– ಭಾರತದ ನೆರೆ ರಾಷ್ಟ್ರಗಳಲ್ಲಿ ಆಗಿದ್ದೇನು?.. ಒಂದು ಹಿನ್ನೋಟ!
ಕಳೆದ ಮೂರು ವರ್ಷಗಳಿಂದ ದಕ್ಷಿಣ ಏಷ್ಯಾದ ರಾಜಕೀಯ, ಆರ್ಥಿಕ ಪರಿಸ್ಥಿತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನಿರ್ದಿಷ್ಟವಾಗಿ ಭಾರತದ ನೆರೆಹೊರೆ ರಾಷ್ಟ್ರಗಳಲ್ಲಿ ಅಧಿಕಾರದ ನಿರ್ವಾತ, ರಾಜಕೀಯ ಕ್ರಾಂತಿಗಳು, ಸಾಮೂಹಿಕ ಪ್ರತಿಭಟನೆಗಳಿಂದ ಪ್ರಕ್ಷುಬ್ಧತೆ ಸೃಷ್ಟಿಯಾಗಿದೆ. ಇದರಿಂದ ಆಡಳಿತ ಬದಲಾವಣೆಗೆ ಸಾಕ್ಷಿಯಾಗಿವೆ. ಅಫ್ಘಾನಿಸ್ತಾನ, ಶ್ರೀಲಂಕಾ, ಪಾಕಿಸ್ತಾನದಲ್ಲಿ ಬಿಕ್ಕಟ್ಟು ಎದುರಾಗಿತ್ತು. ಈಗ ಬಾಂಗ್ಲಾದೇಶದಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿತ್ತು.
Advertisement
2021 ರ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಶಪಡಿಸಿಕೊಂಡಾಗಿನಿಂದ, 2022 ರ ಏಪ್ರಿಲ್‌ನಲ್ಲಿ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿದವರೆಗೆ.. ಶ್ರೀಲಂಕಾದಲ್ಲಿ ನಡೆದ ಬೃಹತ್ ಪ್ರತಿಭಟನೆಗಳಿಂದ 2022 ರ ಜುಲೈನಲ್ಲಿ ಗೋತಬಯ ರಾಜಪಕ್ಸೆ ದೇಶದಿಂದ ಪಲಾಯನದಿಂದ, ಬಾಂಗ್ಲಾದೇಶದಲ್ಲಿ ಪ್ರಸ್ತುತ ಸೃಷ್ಟಿಯಾಗಿರುವ (ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ) ಪ್ರಕ್ಷುಬ್ಧತೆವರೆಗೆ.. ಏನೇನಾಯಿತು ಎಂಬುದು ನಿಜಕ್ಕೂ ಕುತೂಹಲಕಾರಿ. ದಕ್ಷಿಣ ಏಷ್ಯಾದ ರಾಜಕೀಯ ಡೈನಾಮಿಕ್ಸ್ ಕೇವಲ ಮೂರು ವರ್ಷಗಳಲ್ಲಿ ಸಂಪೂರ್ಣವಾಗಿ ತಲೆಕೆಳಗಾಗಿದೆ.
Advertisement
Advertisement
ಅತ್ತ ಭಾರತ ಸೂಪರ್ ಪವರ್ ಆಗುತ್ತಿದ್ದರೆ, ಇತ್ತ ನೆರೆಹೊರೆ ರಾಷ್ಟ್ರಗಳ ಪರಿಸ್ಥಿತಿ ಢೋಲಾಯಮಾನವಾಗುತ್ತಿದೆ. ಅಷ್ಟಕ್ಕೂ ಭಾರತದ ಸುತ್ತಾ ಏನಾಗ್ತಿದೆ? ನೆರೆಹೊರೆ ದೇಶಗಳಲ್ಲಿ ಏನೇನಾಯಿತು? ಕಾರಣವೇನು? ಇದರಿಂದಾಗಬಹುದಾದ ಪರಿಣಾಮಗಳೇನು? ಬನ್ನಿ ತಿಳಿಯೋಣ.
