ಕಾರವಾರ: ಏಳು ವರ್ಷಗಳ ಹಿಂದೆಯೇ ಪ್ರಾರಂಭವಾದ ಕಾಲೇಜಿಗೆ ಈಗ ಹೊಸ ಕಟ್ಟಡ ಸಿಕ್ಕಿದೆ. ಆದರೂ ವಿದ್ಯಾರ್ಥಿಗಳು ಫುಟ್ ಪಾತ್‍ನಲ್ಲಿಯೇ ಓದುವ ದುರ್ಗತಿ ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಏಳು ವರ್ಷಗಳ ಹಿಂದೆಯೇ ಪ್ರಾರಂಭವಾಗಿದ್ದು, ಈಗ ಹೊಸ ಕಟ್ಟಡ ವಿದ್ಯಾರ್ಥಿಗಳಿಗೆ ಸಿಕ್ಕಿದೆ. ಆದರೆ ಸ್ಥಳೀಯ ಶಾಸಕ ಸತೀಶ್ ಸೈಲ್ ಕೃಪಾ ಕಟಾಕ್ಷದಿಂದ ಪಾಳುಬಿದ್ದ ಬಾಯ್ಸ್ ಹಾಸ್ಟೆಲ್ ಮತ್ತು ಫುಟ್ ಪಾತ್‍ನಲ್ಲೇ ಓದಬೇಕಾದ ದುರ್ಗತಿ ಎದುರಾಗಿದೆ. ಫುಟ್‍ಪಾತ್, ಹಾಸ್ಟೆಲ್‍ನ ಕಿಚನ್‍ನಲ್ಲೇ ಭವಿಷ್ಯದ ಎಂಜಿನಿಯರ್ ಗಳಿಗೆ ಬೋಧನೆ ಮಾಡಲಾಗುತ್ತಿದೆ.
ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕೆಲ ಪ್ರಾಧ್ಯಾಪಕರು ಶಾಸಕ ಸತೀಶ್ ಸೈಲ್ ನಡೆಸುತ್ತಿರುವ ಕಾಲೇಜಿನಲ್ಲೂ ಪಾಠ ಮಾಡುತ್ತಿದ್ದಾರೆ. ಶಾಸಕ ಕಾಲೇಜಿನಲ್ಲಿ ಲ್ಯಾಬ್ ಟೆಸ್ಟೆಲ್ಲಾ ನಡೆಯುತ್ತಿದೆ ಎಂದು ಹೇಳಿ ಸರ್ಕಾರದಿಂದ ಸಂದಾಯವಾಗುತ್ತಿರುವ ಹಣವನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಅಕ್ರಮದ ಬಗ್ಗೆ ಕಾಲೇಜಿನ ಪ್ರಿನ್ಸಿಪಾಲ್ ಶಾಂತಲಾರವರು ದೂರು ನೀಡಿದ್ದರು. ಆದರೆ ಅವರನ್ನು ಶಾಸಕರ ಒತ್ತಡದ ಮೇರೆಗೆ ವರ್ಗಾಯಿಸಲಾಗಿದೆ.
ಸರ್ಕಾರ ನೋಡಿದರೆ ಬಡ ವಿದ್ಯಾರ್ಥಿಗಳೂ ಎಂಜಿನಿಯರಿಂಗ್ ಓದಲಿ ಎಂದು ಕಾಲೇಜು ಕಟ್ಟಿಸಿ ಕೊಟ್ಟಿದ್ದಾರೆ. ಆದ್ರೆ ಅದಕ್ಕೆ ಶಾಸಕ ಸೈಲ್ ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪ ಇದೀಗ ವ್ಯಕ್ತವಾಗುತ್ತಿದೆ.