ಕಿಂಗ್‌ಸ್ಟೌನ್: 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿ ಫೈನಲ್ ಪ್ರವೇಶಿಸುವ ಕನಸನ್ನು ಭಗ್ನಗೊಳಿಸಿದ್ದ ಆಸ್ಟ್ರೇಲಿಯಾ (Australia) ತಂಡವನ್ನು ಹೀನಾಯವಾಗಿ ಸೋಲಿಸಿ ಅಫ್ಘಾನಿಸ್ತಾನ ತಂಡ ಸೇಡು ತೀರಿಸಿಕೊಂಡಿದೆ. ಅಲ್ಲದೇ ಇದು ಆಸೀಸ್ ವಿರುದ್ಧ ಅಫ್ಘಾನಿಸ್ತಾನಕ್ಕೆ (Afghanistan) ಒಲಿದ ಮೊದಲ ಗೆಲುವಾಗಿದೆ.
ಭಾನುವಾರ (ಇಂದು) ನಡೆದ ಟಿ20 ವಿಶ್ವಕಪ್ (T20 World Cup 2024) ಟೂರ್ನಿಯ ಸೂಪರ್-8 ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಅಫ್ಘಾನಿಸ್ತಾನ 21 ರನ್‌ಗಳ ಅಂತರದಿಂದ ಮಣಿಸಿದೆ. ಈ ಗೆಲುವಿನೊಂದಿಗೆ ಸೆಮಿಫೈನಲ್ ಕನಸನ್ನೂ ಜೀವಂತವಾಗಿರಿಸಿಕೊಂಡಿದೆ. ಮುಂದಿನ ಪಂದ್ಯ ಭಾರತ-ಆಸೀಸ್ ನಡುವಿನ ಪಂದ್ಯವು ಅಫ್ಘಾನ್ ಪಾಲಿಗೆ ನಾಕೌಟ್ ಪಂದ್ಯವಾಗುವ ಸಾಧ್ಯತೆಗಳೂ ಇವೆ.
Advertisement
Advertisement
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 148 ರನ್ ಬಾರಿಸಿ, ಆಸೀಸ್‌ಗೆ ಸ್ಪರ್ಧಾತ್ಮಕ 149 ರನ್ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಆಸೀಸ್ ಗ್ಲೆನ್ ಮ್ಯಾಕ್ಸ್ವೆಲ್ ಅವರ ಅರ್ಧಶತಕದ ಹೊರತಾಗಿಯೂ 127 ರನ್ಗೆ ಸರ್ವಪತನ ಕಂಡು ಹೀನಾಯ ಸೋಲಿಗೆ ತುತ್ತಾಯಿತು.
Advertisement
ಸುಲಭ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದ ಆಸೀಸ್‌ಗೆ ಆರಂಭದಲ್ಲೇ ಅಫ್ಘಾನ್ ಬೌಲರ್‌ಗಳು ಆಘಾತ ನೀಡಿದರು. ಸ್ಫೋಟಕ ಬ್ಯಾರ್‌ಗಳಾದ ಟ್ರಾವಿಸ್ ಹೆಡ್ (0), ಡೇವಿಡ್ ವಾರ್ನರ್ (3 ರನ್) ಅವರನ್ನು ಪೆವಿಲಿಯನ್‌ಗೆ ಮರಳಿಸಿದರು. ಈ ಬೆನ್ನಲ್ಲೇ ನಾಯಕ ಮಿಚೆಲ್ ಮಾರ್ಷ್ ಸಹ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
Advertisement
ಒಂದೆಡೆ ವಿಕೆಟ್ ಬೀಳುತ್ತಿದ್ದರು ಮತ್ತೊಂದು ತುದಿಯಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಮಾತ್ರ ಬಿರುಸಿನ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿಗಾಗಿ ಶಕ್ತಿ ಮೀರಿ ಪ್ರಯತ್ನಪಟ್ಟರು. ಅವರ ಬ್ಯಾಟಿಂಗ್ ಗಮನಿಸುವಾಗ ಕಳೆದ ವರ್ಷದ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯ ಮತ್ತೆ ಮರುಕಳಿಸುವಂತೆ ಭಾಸವಾಯಿತು. ಏಕದಿನ ವಿಶ್ವಕಪ್ನಲ್ಲಿ ಅಫ್ಘಾನ್ ವಿರುದ್ಧ ಮ್ಯಾಕ್ಸ್ವೆಲ್ ಏಕಾಂಗಿಯಾಗಿ ಅಜೇಯ ದ್ವಿಶತಕ ಬಾರಿಸಿ ಆಸೀಸ್‌ಗೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ಪ್ರಸ್ತುತ ಇನ್ನಿಂಗ್ಸ್‌ನಲ್ಲೂ ಮ್ಯಾಕ್ಸಿ 41 ಎಸೆತಗಳಲ್ಲಿ 59 ರನ್ (3 ಸಿಕ್ಸರ್, 6 ಬೌಂಡರಿ) ಗಳಿಸಿ ಮಿಂಚಿದ್ದರು. ಆದ್ರೆ ಅಗ್ರ, ಮಧ್ಯಮ ಹಾಗೂ ಕೊನೇ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ ಆಸೀಸ್ ಹೀನಾಯ ಸೋಲಿಗೆ ತುತ್ತಾಯಿತು.
ಅಫ್ಘಾನ್ ಪರ ಗುಲ್ಬದಿನ್ ನೈಬ್ 2 ಓವರ್ಗೆ 20 ರನ್ ನೀಡಿ 4 ವಿಕೆಟ್ ಕಿತ್ತರು. ನವೀನ್ ಉಲ್ ಹಕ್ 3 ವಿಕೆಟ್, ನಾಯಕ ರಶೀದ್ ಖಾನ್, ಒಮರ್ಝೈ, ಮೊಹಮ್ಮದ್ ನಬಿ ತಲಾ ಒಂದೊಂದು ವಿಕೆಟ್ ಪೆಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಅಫಘಾನಿಸ್ತಾನ ಪರ ರಹಮಾನುಲ್ಲಾ ಗುರ್ಬಾಜ್ 60 ರನ್ (4 ಸಿಕ್ಸರ್, 4 ಬೌಂಡರಿ) ಮತ್ತು ಇಬ್ರಾಹಿಂ ಜದ್ರಾನ್ 51 ರನ್ (48 ಎಸೆತ, 6 ಬೌಂಡರಿ) ಅವರ ಅಮೋಘ ಅರ್ಧಶತಕದ ಆಟದಿಂದ ಅಫ್ಘಾನ್ ಸ್ಪರ್ಧಾತ್ಮಕ ರನ್ ಗಳಿಸಿತ್ತು. ಈ ಜೋಡಿ ವಿಕೆಟ್ ಪತನದ ಬಳಿಕ ಬಂದ ಆಟಗಾರರು ನಿರೀಕ್ಷಿತ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾದರು. ಅಂತಿಮವಾಗಿ 6 ವಿಕೆಟ್‌ಗೆ 148 ರನ್ ಗಳಿಸಿದ್ದರು.