ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಶ್ನೆ ಕೇಳುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕೆ ಇಲ್ಲ ಎಂದು ಡಿಕೆಶಿ ಪರವಾಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುತ್ತಿರುವ ಹಿರಿಯ ವಕೀಲ ಶ್ಯಾಮ್ ಸುಂದರ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಇಡಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನ ಬಂಧಿಸುತ್ತಾರೆ ಎಂದು ಊಹೆ ಕೂಡ ಮಾಡಿರಲಿಲ್ಲ. ಇದು ಈ ಹಂತಕ್ಕೆ ಹೋಗಬಾರದಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಇಡಿ ಕಚೇರಿ ಮುಂಭಾಗದಲ್ಲಿ ಹೈಡ್ರಾಮಾ – ನಾನು ಹೇಡಿಯಲ್ಲ ಎಲ್ಲವನ್ನೂ ಎದುರಿಸುತ್ತೇನೆ ಎಂದ ಡಿಕೆಶಿ
ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ ಬಳಿಕ ಇಡಿಗೆ ದೂರು ನೀಡಿ ಕಾನೂನು ಕ್ರಮಕ್ಕೆ ತಿಳಿಸಿತ್ತು. ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆಯಲ್ಲ. ಆದಾಯ ತೆರಿಗೆ ಇಲಾಖೆಯವರು ದೂರಿನ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿಕೊಂಡಿದೆ ಎಂದರು.
ಬಂಧನವನ್ನು ವಿರೋಧಿಸಿ ನಾವು ಕರ್ನಾಟಕ ಹೈಕೋರ್ಟಿನಲ್ಲಿ ತುರ್ತು ಅರ್ಜಿ ವಿಚಾರಣೆ ಮಾಡುವಂತೆ ಮನವಿ ಮಾಡುತ್ತೇವೆ. ನೀವು ಆರೋಪಿಗಳಂತೆ ಭಾವಿಸಬೇಡಿ, ನಿಮ್ಮನ್ನ ಅವರು ಕೇವಲ ವಿಚಾರಣೆಗೆ ಕರೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಇಡಿಗೆ ಇಲ್ಲ ಅಂತ ವಿಚಾರಣೆ ವೇಳೆ ಸ್ಪಷ್ಟವಾಗಿ ತಿಳಿಸಿ ಎಂದು ಹೈಕೋರ್ಟ್ ಸ್ಪಷ್ಟವಾಗಿ ತಿಳಿಸಿತ್ತು. ಹೀಗಾಗಿ ಡಿ.ಕೆ.ಶಿವಕುಮಾರ್ ಅವರು ವಿಚಾರಣೆಗೆ ಹಾಜರಾಗಿದ್ದರು. ಆದರೆ ಏಕಾಏಕಿ ಮಾಜಿ ಸಚಿವರನ್ನು ಯಾಕೆ ಬಂಧಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಡಿಕೆಶಿ ಬಂಧನ – ಬುಧವಾರ ರಾಮನಗರ, ಕನಕಪುರ ಬಂದ್
ಇಡಿ ಅಧಿಕಾರಿಗಳು ಪ್ರಶ್ನೆ ಕೇಳುವ ಅಧಿಕಾರವೇ ಇಲ್ಲ. ಐಟಿ ಇಲಾಖೆ ನೀಡಿದ ದಾಖಲೆಯೇ ತಪ್ಪು ಎನ್ನುವುದು ಈಗಾಗಲೇ ತಿಳಿದು ಬಂದಿದೆ. ಯಾರ ಜಾಗದಲ್ಲಿ 8.9 ಕೋಟಿ ರೂ. ಸಿಕ್ಕಿತ್ತೋ ಅವರು ಹಣ ನನ್ನದೇ ಎಂಬುದಾಗಿ ಒಪ್ಪಿಕೊಂಡಿದ್ದಾರೆ. ಈ ಹೇಳಿಕೆಯನ್ನು ಐಟಿ ತಿರಸ್ಕರಿಸಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಇಡಿ ಪ್ರವೇಶ ಮಾಡಲು ಸಾಧ್ಯವೇ ಇಲ್ಲ ಎಂದು ಎಂದು ಮಾಹಿತಿ ನೀಡಿದರು.
ಕಾನೂನು ಹೋರಾಟ ಸುದೀರ್ಘವಾಗಿ ಇರುತ್ತವೆ. ಆದರೆ ಕೋರ್ಟ್ ನಿರಪರಾಧಿಗಳನ್ನು ರಕ್ಷಿಸುತ್ತದೆ. ಸಂಬಂಧವಿಲ್ಲ ಸಂಸ್ಥೆ ಸೂಕ್ತವಲ್ಲದ ರೀತಿ ವಿಚಾರಣೆ ನಡೆಸುತ್ತಿರುವುದು ತಪ್ಪು ಎನ್ನುವುದೇ ನಮ್ಮ ವಾದ. ಈ ಬಗ್ಗೆ ನಾವು ಕಾನೂನು ಹೋರಾಟ ನಡೆಸುತ್ತೇವೆ ಎಂದರು.