ದಾವಣಗೆರೆ: ಕಲಬೆರಕೆ ಬೆಣ್ಣೆಯನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಜಿಲ್ಲೆಯ ಬೇತೂರು ಗ್ರಾಮದಲ್ಲಿ ನಡೆದಿದೆ.
ಹರಪನಹಳ್ಳಿ ತಾಲೂಕಿನ ಕಡಬಗೆರೆ ಗ್ರಾಮದ ಶಿವು ಬಂಧಿತ ಆರೋಪಿಯಾಗಿದ್ದು, ಹಲವಾರು ವರ್ಷಗಳಿಂದ ಕಲಬೆರಕೆ ಬೆಣ್ಣೆಯನ್ನು ಬೇತೂರು ಪುಟಗನಾಳ್ ಗ್ರಾಮಗಳು ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಪುಟಗನಾಳ್ ಗ್ರಾಮಸ್ಥರು ಹುಡುಕಾಟವನ್ನು ನಡೆಸುತ್ತಿದ್ದರು, ಇಂದು ಬೇತೂರು ಗ್ರಾಮಕ್ಕೆ ಕಲಬೆರಕೆ ಬೆಣ್ಣೆ ಮಾರಾಟ ಮಾಡಲು ಆರೋಪಿ ಶಿವು ಬರುವ ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಆತನನ್ನು ಹಿಡಿದಿದ್ದಾರೆ. ಇದನ್ನೂ ಓದಿ: ಕೊರಿಯಾಗೆ ಕಳುಹಿಸಿದ ಸ್ವಾರಸ್ಯಕರ ಕಥೆ ಹೇಳಿದ್ರು ಡಿ.ಕೆ ಶಿವಕುಮಾರ್
ಈ ಬಗ್ಗೆ ಬೇತೂರು ಗ್ರಾಮಸ್ಥರು ಸಹ ಸಾಥ್ ನೀಡಿದ್ದಾರೆ. ಓಮ್ನಿ ಗಾಡಿಯಲ್ಲಿ ನಾಲ್ಕು ಚೀಲಗಳಲ್ಲಿ ತುಂಬಿ ಕಲಬೆರಕೆ ಬೆಣ್ಣೆ ಸಾಗಿಸುತ್ತಿದ್ದು, ಒಂದು ಕೆ.ಜಿ ತೂಕದ ಪ್ಯಾಕೇಟ್ ಗಳನ್ನು ದಾವಣಗೆರೆ ಹೋಟೆಲ್ ಗಳಿಗೂ ಸಾಗಿಸುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಆಗಮಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಕಲಬೆರಕೆ ಬೆಣ್ಣೆಯನ್ನು ಆಹಾರ ಇಲಾಖೆ ಗುಣಮಟ್ಟ ಪರೀಕ್ಷಕರನ್ನು ಕರೆಸಿ ಪರಿಶೀಲನೆಗೆ ನೀಡಿದ್ದಾರೆ. ಬೆಣ್ಣೆ ನಗರಿಯಲ್ಲಿ ಕಲಬೆರಕೆ ಬೆಣ್ಣೆ ಮಾರಾಟ ಜಾಲ ಹೆಚ್ಚಾಗಿದೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ.