ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ಹಲವು ಬೀಚ್‍ಗಳು ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಆದರೆ ಕೆಲವೊಂದು ಜಲಪಾತಗಳು ಮೂಲ ಸೌಕರ್ಯದ ಕೊರತೆಯಿಂದಾಗಿ ದೂರ ಉಳಿದುಕೊಂಡಿವೆ. ಈ ಸಾಲಿನಲ್ಲಿ ಅಡ್ಯಾರ್ ಜಲಪಾತವೂ ಸೇರುತ್ತದೆ.
ಮಂಗಳೂರು ನಗರದಿಂದ 10 ಕಿ.ಮೀ ದೂರದ ಅಡ್ಯಾರ್ ಎಂಬಲ್ಲಿ ಈ ಜಲಪಾತವಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ವಳಚ್ಚಿಲ್‍ನಿಂದ ಎಡಕ್ಕೆ ಸಾಗಿದರೆ ಸಿಗೋ ಈ ಫಾಲ್ಸ್ ವಿದ್ಯಾರ್ಥಿಗಳ ನೆಚ್ಚಿನ ವೀಕೆಂಡ್ ಸ್ಪಾಟ್ ಆಗಿದೆ. ಅಡ್ಯಾರ್ ಫಾಲ್ಸ್ ಅಂತಾನೇ ಹೆಸರುವಾಸಿಯಾಗಿರೋ ಈ ಜಲಪಾತ ಮಳೆಗಾಲದಲ್ಲಿ ಮಾತ್ರ ಸ್ವರ್ಗವನ್ನೇ ನಾಚಿಸುವ ಸೌಂದರ್ಯ ಪಡೆಯುತ್ತದೆ.
Advertisement
Advertisement
ಬೆಟ್ಟದ ಮೇಲಿಂದ ಹಾಲ್ನೊರೆಯ ಹಾಗೆ ಹರಿದು ಬರೋ ನೀರು ಲಲನೆಯ ರೀತಿ ಹರಿಯುತ್ತದೆ. ಸುಮಾರು 40 ಅಡಿ ಎತ್ತರದಿಂದ ಧುಮುಕುವ ನೀರಿನ ಸೊಬಗನ್ನು ನೋಡಲು ಎರಡು ಕಣ್ಣು ಸಾಲದು. ಹೆಚ್ಚಿನ ಜಲಪಾತಗಳು ರಭಸದಿಂದ ಹರಿದು, ಪ್ರಪಾತ ಸೇರುವ ಕಾರಣ ಕೆಲವೊಮ್ಮೆ ಪ್ರವಾಸಿಗರ ಪಾಲಿಗೆ ಅವು ಅಪಾಯಕಾರಿಯಾಗಿರುತ್ತದೆ. ಆದರೆ ವಳಚ್ಚಿಲ್ ಜಲಪಾತದಲ್ಲಿ ನೀರು ರಭಸವಾಗಿ ಹರಿಯದೆ, ಹಂಸ ನಡಿಗೆಯ ಚೆಲುವೆಯಂತೆ ನಾಜೂಕಾಗಿ ಶಾಂತವಾಗಿ ಹರಿಯುತ್ತದೆ. ಹಾಗಾಗಿಯೇ ವಿದ್ಯಾರ್ಥಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಡ್ಯಾರ್ ಫಾಲ್ಸ್ ಗೆ ಬರುತ್ತಾರೆ.
Advertisement
ಅಡ್ಯಾರ್ ಜಲಪಾತ ಜೂನ್‍ನಲ್ಲಿ ಮಳೆಯೊಂದಿಗೆ ತೆರೆದುಕೊಳ್ಳುವ ಜಲಪಾತ ನವಂಬರ್‍ವರೆಗೂ ವೈಭವದಿಂದ ಮೇಳೈಸುತ್ತದೆ. ಆದರೆ ಫಾಲ್ಸ್ ಗೆ ಹೋಗೋಕೆ ಸಮರ್ಪಕವಾದ ರಸ್ತೆ ವ್ಯವಸ್ಥೆ ಇಲ್ಲ. ಹಾಗಾಗಿಯೇ ಜನ ಫಾಲ್ಸ್ ವೈಭವ ಕಾಣೋಕೆ ಹಿಂಜರಿಯುತ್ತಾರೆ. ಇನ್ನೊಂದೆಡೆ ಪೋಲಿಗಳು ಈ ಫಾಲ್ಸ್ ನ್ನು ಜಾಲಿ ಮಾಡೋಕೆ ಬಳಸೋದ್ರಿಂದ ಮದ್ಯದ ಬಾಟಲ್ ಗಳು, ಪ್ಲಾಸ್ಟಿಕ್ ಚೀಲಗಳು ಇದರ ಸೌಂದರ್ಯಕ್ಕೆ ಧಕ್ಕೆ ತಂದಿದೆ.
Advertisement
ಒಟ್ಟಿನಲ್ಲಿ ಫಾಲ್ಸ್ ನೋಡೋಕೆ ಪಶ್ಚಿಮ ಘಟ್ಟಗಳ ತಪ್ಪಲಿಗೆ ಹೋಗೋ ಜನ ಮಂಗಳೂರಿಗೆ ಕೂಗಳತೆ ದೂರದಲ್ಲಿರೋ ಫಾಲ್ಸ್ ನ ಸೌಂದರ್ಯ ನೋಡೋ ಅವಕಾಶ ವಂಚಿತರಾಗಿದ್ದಾರೆ. ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತು ಜಲಪಾತ ಸೌಂದರ್ಯ ಉಳಿಸಿದ್ರೆ ಕರಾವಳಿಯ ಪ್ರವಾಸಿ ತಾಣಗಳ ಪಟ್ಟಿಗೆ ಅಡ್ಯಾರ್ ಫಾಲ್ಸ್ ಕೂಡಾ ಸೇರಿ, ಪ್ರವಾಸಿಗರನ್ನು ತನ್ನತ್ತ ಸೆಳೆಯಬಹುದು.
https://youtu.be/iYalE_HuW6k