Advertisement
ಅಫ್ಘಾನಿಸ್ತಾನದಿಂದ ಯುಎಸ್ ಔಟ್.. ತಾಲಿಬಾನ್ ಇನ್
ಆಗ ತಾನೇ ಅಮೆರಿಕದಲ್ಲಿ ಜೋ ಬೈಡೆನ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಅದಾಗಲೇ ಬೈಡೆನ್ ತನ್ನ ದೇಶದ ಆರ್ಥಿಕ, ಸೇನಾ ಹಿತದೃಷ್ಟಿಯಿಂದ ಒಂದು ಘೋಷಣೆಯನ್ನು ಮಾಡಿಯೇಬಿಟ್ಟರು. ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೈನಿಕರು ವಾಪಸ್ ಕರೆಸಿಕೊಳ್ಳುವುದಾಗಿ ಹೇಳಿದರು. ನುಡಿದಂತೆ ಸೇನೆ ವಾಪಸ್ ಕರೆಸಿಕೊಂಡರು. ಅಫ್ಘಾನಿಸ್ತಾನದಲ್ಲಿನ ರಾಜಕೀಯ ಕ್ರಾಂತಿಯು 2021 ರಲ್ಲಿ ತಾಲಿಬಾನ್‌ನ ಮಿಲಿಟರಿ ಆಕ್ರಮಣದೊಂದಿಗೆ ಪ್ರಾರಂಭವಾಯಿತು. ಅದೇ ವರ್ಷ ಆಗಸ್ಟ್ 15 ರಂದು ಅವರು ಕಾಬೂಲ್ ಅನ್ನು ವಶಪಡಿಸಿಕೊಂಡರು. ಇದು 2001 ರಲ್ಲಿ ಯುಎಸ್ ಆಕ್ರಮಣದ ನಂತರ ಜಾರಿಯಲ್ಲಿದ್ದ ಯುಎಸ್ ಬೆಂಬಲಿತ ಆಫ್ಘನ್ ಸರ್ಕಾರದ ಅಂತ್ಯಕ್ಕೆ ಕಾರಣವಾಯಿತು.
2021ರ ಮೇ 1 ರಂದು ಅಫ್ಘಾನಿಸ್ತಾನದಿಂದ ಯುಎಸ್ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುತ್ತಿದ್ದಂತೆ, ಇತ್ತ ತಾಲಿಬಾನ್ ಆಕ್ರಮಣ ನಡೆಸಿತು. ತಾಲಿಬಾನ್ ದೇಶಾದ್ಯಂತ ಪ್ರಮುಖ ಪ್ರಾಂತೀಯ ರಾಜಧಾನಿಗಳು ಮತ್ತು ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಾ ಬಂತು. ಇದರಿಂದ ಪರಿಸ್ಥಿತಿ ಮತ್ತಷ್ಟು ಉಲ್ಬಣವಾಯಿತು. ಒಂದಷ್ಟು ಪ್ರತಿರೋಧದೊಂದಿಗೆ ಕಾಬೂಲ್ ಪತನವೂ ಆಯಿತು. ಅಧ್ಯಕ್ಷ ಅಶ್ರಫ್ ಘನಿ ಪಲಾಯನ ಮಾಡಿದರು. ಹೆಲಿಕಾಪ್ಟರ್ ತುಂಬಾ ಹಣ ತುಂಬಿಕೊಂಡು ಪರಾರಿಯಾದರು. ಇದು ಮತ್ತೊಮ್ಮೆ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ಸ್ಥಾಪನೆಗೆ ಕಾರಣವಾಯಿತು. ದೇಶವನ್ನು ತಾಲಿಬಾನ್ ವಶಪಡಿಸಿಕೊಂಡ ಪರಿಯನ್ನು ಕಂಡು ಅಮೆರಿಕ ಗುಪ್ತಚರ ಮತ್ತು ರಕ್ಷಣಾ ಏಜೆನ್ಸಿ ಕೂಡ ಅಚ್ಚರಿಗೊಂಡಿತ್ತು.
ತಾಲಿಬಾನ್ ಅಫ್ಘಾನ್ ಪ್ರವೇಶಿಸುತ್ತಿದ್ದಂತೆ ಹುಚ್ಚಾಟ ಮೆರೆಯಿತು. ಸಿಕ್ಕಸಿಕ್ಕ ಅಂಗಡಿಗಳಿಗೆ ನುಗ್ಗಿ ವಸ್ತುಗಳನ್ನು ತಾಲಿಬಾನಿಗಳು ಧ್ವಂಸಗೊಳಿಸಿದರು. ಮಹಿಳೆಯರ ವಸ್ತ್ರದ ಅಂಗಡಿಗಳು, ಮೇಕಪ್ ಶಾಪ್‌ಗಳನ್ನು ಪುಡಿಗಟ್ಟಿದರು. ಸಿನಿಮಾ ನಟಿಯರು, ಮಾಡೆಲ್‌ಗಳ ಫ್ಲೆಕ್ಸ್‌ಗಳನ್ನು ಹರಿದುಹಾಕಿದರು. ಅಂಗಡಿಗಳಲ್ಲಿನ ಆಹಾರ ಪದಾರ್ಥಗಳನ್ನು ಸೇವಿಸಿದರು. ಆಡಳಿತ ಕಚೇರಿಗಳನ್ನು ವಶಕ್ಕೆ ಪಡೆದರು. ಯುಎಸ್ ಸೇನೆ ಬಿಟ್ಟು ಹೋಗಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡರು. ತಾಲಿಬಾನ್‌ಗಳ ಆಕ್ರಮಣಕಾರಿ ಪ್ರವೇಶದಿಂದ ಭಯಭೀತರಾದ ಜನರು ದೇಶ ತೊರೆಯಲು ಮುಂದಾದರು. ಸಾವಿರಾರು ಸಂಖ್ಯೆಯಲ್ಲಿ ಜನರು ವಿಮಾನ ನಿಲ್ದಾಣಕ್ಕೆ ಧಾವಿಸಿದರು. ವಿಮಾನ ತುಂಬಿದ್ದರೂ ಜನ ಬಿಡಲಿಲ್ಲ. ಟೇಕಾಪ್ ಆಗಿದ್ದ ವಿಮಾನದಿಂದ ಬಿದ್ದು ಕೆಲವರು ಸಾವನ್ನಪ್ಪಿದ ಘಟನೆ ಕೂಡ ನಡೆಯಿತು. ಅಫ್ಘಾನ್ ಅನ್ನು ತಾಲಿಬಾನಿಗಳು ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಂಡರು.
ಸ್ವಾಧೀನಪಡಿಸಿಕೊಂಡ ನಂತರ ಅಫ್ಘಾನಿಸ್ತಾನವು ಭೀಕರ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಭಯೋತ್ಪಾದಕ-ಸಂಬಂಧಿತ ಘಟನೆಗಳ ವಿಚಾರವಾಗಿ ಪಾಕಿಸ್ತಾನದೊಂದಿಗೂ ಸಂಬಂಧ ಹದಗೆಟ್ಟಿದೆ. ಕಾಬೂಲ್‌ನಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡುತ್ತಿದೆ ಎಂದು ಇಸ್ಲಾಮಾಬಾದ್ ಪದೇ ಪದೇ ದೂಷಿಸಿದೆ. ಇದು ಪಾಕಿಸ್ತಾನದ ಗಡಿ ಪ್ರದೇಶಗಳಲ್ಲಿ ಭಾರೀ ಮತ್ತು ಮಾರಣಾಂತಿಕ ದಾಳಿಗಳನ್ನು ನಡೆಸುತ್ತಿದೆ.
ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ದೇಶದ ಆರ್ಥಿಕತೆ ಅಂದಾಜು 30% ಕುಸಿತ ಕಂಡಿದ್ದು, ಗಣನೀಯವಾಗಿ ಸಂಕುಚಿತಗೊಂಡಿದೆ. 28 ಮಿಲಿಯನ್‌ಗಿಂತಲೂ (2.8 ಕೋಟಿ) ಹೆಚ್ಚು ಜನರಿಗೆ ಅಥವಾ ಜನಸಂಖ್ಯೆಯ ಮೂರನೇ ಎರಡರಷ್ಟು ಜನರಿಗೆ ತುರ್ತು ಮಾನವೀಯ ನೆರವು ಬೇಕಾಗಿದೆ. 17 ಮಿಲಿಯನ್ (1.2 ಕೋಟಿ) ಜನರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ. ತಾಲಿಬಾನ್‌ನ ಇಸ್ಲಾಮಿಕ್ ಕಾನೂನಿನ ಕಟ್ಟುನಿಟ್ಟಿನ ವ್ಯಾಖ್ಯಾನವು ಶಿಕ್ಷಣ ಮತ್ತು ಉದ್ಯೋಗದ ಮೇಲಿನ ನಿಷೇಧಗಳನ್ನು ಒಳಗೊಂಡಂತೆ ಮಹಿಳೆಯರ ಹಕ್ಕುಗಳ ಮೇಲೆ ತೀವ್ರವಾದ ನಿರ್ಬಂಧಗಳಿಗೆ ಕಾರಣವಾಗಿದೆ. ಇದು ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ.
ಅಂತರರಾಷ್ಟ್ರೀಯ ಸಮುದಾಯದ ಪ್ರತಿಕ್ರಿಯೆಯು ಬಹುಮಟ್ಟಿಗೆ ವಿಮರ್ಶಾತ್ಮಕವಾಗಿದೆ. ಅನೇಕ ದೇಶಗಳು ನಿರ್ಬಂಧಗಳನ್ನು ವಿಧಿಸುತ್ತವೆ ಮತ್ತು ತಾಲಿಬಾನ್ ಸರ್ಕಾರದ ಮಾನ್ಯತೆಯನ್ನು ತಡೆಹಿಡಿಯುತ್ತವೆ. ತಾಲಿಬಾನ್ ಆಡಳಿತವನ್ನು ಅಧಿಕೃತ ಅಫ್ಘಾನಿಸ್ತಾನ ಸರ್ಕಾರವೆಂದು ಭಾರತ ಸರ್ಕಾರ ಇನ್ನೂ ಅಧಿಕೃತವಾಗಿ ಗುರುತಿಸದಿದ್ದರೂ, ವ್ಯಾಪಾರ ಸಂಬಂಧಗಳು ಸ್ಥಿರವಾಗಿ ಮುಂದುವರೆದಿದೆ.
ಪಾಕ್‌ನಲ್ಲಿ ಇಮ್ರಾನ್ ಖಾನ್ ಪದಚ್ಯುತಿ
2022 ರ ಏಪ್ರಿಲ್‌ನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸುವುದರೊಂದಿಗೆ ಪಾಕಿಸ್ತಾನದ ರಾಜಕೀಯದಲ್ಲಿ ಬದಲಾವಣೆಯಾಯಿತು. 2018 ರಲ್ಲಿ ಅಧಿಕಾರಕ್ಕೆ ಬಂದ ಖಾನ್ ಅವರನ್ನು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ಮತದ ಮೂಲಕ ತೆಗೆದುಹಾಕಲಾಯಿತು. ಇದು ಮಿಲಿಟರಿ ಮತ್ತು ವಿರೋಧ ಪಕ್ಷಗಳನ್ನು ಒಳಗೊಂಡ ರಾಜಕೀಯ ತಂತ್ರಗಾರಿಕೆಯಾಗಿತ್ತು. ಸೇನಾ ನೇಮಕಾತಿಗಳು ಮತ್ತು ವಿದೇಶಾಂಗ ನೀತಿ ನಿರ್ಧಾರಗಳ ವಿಚಾರವಾಗಿ ಖಾನ್ ಅವರ ಮಿಲಿಟರಿಯೊಂದಿಗಿನ ಸಂಬಂಧವು ಹದಗೆಟ್ಟಿತು.
