Connect with us

Districts

14 ತಿಂಗಳು ನರಕ ಅನುಭವಿಸಿ ತವರಿಗೆ ಮರಳಿದ ಜೆಸಿಂತಾ

Published

on

ಉಡುಪಿ: ಸಂಸಾರದ ಭಾರ ಹೊತ್ತು, ಸೌದಿ ಅರೆಬಿಯಾದಲ್ಲಿ ನರಕಯಾತನೆ ಅನುಭವಿಸುತ್ತಿದ್ದ ಜೆಸಿಂತಾ ಉಡುಪಿಗೆ ವಾಪಸ್ಸಾಗಿದ್ದಾರೆ. ಡಾ. ರವೀಂದ್ರನಾಥ ಶಾನುಭಾಗ್ ನೇತೃತ್ವದ ಮಾನವ ಹಕ್ಕುಗಳ ಪ್ರತಿಷ್ಟಾನದ ಹೋರಾಟಕ್ಕೆ ಜಯಗಳಿಸಿದೆ. ಕ್ರೂರಿ ಅರಬ್ಬಿಯ ಮನೆಯಲ್ಲಿ ಎಂಜಲು ತಿಂದ ದಿನಗಳನ್ನು ನೆನೆದು ಅವರು ಕಣ್ಣೀರಿಡುತ್ತಿದ್ದಾರೆ.

ವೇದಿಕೆಯ ಮೇಲೆ ಕುಳಿತು ಕಣ್ಣೀರಿಡುತ್ತಿರುವ ಇವರು ಜೆಸಿಂತಾ. ಉಡುಪಿ ಜಿಲ್ಲೆಯ ಮುದರಂಗಡಿಯವರು. ಇವರು ಜೂನ್ 19, 2016 ರಂದು ಖತಾರ್‍ನಲ್ಲಿ ಮಕ್ಕಳ ಪೋಷಣೆಗೆಂದು ಹೋರಾಟ ಮಾಡಿದವರು. ಆದರೆ ಆರಂಭದಲ್ಲೇ ಇವರು ಮೋಸ ಹೋಗಿ ಇಳಿದದ್ದು ಸೌದಿ ಅರೆಬಿಯಾದಲ್ಲಿ. ಮಂಗಳೂರಿನ ಏಜೆಂಟ್ ಜೇಮ್ಸ್ ಡಿಮೆಲ್ಲೋ ಜೆಸಿಂತಾ ಅವರನ್ನು ಅರಬ್ಬಿಯರಿಗೆ ಮಾರಲು ಸಿದ್ಧತೆ ಮಾಡಿದ್ದರು. ಕೊನೆಗೂ ಜೀತದಾಳುವಾಗಿ 5 ಲಕ್ಷ ರೂಪಾಯಿಗೆ ಹರಾಜು ಹಾಕಿ ಅಕ್ಷರಶಃ ಮಾರಿದ್ದರು. 14 ತಿಂಗಳುಗಳ ಕಾಲ ಸರಿಯಾಗಿ ಊಟವಿಲ್ಲದೆ – ಚಿತ್ರಹಿಂಸೆಯನ್ನು ಅನುಭವಿಸಿದ್ದಾರೆ. ಟಿಬಿ, ಕಫದಲ್ಲಿ ರಕ್ತ ಕಾರುತ್ತಿದ್ದರೂ ಅವರಿಗೆ ಔಷಧಿ ನೀಡದೆ- ಮನೆಗೆ ಫೋನ್ ಮಾಡದಂತೆ ನಿರ್ಬಂಧ ಹೇರಿ ಅರಬ್ಬೀಗಳ ಮನೆಯಲ್ಲಿ ಎಂಜಲನ್ನು ಕೊಡುತ್ತಿದ್ದರು. ಮಾನವ ಹಕ್ಕುಗಳ ಹೋರಾಟಗಾರ ರವೀಂದ್ರನಾಥ ಶಾನುಭಾಗ್ ಅವಿರತ ಪ್ರಯತ್ನದಿಂದ ಇಂದು ಬದುಕಿ ತವರಿಗೆ ವಾಪಸ್ಸಾಗಿದ್ದಾರೆ.

ಕೇಂದ್ರ ಸರ್ಕಾರ, ವಿದೇಶಾಂಗ ಸಚಿವಾಲಯ- ಅಲ್ಲಿನ ಎನ್‍ಜಿಒಗಳು, ಶಾನುಭಾಗ್ ಅವರ ಹಳೆ ವಿದ್ಯಾರ್ಥಿಗಳ ಸಹಾಯದಿಂದ ಜೆಸಿಂತಾ ಉಡುಪಿಗೆ ಮರಳಿದ್ದಾರೆ. ಸುಮಾರು 4.50 ಲಕ್ಷ ರೂಪಾಯಿಯನ್ನು ಮರು ಪಾವತಿಸುವ ಮೂಲಕ ಈಕೆಯನ್ನು ರಣಹದ್ದುಗಳ ಕೈಯಿಂದ ಬಿಡಿಸಿಕೊಂಡು ಬರಲಾಯಿತು. 65 ಸಾವಿರ ರೂಪಾಯಿ ಹಣವನ್ನು ಪೆನಾಲ್ಟಿಯಾಗಿ ನೀಡಲಾಯಿತು. ಇಲ್ಲದಿದ್ದರೆ ಅಬ್ದುಲ್ಲಾ ಅಲ್ಮುತಾಯ್ರಿ ಎಂಬ ಅರೆಬ್ಬೀಯ ಮೂರು ಮನೆ, ಮೂವರು ಹೆಂಡತಿಯರು ಮತ್ತು 28 ಮಕ್ಕಳ ಪಾಲನೆ ಪೋಷಣೆ ಮಾಡುವಾಗ ಅವರು ಅರೆ ಜೀವವಾಗಿ ಬಿಡುತ್ತಿದ್ದರು.

ಮಂಗಳೂರು ಪೊಲೀಸರ ಉದಾಸೀನದಿಂದ ಇವರು 14 ತಿಂಗಳು ನರಕದಲ್ಲೇ ಒದ್ದಾಡುವ ಸ್ಥಿತಿ ಬಂದಿತ್ತು. ಮಾನವ ಕಳ್ಳ ಸಾಗಾಟದ ರೂವಾರಿ ಮುಂಬೈಯ ಶಾಬಾಜ್ ಖಾನ್, ಅಮೀರ್ ಭಾಯ್ ನನ್ನು ವಿಚಾರಣೆಯೂ ಮಾಡಿಲ್ಲ. ಕರಾವಳಿ ಜಿಲ್ಲೆಗಳಿಂದ ವರ್ಷಕ್ಕೆ 2000 ಮಂದಿಯ ಕಳ್ಳಸಾಗಣೆ ಆದರೆ ದೇಶದಿಂದ ಎಷ್ಟಾಗುತ್ತದೆ ಎಂಬೂದೇ ಆತಂಕಕಾರಿ ವಿಷಯವಾಗಿದೆ.

ಸೌದಿ ಅರೇಬಿಯಾದ ನರಕ ನೋಡಿ ಬಂದ ಜೆಸಿಂತಾ ಮಾತನಾಡಿ, ನನಗೆ ಎಂಜಲು ತಿನ್ನಲು ಕೊಡುತ್ತಿದ್ದರು. ತಿಂಗಳ ಸಂಬಳವನ್ನೂ ಸರಿಯಾಗಿ ಕೊಟ್ಟಿಲ್ಲ. ಚಿತ್ರಹಿಂಸೆ ಕೊಡುತ್ತಿದ್ದರು. ಮನೆಯವರ ಜೊತೆ ಫೋನ್ ಮಾಡಿ ಮಾತನಾಡುವ ಅವಕಾಶವೂ ಇರಲಿಲ್ಲ. 40 ಮಂದಿಯ ಚಾಕರಿ ಮಾಡಿ ನಿದ್ದೆ ಮಾಡುತ್ತಿದ್ದರೆ, ಆಗಲೂ ನೀರು ಹಾಕಿ ಎಬ್ಬಿಸಿ ಕೆಲಸ ಕೊಡುತ್ತಿದ್ದರು. ಟಿಬಿ ಇದೆ ಅಂತ ಕಾಲು ಹಿಡಿದುಕೊಂಡು ಮದ್ದು ಕೊಡಿಸಿ ಅಂತ ಅಂಗಲಾಚಿದರೂ ಯಾರೂ ಕೇಳಲಿಲ್ಲ ಎಂದು ಆ ದಿನಗಳನ್ನು ನೆನೆದು ಕಣ್ಣೀರಿಟ್ಟರು.

