Latest

ಪವಾಡ.. ದೇಹದೊಳಗೆ 9 ಗುಂಡು ಹೊಕ್ಕಿ ಐಸಿಯುನಲ್ಲಿದ್ದ ಯೋಧ ಗುಣಮುಖ, ಶೀಘ್ರವೇ ಡಿಸ್ಚಾರ್ಜ್

Published

on

Share this

ನವದೆಹಲಿ: ತಲೆ, ಕಣ್ಣು ಹಾಗೂ ದೇಹದ ನಾನಾ ಭಾಗಗಳಿಗೆ ಸುಮಾರು 9 ಗುಂಡುಗಳು ಹೊಕ್ಕಿ ಎರಡು ತಿಂಗಳ ಹಿಂದೆ ಆಸ್ಪತ್ರೆ ಸೇರಿದ್ದ ಸಿಆರ್‍ಪಿಎಫ್ ಯೋಧರೊಬ್ಬರ ಆರೋಗ್ಯ ಸುಧಾರಣೆಯಾಗುತ್ತಿದ್ದು, ಆಸ್ಪತ್ರೆಯಿಂದ ಶೀಘ್ರವೇ ಡಿಸ್ಚಾರ್ಜ್ ಆಗಲಿದ್ದಾರೆ.

ಕಾಶ್ಮೀರದಲ್ಲಿ ಉಗ್ರರ ಜೊತೆಗಿನ ಹೋರಾಟದಲ್ಲಿ ತೀವ್ರ ಗಾಯಗೊಂಡು ಏಮ್ಸ್ ಆಸ್ಪತ್ರೆ ಸೇರಿದ್ದ 45 ವರ್ಷದ ಚೇತನ್ ಕುಮಾರ್ ಆರೋಗ್ಯ ಸುಧಾರಣೆಯಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನಡೆದಿದ್ದೇನು?: ಕಳೆದ ಫೆಬ್ರವರಿ 14ರಂದು ಬಂಡಿಪೋರದಲ್ಲಿ ನಡೆದ ಯೋಧರು ಮತ್ತು ಉಗ್ರರ ನಡುವಿನ ಗುಂಡಿನ ಕಾಳಗದ ವೇಳೆ ಯೋಧ ಚೇತನ್ ಕುಮಾರ್ ಚೇತಾ ಅವರ ತಲೆ, ಕಣ್ಣು, ಕೈ ಹಾಗೂ ದೇಹದ ಇತರ ಭಾಗಗಳಿಗೆ ಗುಂಡು ಹೊಕ್ಕಿತ್ತು. ಪರಿಣಾಮ ತೀವ್ರ ಗಾಯಗೊಂಡು ಪ್ರಜ್ಞಾ ಹೀನರಾಗಿ ಬಿದ್ದಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರಿಸ್ಥಿತಿ ಗಂಭೀರವಾಗಿದ್ದರಿಂದ 1 ತಿಂಗಳು ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇದೀಗ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಶೀಘ್ರವೇ ಅವರನ್ನು ಆಸ್ಪತ್ರೆಯಂದ ಡಿಸ್ಚಾರ್ಜ್ ಮಾಡಲಾಗುವುದು. ಇದೊಂದು ಪವಾಡವೇ ಸರಿ ಅಂತಾ ಏಮ್ಸ್ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

ಚೇತನ್ ಅವರಿಗೆ ಪ್ರಜ್ಞೆ ಬಂದಿರುವ ವಿಚಾರ ತಿಳಿಯುತ್ತಿದ್ದಂತೆಯೇ ಕೇಂದ್ರ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಕಠಿಣ ಪರಿಸ್ಥಿತಿಯಲ್ಲಿದ್ದ ಚೇತನ್ ಅವರನ್ನು ಇಂದು ನೋಡಿದಾಗ ಬಹಳ ಖುಷಿಯಾಗ್ತಿದೆ. ಇಂದು ಅವರು ಈ ಸ್ಥಿತಿಯಲ್ಲಿದ್ದಾರೆ ಅಂದ್ರೆ ಅದೊಂದು ಪವಾಡ ಅಂತಾನೇ ಹೇಳಬಹುದು. ಚೇತನ್ ಅವರಿಗೆ ಏಮ್ಸ್ ಆಸ್ಪತ್ರೆಯೆ ಹಲವು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದ್ರೆ ಅವರ ಬಲಗಣ್ಣಿಗೆ ಗಂಭೀರ ಗಾಯವಾಗಿದ್ದರಿಂದ ಅದನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ಕಣ್ಣಿನ ತಜ್ಞರು, ನರತಜ್ಞರು ಹಾಗೂ ಪ್ಲ್ಯಾಸ್ಟಿಕ್ ಸರ್ಜರಿ ಮಾಡೋ ವಿಶೇಷ ತಜ್ಞರು ಕೂಡ ಚೇತನ್ ಅವರನ್ನು ಬದುಕಿಸುವಲ್ಲಿ ಸತತ ಪ್ರಯತ್ನ ಪಟ್ಟಿದ್ದಾರೆ. ಹೀಗಾಗಿ ಅವರಲ್ಲರಿಗೂ ನಾವು ಅಭಿನಂದನೆ ಸಲ್ಲಿಸಬೇಕು ಅಂತಾ ಅವರು ಹೇಳಿದ್ರು.

ಚೇತನ್ ಅವರ ಧೈರ್ಯಕ್ಕೆ ನಾವು ಹೆಮ್ಮೆ ಪಡುತ್ತೇವೆ. ಅವರೊಬ್ಬ ಧೈರ್ಯಶಾಲಿ ಅಧಿಕಾರಿ. ಅವರ ಹೋರಾಟ ಇನ್ನಿತರೆ ಯೋಧರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಚೇತನ್ ಅವರ ಮುಖದಲ್ಲಿ ನಗು ಕಾಣುತ್ತಿದ್ದು, ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಉತ್ಸುಕರಾಗಿದ್ದಾರೆ. ಇದು ಅವರಲ್ಲಿರುವ ಶಕ್ತಿ ಹಾಗೂ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.

ಲಷ್ಕರ್-ಇ- ತಾಯ್ಬಾ ಉಗ್ರರು ಫೆಬ್ರವರಿ 14ರಂದು ಈ ದಾಳಿ ನಡೆಸಿದ್ದು ಎಂದು ಶಂಕಿಸಲಾಗಿದ್ದು, ಘಟನೆಯಲ್ಲಿ 3 ಭದ್ರತಾ ಸಿಬ್ಬಂದಿ, 8 ಮಂದಿ ನಾಗರಿಕರು ಗಾಯಗೊಂಡಿದ್ದರು. ತನ್ನ ಮೇಲೆ ಗುಂಡಿನ ದಾಳಿ ನಡೆಯೋದಕ್ಕಿಂತ ಮೊದಲು ಚೇತನ್ ಕುಮಾರ್ ಉಗ್ರರ ಮೇಲೆ 16 ಸುತ್ತು ಗುಂಡು ಹಾರಿಸಿದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement