ಬೆಂಗಳೂರು, ಮಂಗಳೂರು: ಸೌರವ್ಯೂಹದಲ್ಲಿ ಇಂದು ಚಂದ್ರ ಚೋದ್ಯ ಸಂಭವಿಸಲಿದೆ. 152 ವರ್ಷಗಳ ಬಳಿಕ ಮೊದಲ ಬಾರಿಗೆ ಒಟ್ಟೊಟ್ಟಿಗೆ ಸೂಪರ್‍ಮೂನ್, ಬ್ಲಡ್‍ಮೂನ್, ಬ್ಲೂ ಮೂನ್, ಗೋಚರವಾಗ್ತಿದೆ.
ರಕ್ತಚಂದಿರ ಗ್ರಹಣದಿಂದಾಗಿ ರಾಜ್ಯದ ಪ್ರಸಿದ್ಧ ದೇವಸ್ಥಾನಗಳಿಗೆ ಬೀಗ ಬಿದ್ದಿದೆ. ಧರ್ಮಸ್ಥಳದ ಮಂಜುನಾಥೇಶ್ವರ, ಕುಕ್ಕೆ, ಚಾಮುಂಡೇಶ್ವರಿ, ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ದರ್ಶನವಿಲ್ಲ. ಇದನ್ನೂ ಓದಿ: ಬುಧವಾರ ಚಂದ್ರಗ್ರಹಣದ ಜೊತೆ ಸೂಪರ್ ಮೂನ್, ಬ್ಲಡ್‍ಮೂನ್ ಗೋಚರ- ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ತಿರುಪತಿಯಲ್ಲಿ ಬೆಳಗ್ಗೆ 11 ಗಂಟೆಗೆ ತಿಮ್ಮಪ್ಪನ ಸನ್ನಿಧಾನದ ಬಾಗಿಲು ಬಂದ್ ಮಾಡಿದ್ರೆ ಮತ್ತೆ ತೆರೆಯೋದು ಇಂದು ರಾತ್ರಿ 9.30ಕ್ಕೆ. ಇತ್ತ ಇದೇ ಮೊದಲ ಬಾರಿಗೆ ಗವಿಗಂಗಾಧರೇಶ್ವನಿಗೆ ಗ್ರಹಣ ಹಿನ್ನೆಲೆಯಲ್ಲಿ ನಾಲ್ಕು ಗಂಟೆಗಳ ಕಾಲ ದರ್ಬೆಯ ಬಂಧನ ಮಾಡಲಾಗಿದೆ. ಗ್ರಹಣ ಮುಗಿದ ಮೇಲೆ ದೋಷ ಕಳೆಯಲು ಹೋಮ ಕೈಗೊಳ್ಳಲಾಗುತ್ತದೆ.
ರಾತ್ರಿ 9.30-10.30 ವರೆಗೆ ಹೊರಾಂಗಣದಿಂದ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಧರ್ಮಸ್ಥಳದಲ್ಲೂ ಗ್ರಹಣ ಹಿನ್ನಲೆ ದೇವರ ದರ್ಶನದ ಸಮಯ ಬದಲಾವಣೆ ಮಾಡಲಾಗಿದ್ದು, ಮಧ್ಯಾಹ್ನ 2.30ರಿಂದ 9 ಗಂಟೆ ತನಕ ದೇವರ ದರ್ಶನಕ್ಕೆ ತಡೆ ನೀಡಲಾಗಿದೆ. ರಾತ್ರಿ 9.30 ರಿಂದ 10.30ರವರೆಗೆ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗ್ಗೆ 6.30ರಿಂದ 9 ಗಂಟೆ ತನಕ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, 9 ಗಂಟೆಯಿಂದ ರಾತ್ರಿ 8.30 ರವರೆಗೆ ದೇವಸ್ಥಾನದ ಬಾಗಿಲು ಬಂದ್ ಮಾಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಮಧ್ಯಾಹ್ನದ ಅನ್ನಸಂತರ್ಪಣೆ ಇರಲ್ಲ. ವಿಶೇಷ ಅಂದ್ರೆ ದಾವಣಗೆರೆಯ ಹರಪ್ಪನಹಳ್ಳಿಯಲ್ಲಿ ಹುಚ್ಚಂಗಿ ಜಾತ್ರೆ ನಡೀತಿದೆ.
1866ರ ಮಾರ್ಚ್ 31ರಲ್ಲಿ ಇಂತಹ ಸೋಜಿಗ ಸಂಭವಿಸಿತ್ತು. ಭಾರತದಲ್ಲಿ 35 ವರ್ಷಗಳ ಹಿಂದೆ ಬ್ಲೂಮೂನ್ ಮತ್ತು ಗ್ರಹಣ ಒಟ್ಟಿಗೇ ನಡೆದಿತ್ತು. ಪ್ರತಿನಿತ್ಯ ಕಾಣೋ ಚಂದ್ರನಿಗಿಂತ ಇವತ್ತು ಗೋಚರಿಸೋ ಚಂದ್ರ ಹೆಚ್ಚು ದೊಡ್ಡದಾಗಿ, ಪ್ರಖರವಾಗಿ ಇರಲಿದ್ದಾನೆ. ಚಂದ್ರಮನನ್ನು ಕಣ್ತುಂಬಿಕೊಳ್ಳಲು ವಿಶ್ವವೇ ಬೆರಗುಗಣ್ಣಿನಿಂದ ಕಾಯ್ತಿದೆ. ಭಾರತ ಮಾತ್ರವಲ್ಲದೆ, ಅಮೆರಿಕ, ಈಶಾನ್ಯ, ಯುರೋಪ್, ರಷ್ಯಾ, ಆಸ್ಟ್ರೇಲಿಯಾ, ಏಷ್ಯ, ಹಿಂದು ಮಹಾಸಾಗರ, ಫೆಸಿಫಿಕ್ ಮಹಾಸಾಗರದಲ್ಲಿ ಗ್ರಹಣ ಕಾಣಿಸಲಿದೆ.