ಮಾನವ ಹಕ್ಕುಗಳ ಹೋರಾಟಗಾರ ಡಾ. ರವೀಂದ್ರನಾಥ ಶಾನುಭಾಗ್ ಜೆಸಿಂತಾರನ್ನು ಸೌದಿಯಿಂದ ಊರಿಗೆ ಕರೆತರಿಸುವಲ್ಲಿ ಅವಿರತ ಶ್ರಮಪಟ್ಟದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು. 50ಕ್ಕೂ ಹೆಚ್ಚು ಮಂದಿ ಈಗಾಗಲೇ ನನ್ನನ್ನು ಸಂಪರ್ಕ ಮಾಡಿದ್ದಾರೆ. 14 ತಿಂಗಳ ಗುಲಾಮಗಿರಿಯಿಂದ ಜೆಸಿಂತಾ ಅವರು ಉಡುಪಿಗೆ ಬಂದಿದ್ದಾರೆ. ಕಾನೂನು ಪ್ರಕಾರವೇ ಅವರನ್ನು ಕರೆದುಕೊಂಡು ಬಂದಿದ್ದೇವೆ. ಮಹಿಳೆಯರು ಗಲ್ಫ್ ದೇಶಗಳಿಗೆ ಹೋಗುವಾಗ ಜಾಗೃತೆ ವಹಿಸಬೇಕು. ಕುಟುಂಬದವರಿಂದ ಮಾಹಿತಿಗಳನ್ನು ಪಡೆದುಕೊಂಡು ಕೆಲಸಕ್ಕೆ ಹೋಗಬೇಕು. ರಿಕ್ರೂಟಿಂಗ್ ಏಜನ್ಸಿಗಳು ಮಾನವ ಕಳ್ಳಸಾಗಣಾ ಕೇಂದ್ರಗಳಾಗಿದೆ. ಅಕ್ಟೋಬರ್ 5ರ ವರೆಗೆ ಕ್ಷಮಾಧಾನ ಯೋಜನೆಯನ್ನು ಮಾಡಲಾಗಿದೆ. ಕೆಲವು ಸಾವಿರ ರೂಪಾಯಿ ಪೆನಾಲ್ಟಿ ಕೊಡಬೇಕಾಗುತ್ತದೆ. ಉಡುಪಿಯ ಮಾನವಹಕ್ಕುಗಳ ಆಯೋಗಕ್ಕೆ ಬಂದು ದೂರು ನೀಡಿದರೆ ಸಮಸ್ಯೆಯಲ್ಲಿರುವವರನ್ನು ವಾಪಾಸ್ ಕರೆಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಉಡುಪಿಯ ದೊಡ್ಡಣಗುಡ್ಡೆ ಎ.ವಿ ಬಾಳಿಗಾ ಆಸ್ಪತ್ರೆಯಲ್ಲಿ ಜೆಸಿಂತಾ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾನಸಿಕ ಸ್ಥೈರ್ಯ ಕಳೆದುಕೊಂಡಿರುವ ಅವರಿಗೆ ಮನೋವೈದ್ಯರು ಧೈರ್ಯ ತುಂಬುವ, ಹಾಗೂ ಹಿಂದಿನಂತಾಗುವ ಹಾದಿಯಲ್ಲಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in