಿದ ಭಾಗವಾಗಿ ಮೂರು ಸಲಗಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗುವುದು. ನಂತರ ಹೆಚ್ಚು ಉಪಟಳ ನೀಡುತ್ತಿರುವ ಕಾಡಾನೆಗಳ ಜೊತೆಗೆ ಅರ್ಜುನನ ಸಾವಿಗೆ ಕಾರಣವಾದ ನರಹಂತಕ ಆನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗುವುದು. ಇದಕ್ಕೆ ಬೇಕಾದಂತಹ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು ಎಲ್ಲರೂ ಸಹಕಾರ ನೀಡಬೇಕೆಂದು ಸಿಸಿಎಫ್ ರವಿಶಂಕರ್ ಮನವಿ ಮಾಡಿದ್ದಾರೆ.
ಕಳೆದ ಎರಡು ದಶಗಳಿಂದ ಸಕಲೇಶಪುರ, ಆಲೂರು ಹಾಗೂ ನಾಲ್ಕೈದು ವರ್ಷಗಳಿಂದ ಬೇಲೂರು ಭಾಗದಲ್ಲಿ ಗಜಪಡೆ ಗಲಾಟೆ ಮಿತಿಮೀರಿದ್ದು ರೈತರು ಹಾಗೂ ಕಾಫಿ ಬೆಳೆಗಾರರು ಕಂಗಾಲಾಗಿ ಹೋಗಿದ್ದಾರೆ. ಆದರೆ ಸರ್ಕಾರಗಳು ಒಂದೆರಡು ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡಿದರೆ ಸಾಲದು. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕೆಂಬುದು ಎಲ್ಲರ ಒಕ್ಕೊರಲ ಒತ್ತಾಯವಾಗಿದೆ. ಆದರೆ ಭರವಸೆಗಳನ್ನು ನೀಡುತ್ತಲೇ ಇರುವ ಸರ್ಕಾರ ಹಾಗೂ ಅರಣ್ಯ ಇಲಾಖೆ ಮಲೆನಾಡು ಭಾಗದ ಜನರ ನೆಮ್ಮದಿ ಕೆಡಿಸಿರುವ ಪುಂಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡುವ ಮೂಲಕ ತಾತ್ಕಾಲಿಕ ಪರಿಹಾರ ನೀಡಲು ಮುಂದಾಗಿವೆ. ಇದನ್ನೂ ಓದಿ: ಅರ್ಜುನನ ದುರಂತ ಅಂತ್ಯ – ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