ಮದುರೈ: ತಮಿಳುನಾಡಿನ ಮಾಜಿ ಸಿಎಂ ಜೆ.ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ನಾವು ಹೇಳಿದ್ದೆಲ್ಲಾ ಸುಳ್ಳು ಎಂದು ತಮಿಳುನಾಡಿನ ಅರಣ್ಯ ಸಚಿವ ದಿಂಡಿಗಲ್ ಶ್ರೀನಿವಾಸನ್ ಹೇಳಿದ್ದಾರೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ನಾವು ಜನರಿಗೆ ನಿರಂತರವಾಗಿ ಸುಳ್ಳು ಹೇಳಿದ್ದೆವು. ಅವರ ಆಪ್ತ ಗೆಳತಿ ವಿ.ಕೆ. ಶಶಿಕಲಾ ಅವರ ಮೇಲಿದ್ದ ಭಯವೇ ನಾವು ಹೀಗೆ ಸುಳ್ಳು ಹೇಳಲು ಕಾರಣ ಎಂದು ಹೇಳಿದರು.
Advertisement
ಜಯಲಲಿತಾ ಅವರ ಆರೋಗ್ಯದ ಬಗ್ಗೆ ಸುಳ್ಳು ಹೇಳಬೇಕು ಎಂದು ನಮ್ಮ ಮೇಲೆ ಒತ್ತಡವಿತ್ತು. ಜಯಲಲಿತಾ ಅವರ ಆರೋಗ್ಯ ಚೆನ್ನಾಗಿದೆ ಎಂದು ಜನರು ಭಾವಿಸಲಿ ಎಂದು ನಾವು ಆ ರೀತಿಯ ಹೇಳಿಕೆ ನೀಡಿದ್ದೆವು. ನಮ್ಮ ನಾಯಲಿಯ ಬಗ್ಗೆ ಅಂತಹ ಸುಳ್ಳು ಹೇಳಿಕೆ ನೀಡಿದ್ದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ ಎಂದರು.
Advertisement
Advertisement
ಜಯಲಲಿತಾ ಅವರನ್ನು ಕಳೆದ ಸೆಪ್ಟೆಂಬರ್ 22ರಂದು ಚೆನ್ನೈನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ವರ್ಷ ಡಿ. 5ರಂದು ಅವರು ಮೃತಪಟ್ಟರು. ಅವರು ಚಿಕಿತ್ಸೆ ಪಡೆಯುತ್ತಿದ್ದ ಅಷ್ಟೂ ದಿನಗಳಲ್ಲಿ ಯಾರಿಗೂ ಪ್ರವೇಶಕ್ಕೆ ಅನುಮತಿ ಇರಲಿಲ್ಲ ಎಂದು ಶ್ರೀನಿವಾಸನ್ ಹೇಳಿದ್ದಾರೆ. ಕಳೆದ ವರ್ಷವೂ ಇದೇ ರೀತಿಯ ಹೇಳಿಕೆಯನ್ನು ಶ್ರೀನಿವಾಸನ್ ನೀಡಿದ್ದರು.
Advertisement
ನನ್ನನ್ನು ಕ್ಷಮಿಸಿ ಬಿಡಿ. ಜಯಲಲಿತಾ ಅವರು ಇಡ್ಲಿ, ಚಟ್ನಿ, ಸಾಂಬಾರ್ ತಿನ್ನುತ್ತಿದ್ದಾರೆ, ಚಹಾ ಕುಡಿಯುತ್ತಿದ್ದಾರೆ ಎಂದೆಲ್ಲ ನಾವು ಹೇಳಿದ್ದೆವು. ಅವರು ಗುಣಮುಖರಾಗುತ್ತಿದ್ದಾರೆ ಎಂಬ ಭಾವನೆಯನ್ನು ಇದು ಜನರಲ್ಲಿ ಮೂಡಿಸಿತ್ತು. ಆದರೆ ಅಮ್ಮಾ ಇಡ್ಲಿ ತಿನ್ನುತ್ತಿದ್ದರು ಅಥವಾ ಚಹಾ ಕುಡಿಯುತ್ತಿದ್ದರು ಎಂಬುದೆಲ್ಲ ಸುಳ್ಳಾಗಿತ್ತು. ಹಲವು ಮುಖಂಡರು ಜಯಾರನ್ನು ಭೇಟಿಯಾಗಿದ್ದರು ಎಂಬುದೂ ಸುಳ್ಳು ಎಂದು ಹೇಳಿದರು.
ಆಸ್ಪತ್ರೆಯಲ್ಲಿ ಜಯಲಲಿತಾ ಅವರನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡುತ್ತಿರಲಿಲ್ಲ. ನಾವು ಆಸ್ಪತ್ರೆಗೆ ಭೇಟಿ ನೀಡಿದಾಗಲೆಲ್ಲಾ ಆಸ್ಪತ್ರೆಯ ಮಾಲೀಕರ ಕೊಠಡಿಯಲ್ಲಿ ಕೂರಲು ನಮಗೆ ಅವಕಾಶ ಮಾಡಿಕೊಟ್ಟಿದ್ದರು. ಅಲ್ಲಿ ಶಶಿಕಲಾ ನಮ್ಮನ್ನು ಭೇಟಿ ಮಾಡುತ್ತಿದ್ದರು. ಆ ಭೇಟಿ ಬಳಿಕ ನಾವು ಆಸ್ಪತ್ರೆಯಿಂದ ಹೊರಗೆ ಬರುತ್ತಿದ್ದೆವು ಎಂದು ಹೇಳಿದರು.
ನಮಗೆಲ್ಲರಿಗೂ ಶಶಿಕಲಾ ಅವರ ಬಗ್ಗೆ ಭಯ ಇತ್ತು. ಹಾಗಾಗಿ ಜಯಲಲಿತಾ ಅವರು ಆರೋಗ್ಯವಾಗಿಯೇ ಇದ್ದಾರೆ. ಆಹಾರ ಸೇವಿಸುತ್ತಿದ್ದಾರೆ ಎಂದೆಲ್ಲ ಜನರಿಗೆ ನಾವು ಸುಳ್ಳು ಹೇಳಿದೆವು. ಈಗ ಟಿಟಿವಿ ದಿನಕರನ್ ಜಯಲಲಿತಾಗೆ ಚಿಕಿತ್ಸೆ ನೀಡಿದ ಸಿಸಿಟಿವಿ ದೃಶ್ಯಾವಳಿ ಇದೆ ಎಂದು ಹೇಳಿದ್ದಾರೆ. ಅದನ್ನು ತಕ್ಷಣ ಬಿಡುಗಡೆಗೊಳಿಸಿ ಎಂದು ದಿನಕರನ್ ಗೆ ಸವಾಲು ಹಾಕಿದ್ದಾರೆ.