ಪ್ರಾಣಪ್ರತಿಷ್ಠೆ ಮತ್ತೊಂದು ದೀಪಾವಳಿ, ಕ್ರಿಶ್ಚಿಯನ್ ಮಹಿಳೆಯಾದ್ರೂ ನಾನು ಆಚರಿಸುತ್ತೇನೆ – ಮೇರಿ ಮಿಲ್ಬೆನ್ ಸಂತಸ

Public TV
1 Min Read
Mary Millben Ayodhya

– ನಾನು ಕ್ರಿಶ್ಚಿಯನ್ ಮಹಿಳೆಯಾದ್ರೂ ಹಿಂದೂ ಸಮುದಾಯಕ್ಕೆ ಹತ್ತಿರವಾಗಿದ್ದೇನೆ ಎಂದ ಗಾಯಕಿ

ವಾಷಿಂಗ್ಟನ್: ಅಯೋಧ್ಯೆಯ (Ayodhya) ರಾಮಮಂದಿರದಲ್ಲಿ (Ram Mandir) ಜನವರಿ 22 ರಂದು ನಡೆಯಲಿರುವ ರಾಮಲಲ್ಲಾನ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿದೆ. ಈ ಕಾರ್ಯಕ್ರಮವನ್ನು ದೇಶಾದ್ಯಂತ ದೀಪಾವಳಿ ಹಬ್ಬದ ರೀತಿಯಲ್ಲಿ ಆಚರಿಸಲು ಭರ್ಜರಿ ಸಿದ್ಧತೆ ನಡೆದಿದೆ.

ಭಾರತೀಯರಷ್ಟೇ ಅಲ್ಲ, ಹೊರ ದೇಶಗಳಲ್ಲಿ ರಾಮಭಕ್ತರೂ ಶ್ರೀರಾಮನನ್ನು ಸ್ವಾಗತಿಸಲು ಉತ್ಸುಕರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಬಗ್ಗೆ ಹಲವು ಬಾರಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿರುವ ಆಫ್ರಿಕನ್-ಅಮೆರಿಕನ್ ನಟಿ ಮತ್ತು ಗಾಯಕಿ ಮೇರಿ ಮಿಲ್ಬೆನ್ (Mary Millben) ಕೂಡ ರಾಮ ಮಂದಿರದ ಉದ್ಘಾಟನೆಯ ಬಗ್ಗೆ ತುಂಬಾ ಸಂತೋಷ ಮತ್ತು ಉತ್ಸುಕರಾಗಿದ್ದಾರೆ.

AYODHYA RAM MANDIR 3

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ, ರಾಮಮಂದಿರದ ಉದ್ಘಾಟನೆಯ ಬಗ್ಗೆ ಅವರನ್ನು ಕೇಳಿದಾಗ, ಪ್ರಾಣಪ್ರತಿಷ್ಠಾ ಸಮಾರಂಭವು ಬಹುತೇಕ ಎರಡನೇ ದೀಪಾವಳಿಯಂತೆ ಭಾಸವಾಗುತ್ತಿದೆ. ನಾನೂ ಈ ದೀಪಾವಳಿಯನ್ನು ಜನವರಿ 22 ರಂದು ಆಚರಿಸಲಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನಾ ಸಮಾರಂಭದ ವೇಳೆ ನಾನು ಭಾರತಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ನನಗೆ ಬೇಸರವಾಗಿದೆ. ಆದರೆ ನಾನು ಖಂಡಿತವಾಗಿಯೂ ಈ ಸಂಭ್ರಮವನ್ನು ಆಚರಿಸುತ್ತೇನೆ. ನಾನು ಕ್ರಿಶ್ಚಿಯನ್ ಮಹಿಳೆ. ಆದರೆ ಇದ್ದಕ್ಕಿದ್ದಂತೆ ಕೆಲವು ಸಮಯದಿಂದ ನಾನು ಹಿಂದೂ ಸಮುದಾಯಕ್ಕೆ ತುಂಬಾ ಹತ್ತಿರವಾಗಿದ್ದೇನೆ. ಹಾಗಾಗಿ ಈ ಸುಂದರ ಕ್ಷಣವನ್ನು ನಾನು ಅನುಭವಿಸುತ್ತೇನೆ. ಈ ಸಮಾರಂಭದ ಅತ್ಯಂತ ಸುಂದರವಾದ ವಿಷಯವೆಂದರೆ ಎಲ್ಲರೂ ಒಟ್ಟಾಗಿ ಆಚರಿಸುವ ಕ್ಷಣ ಇದಾಗಿದೆ ಮತ್ತು ಅದು ನಂಬಿಕೆಯ ಸೌಂದರ್ಯವಾಗಿದೆ ಎಂದು ಮೇರಿ ಮಿಲ್ಬೆನ್ ಅಯೋಧ್ಯೆ ಕುರಿತು ತಮ್ಮ ಒಲವನ್ನು ವ್ಯಕ್ತಪಡಿಸಿದರು.

ಕಳೆದ ವರ್ಷ ದೀಪಾವಳಿಯ ಸಂದರ್ಭದಲ್ಲಿ ‘ಓಂ ಜೈ ಜಗದೀಶ್ ಹರೇ’ ಹಾಡುವ ಮೂಲಕ ಜನರ ಮನಗೆದ್ದಿದ್ದ ಮೇರಿ ಮಿಲ್ಬೆನ್ ಅದಕ್ಕೂ ಮೊದಲು ಪ್ರಧಾನಿ ಮೋದಿಯವರ ಅಮೆರಿಕ ಭೇಟಿಯ ವೇಳೆ ಕಾರ್ಯಕ್ರಮದಲ್ಲಿ ‘ಜನ ಮನ ಗಣ’ ಹಾಡಿದ್ದರು.

Share This Article