ಈ ಕಾರಣದಿಂದ ಮಿಲಿಟರಿಯ ಬೆಂಬಲ ಹಿಂತೆಗೆದುಕೊಂಡಿದ್ದು, ಅವರ ರಾಜಕೀಯ ಅವನತಿಗೆ ಕಾರಣವಾಯಿತು. ಅವರ ಉಚ್ಚಾಟನೆಯ ನಂತರ ಹಲವಾರು ಕಾನೂನು ಸವಾಲುಗಳು ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿಬಂದವು. ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುತ್ತಿದ್ದಂತೆ ಖಾನ್ ಅವರ ರಾಜಕೀಯ ಹೋರಾಟಗಳು ತೀವ್ರಗೊಂಡವು. ಭ್ರಷ್ಟಾಚಾರ ಮತ್ತು ಮಿಲಿಟರಿ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಆರೋಪದ ಮೇಲೆ ಇಮ್ರಾನ್ ಖಾನ್‌ರನ್ನು 2023 ರ ಆಗಸ್ಟ್‌ನಲ್ಲಿ ಬಂಧಿಸಲಾಯಿತು. ಇದು ಅವರ ಬೆಂಬಲಿಗರಿಂದ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು.
ದೇಶದಲ್ಲಿ ರಾಜಕೀಯ ಉದ್ವಿಗ್ನತೆ ನಡುವೆ. ಆರ್ಥಿಕತೆಯ ಅನಿಶ್ಚಿತತೆ ತಲೆದೋರಿತು. ಹಣದುಬ್ಬರ, ಕರೆನ್ಸಿ ಮೌಲ್ಯ ಕುಸಿತ, ವಿವಿಧ ಯೋಜನೆಗಳಿಗೆ ಚೀನಾದಿಂದ ಪಡೆದಿರುವ ಬೃಹತ್ ಸಾಲದಿಂದಾಗಿ ದೇಶ ಬಿಕ್ಕಟ್ಟಿಗೆ ಸಿಲುಕಿತು. ರಾಜಕೀಯ ಅಸ್ಥಿರತೆಯು ಆರ್ಥಿಕ ಚೇತರಿಕೆಯ ಪ್ರಯತ್ನಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಿತು. ಆರ್ಥಿಕ ಬಿಕ್ಕಟ್ಟಿನ ಜೊತೆಗೆ ದೇಶದಲ್ಲಿ ಆಹಾರ ಅಭದ್ರತೆ ಕಾಡಿತು. ಆಹಾರ ಪದಾರ್ಥ ಹಾಗೂ ಇತರೆ ವಸ್ತುಗಳ ಬೆಲೆ ಗಗನಕ್ಕೇರಿತು. ಆಹಾರ ಪದಾರ್ಥಕ್ಕಾಗಿ ಜನ ಮುಗಿಬೀಳುವ ಪರಿಸ್ಥಿತಿ ಎದುರಾಯಿತು. ಪೆಟ್ರೋಲ್ ಬಂಕ್‌ಗಳಲ್ಲಿ ಕಿಲೋಮೀಟರ್‌ಗಟ್ಟಲೇ ಕ್ಯೂ, ಗೋದಿ ಹಿಟ್ಟಿನ ಮೂಟೆಗಳಿಗಾಗಿ ಜನ ಮುಗಿಬೀಳುತ್ತಿದ್ದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಶ್ರೀಲಂಕಾ ಉದ್ವಿಗ್ನತೆ; ಅಧ್ಯಕ್ಷ ರಾಜಪಕ್ಸೆ ಪಲಾಯನ
2022ರ ಜುಲೈನಲ್ಲಿ ಶ್ರೀಲಂಕಾದಲ್ಲಿ ಸರ್ಕಾರದ ವಿರುದ್ಧ ಜನರೇ ಧಂಗೆಯೆದ್ದ ಘಟನೆ ನಡೆಯಿತು. ದೇಶಾದ್ಯಂತ ನಡೆದ ಸಾಮೂಹಿಕ ಪ್ರತಿಭಟನೆ ಪರಿಣಾಮದಿಂದಾಗಿ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದರು. ಕೋವಿಡ್-19 ಸಾಂಕ್ರಾಮಿಕ ರೋಗ, ಹೆಚ್ಚುತ್ತಿರುವ ಜಾಗತಿಕ ಇಂಧನ ಬೆಲೆಗಳು, ಚೀನಾಕ್ಕೆ ಹೆಚ್ಚುತ್ತಿರುವ ಸಾಲ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಅಸಮರ್ಪಕ ನಿರ್ವಹಣೆಯಿಂದ ದೇಶ ಬಿಕ್ಕಟ್ಟಿಗೆ ಸಿಲುಕಿತು. ಇದು ಜನರ ವ್ಯಾಪಕ ಆಕ್ರೋಶಕ್ಕೆ ಗುರಿಯಾಯಿತು. ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟು ಆಹಾರ, ಇಂಧನ ಮತ್ತು ಔಷಧ ಸೇರಿದಂತೆ ಅಗತ್ಯ ವಸ್ತುಗಳ ತೀವ್ರ ಕೊರತೆಗೆ ಕಾರಣವಾಯಿತು. ಹಣದುಬ್ಬರವು ಹೆಚ್ಚಾಗಿ ಸರ್ಕಾರವು ವಿದ್ಯುತ್ ಕಡಿತ ಮತ್ತು ಸೀಮಿತವಾಗಿ ಇಂಧನ ಮಾರಾಟದಂತಹ ಕಠಿಣ ಕ್ರಮಗಳನ್ನು ಕೈಗೊಂಡಿತು. ಇದು ಜನರನ್ನು ಮತ್ತಷ್ಟು ಕೆರಳಿಸಿತು.
ಪ್ರತಿಭಟನೆಗಳು ಶಾಂತಿಯುತವಾಗಿ ಪ್ರಾರಂಭವಾದವು. ನಂತರ ರಾಜಪಕ್ಸೆ ಅವರ ರಾಜೀನಾಮೆಗೆ ಒತ್ತಾಯಿಸಿ ದೊಡ್ಡ ಚಳವಳಿಯಾಗಿ ರೂಪುಗೊಂಡಿತು. ಕೆರಳಿದ ಜನ ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡಿದರು. ಮಿಲಿಟರಿಯ ಯಾವುದೇ ಪ್ರತಿರೋಧಗಳಿಗೂ ಜಗ್ಗಲಿಲ್ಲ. ಪ್ರಧಾನಿ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದರು. ಅಲ್ಲಿ ಸಿಕ್ಕಸಿಕ್ಕ ವಸ್ತುಗಳು, ಹಣವನ್ನು ಲೂಟಿ ಮಾಡಿದರು. ಆಟವಾಡಿದರು, ಸೋಫಾ ಮೇಲೆ ಹೊರಳಾಡಿದರು. ನಿವಾಸದಲ್ಲಿದ್ದ ಆಹಾರ ಪದಾರ್ಥಗಳನ್ನು ತಿಂದು ಹುಚ್ಚಾಟ ಮೆರೆದರು. ರಾಜಪಕ್ಸೆ ಅವರ ನಿರ್ಗಮನದ ನಂತರ, ರನಿಲ್ ವಿಕ್ರಮಸಿಂಘೆ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿತು. ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ನೆರವು ಕೋರಿದೆ. ಆರ್ಥಿಕತೆಯನ್ನು ಸ್ಥಿರಗೊಳಿಸಲು ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ.
ಬಾಂಗ್ಲಾ ಬಿಕ್ಕಟ್ಟು; ಪ್ರಧಾನಿ ರಾಜೀನಾಮೆ – ಭಾರತಕ್ಕೆ ಪಲಾಯನ
ಬಾಂಗ್ಲಾದಲ್ಲೂ ಬಿಕ್ಕಟ್ಟು ಎದುರಾಗಿದೆ. 2024ರ ಆಗಸ್ಟ್ 5 ರಿಂದ ಸರ್ಕಾರದ ವಿರುದ್ಧ ಜನರು ತಿರುಗಿಬಿದ್ದಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದರು. ತೀವ್ರ ಪ್ರತಿಭಟನೆಯಲ್ಲಿ 300 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಇದೇ ವೇಳೆ ಹಿಂದೂಗಳನ್ನು ಗುರಿಯಾಗಿ ಹಲವೆಡೆ ಹಿಂಸಾಚಾರ ನಡೆದಿದೆ.
ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರಿ ಹುದ್ದೆಗಳಲ್ಲಿ ಶೇ.30 ಮೀಸಲಾತಿ ಕಲ್ಪಿಸುವ ನಿರ್ಧಾರವು ಸರ್ಕಾರದ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಯಿತು. ಸಾವಿರಾರು ಸಂಖ್ಯೆಯಲ್ಲಿ ಯುವಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಇದರಿಂದ ಎಚ್ಚೆತ್ತು, ಬಾಂಗ್ಲಾದ ಸುಪ್ರೀಂ ಕೋರ್ಟ್ ಶೇ.30 ರಿಂದ ಶೇ.5ಕ್ಕೆ ಮೀಸಲಾತಿ ಪ್ರಮಾಣ ಇಳಿಸಿತು. ಆದರೆ ಬಾಂಗ್ಲಾ ಪ್ರಧಾನಿ ವಿರುದ್ಧ ಬೀದಿಗಿಳಿದ ಪ್ರತಿಭಟನಾಕಾರರು ರಾಜೀನಾಮೆಗೆ ಆಗ್ರಹಿಸಿ ಹಿಂಸಾಚಾರ ನಡೆಸಿದರು. ಪರಿಣಾಮವಾಗಿ ಹಸೀನಾರು ರಾಜೀನಾಮೆ ನೀಡಿ ಪಲಾಯನ ಮಾಡಿದರು.
ದೊಣ್ಣೆಗಳನ್ನು ಹಿಡಿದು ಬೀದಿಗಿಳಿದ ಪ್ರತಿಭಟನಾಕಾರರು ಸಿಕ್ಕಸಿಕ್ಕದ್ದನ್ನೆಲ್ಲ ಧ್ವಂಸ ಮಾಡಿದರು. ಪ್ರತಿಮೆಗಳನ್ನು ನೆಲಕ್ಕುರುಳಿಸಿದರು. ಬೋಟ್‌ಗಳಲ್ಲಿ ವಿಹಾರ ಮಾಡಿ ಮೋಜು-ಮಸ್ತಿ ಮಾಡಿದರು. ಅಂಗಡಿ, ಶಾಪ್‌ಗಳ ಮೇಲೆ ದಾಳಿ ನಡೆಸಿದರು. ವಸ್ತುಗಳನ್ನೆಲ್ಲ ಲೂಟಿ ಮಾಡಿದರು. ಪ್ರಧಾನಿ ಅಧಿಕೃತ ನಿವಾಸಕ್ಕೆ ನುಗ್ಗಿ ವಸ್ತುಗಳನ್ನು ದೋಚಿದರು. ಮಾಡಿದ್ದ ಅಡುಗೆಯನ್ನೆಲ್ಲ ಭಕ್ಷಿಸಿದರು. ಸೋಫಾ ಮೇಲೆ ಬಿದ್ದು ಹೊರಳಾಡಿದರು. ಈ ದೃಶ್ಯದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹಸೀನಾ ರಾಜೀನಾಮೆ ನೀಡುತ್ತಿದ್ದಂತೆ ದೇಶದಲ್ಲಿ ಸೇನಾಡಳಿತ ಜಾರಿಗೊಳಿಸಲಾಗಿತ್ತು. ನಂತರ ಮಧ್ಯಂತರ ಸರ್ಕಾರ ರಚನೆಯಾಯಿತು.
ಬಾಂಗ್ಲಾದಲ್ಲಿ ಕ್ಷಿಪ್ರ ಕಾಂತಿ ಹಿನ್ನೋಟ
1975: ಸೇನಾ ಕ್ರಾಂತಿಯಲ್ಲಿ ದೇಶದ ಮೊದಲ ಪ್ರಧಾನಿ ಶೇಖ್ ಮುಜೀಬುರ್ ರಹಮಾನ್ (ಶೇಖ್ ಹಸೀನಾ ತಂದೆ) ಮತ್ತು ಕುಟುಂಬ ಸದಸ್ಯರ ಹತ್ಯೆಯಾಗಿತ್ತು. ಸೇನಾ ಆಡಳಿತ ಜಾರಿಗೆ ಬಂದಿತ್ತು. ನಂತರ ಜನರಲ್ ಜಿಯಾಉರ್ ರೆಹಮಾನ್ ಅಧಿಕಾರಕ್ಕೆ.
