Connect with us

Chikkaballapur

ರಾಜ್ಯದ ಹಲವೆಡೆ ಧಾರಾಕಾರ ಮಳೆ-8 ವರ್ಷಗಳ ನಂತರ ಚಿತ್ರಾವತಿ ಜಲಾಶಯ ಭರ್ತಿ

Published

on

– ತುಮಕೂರಿನಲ್ಲಿ ತುಂಬಿದ ಕೆರೆ ಕಟ್ಟೆಗಳು, ತಗ್ಗುಪ್ರದೇಶಕ್ಕೆ ನುಗ್ಗಿದ ನೀರು

ಬೆಂಗಳೂರು: ಬರಪೀಡಿತ ಜಿಲ್ಲೆ ಅಂತ ಹಣೆ ಪಟ್ಟಿಕೊಂಡಿದ್ದ ಬಯಲುಸೀಮೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟವೋ ಆರ್ಭಟ. ಸತತ 7 ವರ್ಷಗಳಿಂದ ಬರಪೀಡಿತವಾಗಿದ್ದ ಜಿಲ್ಲೆಯಲ್ಲಿ ಈ ಬಾರಿ ವರುಣ ದೇವ ಕೃಪೆ ತೋರಿದ್ದಾನೆ.

8 ವರ್ಷಗಳ ನಂತರ ಬಾಗೇಪಲ್ಲಿ ತಾಲೂಕಿನ ಪರಗೋಡು ಬಳಿಯ ಚಿತ್ರಾವತಿ ಜಲಾಶಯ ಕೋಡಿ ಹರಿದಿದ್ದು ಸಾರ್ವಜನಿಕರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಬಾಗೇಪಲ್ಲಿ ಹಾಗೂ ಗುಡಿಬಂಡೆ ಪಟ್ಟಣಗಳಿಗೆ ನೀರು ಒದಗಿಸುವ ಪ್ರಮುಖ ಜಲಾಶಯ ಇದಾಗಿದೆ.

ಇನ್ನೂ ಜಿಲ್ಲೆಯಲ್ಲಿ ಕೂಡ ಹಲವೆಡೆ ಭಾರೀ ಮಳೆಯಾಗಿದ್ದು ಹಲವು ಕರೆಗಳು ಈ ಬಾರಿ ಕೋಡಿ ಹರಿದಿವೆ. ಹಲವು ವರ್ಷಗಳಿಂದ ನೀರೇ ಕಾಣದ ನೂರಾರು ಕೆರೆಗಳು ನೀರಿನಿಂದ ತುಂಬಿ ಜಿಲ್ಲೆಯ ಜನ ನಿಟ್ಟುಸಿರು ಬಿಡುವಂತಾಗಿದೆ. ಜಲಾಶಯ ಕೋಡಿ ಹರಿದ ಹಿನ್ನೆಲೆ ಇಂದು ಬಾಗೇಪಲ್ಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಹಾಗೂ ಜನಪ್ರತಿನಿಧಿಗಳು ಬಾಗಿನ ಅರ್ಪಿಸಲಿದ್ದಾರೆ.

ಇನ್ನೂ ಕೋಲಾರ ಜಿಲ್ಲೆಯಲ್ಲೂ ಧಾರಾಕಾರ ಮಳೆ ಸುರಿದಿದೆ. ಕಳೆದ ರಾತ್ರಿ ಧಾರಾಕಾರ ಮಳೆ ಹಿನ್ನೆಲೆ ಬಂಗಾರಪೇಟೆ ಪಟ್ಟಣದ ಸಿ. ರಹೀಂ ಕಾಂಪೌಂಡ್ ಕುಸಿದಿದೆ. ಹುಣಸನಹಳ್ಳಿ ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ರಸ್ತಗಳೆಲ್ಲ ಜಲಾವೃತವಾಗಿದೆ.

ಹುಣಸನಹಳ್ಳಿ ಗ್ರಾಮದ ಗೌರಮ್ಮ ಎಂಬುವವರ ಮನೆ ಕುಸಿದಿದ್ದು, ಬಂಗಾರಪೇಟೆ ತಾಲ್ಲೂಕಿನ 25 ಕ್ಕೂ ಹೆಚ್ಚು ಕೆರೆಗಳು ಕೋಡಿ ಹೋದ ಹಿನ್ನೆಲೆಯಲ್ಲಿ ಹುಣಸನಹಳ್ಳಿ ರೈಲ್ವೆ ಅಂಡರ್ ಪಾಸ್ ಜಲಾವೃತವಾಗಿದೆ. ಜಿಲ್ಲೆಯಾದ್ಯಂತ ಉತ್ತಮ ಮಳೆ ಹಿನ್ನೆಲೆಯಲ್ಲಿ ಬೇತಮಂಗಲ ಕೆರೆ ಕೋಡಿ ತುಂಬಿ 16 ಗೇಟ್‍ಗಳಲ್ಲೂ ಕೋಡಿಯಲ್ಲಿ ನೀರು ಹರಿಯುತ್ತಿದೆ.

ತುಮಕೂರು ಜಿಲ್ಲೆಯಲ್ಲೂ ಹಲವೆಡೆ ಭಾರಿ ಮಳೆ ಸುರಿದಿದೆ. ಕೆರೆ ಕಟ್ಟೆಗಳು, ತಗ್ಗುಪ್ರದೇಶಕ್ಕೆ ನೀರು ನುಗ್ಗಿ ತುಂಬಿದೆ. ನಗರದ ಅಂತರಸನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿ, ಪೀಠೋಪಕರಣ, ಬೆಲೆ ಬಾಳುವ ವಸ್ತುಗಳ ಹಾನಿಯಾಗಿದೆ.

Click to comment

Leave a Reply

Your email address will not be published. Required fields are marked *