1981: ಚಿತ್ತಗಾಂಗ್ ನಗರಲ್ಲಿನ ಸರ್ಕಾರಿ ಅತಿಥಿಗೃಹಕ್ಕೆ ನುಗ್ಗಿದ ಬಂಡುಕೋರರಿಂದ ಜಿಯಾಉರ್ ರೆಹಮಾನ್ ಹತ್ಯೆ ಮಾಡಲಾಯಿತು.
1982: ರೆಹಮಾನ್ ಉತ್ತರಾಧಿಕಾರಿ ಅಬ್ದುಸ್ ಸತ್ತಾರ್ ಅವರನ್ನು ಹುನೇಸ್ ಮುಹಮ್ಮದ್ ಇರ್ಷಾದ್ ನೇತೃತ್ವದ ತಂಡ ರಕ್ತರಹಿತ ಕ್ರಾಂತಿ ಮೂಲಕ ಪದಚ್ಯುತಿಗೊಳಿಸಿತು. ಮುಖ್ಯ ಸೇನಾ ಆಡಳಿತಾಧಿಕಾರಿಯಾಗಿ ಸತ್ತಾರ್ ಅಧಿಕಾರ ವಹಿಸಿಕೊಂಡರು.
2007: ಸೇನಾ ಮುಖ್ಯಸ್ಥರ ನೇತೃತ್ವದಲ್ಲಿ ಸೇನಾ ಕ್ರಾಂತಿ ನಡೆಯಿತು. ಹಂಗಾಮಿ ಸರ್ಕಾರಕ್ಕೆ ಸೇನೆ ಬೆಂಬಲ ನೀಡಿತು.
2009: ಶೇಖ್ ಹಸೀನಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಅದೇ ವರ್ಷ ವೇತನ ಮತ್ತು ಸೌಲಭ್ಯಗಳ ಬಗ್ಗೆ ಅಸಮಾಧಾನಗೊಂಡಿದ್ದ ಅರೆಸೇನಾ ಪಡೆಯ ಸಿಬ್ಬಂದಿ ಬಂಡಾಯವೆದ್ದು, ಢಾಕಾದಲ್ಲಿ 70 ಜನರ ಹತ್ಯೆಯಾಗಿತ್ತು. ಮೃತಪಟ್ಟವರಲ್ಲಿ ಬಹುತೇಕ ಮಂದಿ ಸೇನಾಧಿಕಾರಿಗಳಾಗಿದ್ದರು. 10ಕ್ಕೂ ಹೆಚ್ಚು ನಗರಗಳಿಗೆ ದಂಗೆ ಹಬ್ಬಿತ್ತು. 6 ದಿನಗಳಲ್ಲಿ ಈ ದಂಗೆಯನ್ನು ನಿಯಂತ್ರಣಕ್ಕೆ ತರಲಾಯಿತು.
2012: ನಿವೃತ್ತ ಮತ್ತು ಸೇವೆಯಲ್ಲಿದ್ದ ಅಧಿಕಾರಿಗಳು ಮಾಡಿದ ದಂಗೆ ಇದು. ದೇಶಾದ್ಯಂತ ಷರಿಯಾ ಕಾನೂನು ಜಾರಿಗೆ ತರಬೇಕು ಎಂಬ ಅಭಿಯಾನದ ಭಾಗವಾಗಿ ದಂಗೆ ಎದ್ದಿತ್ತು. ಈ ಯತ್ನವನ್ನು ವಿಫಲಗೊಳಿಸಿದ್ದಾಗಿ ಬಾಂಗ್ಲಾ ಸೇನೆ ಹೇಳಿಕೆ.