ಸಿನಿಮಾ ಶುರುವಾದಾಗಿನಿಂದ ಸದ್ದು ಮಾಡುತ್ತಾ ಸುದ್ದಿಯಾಗುತ್ತಿರುವ ಅದ್ದೂರಿ ಚಿತ್ರ ’ಆದಿಪುರುಷ್’ (Adi Purush) ಈಗ ಪ್ರತಿಷ್ಠಿತ ಟ್ರಿಬೆಕಾ ಉತ್ಸವದಲ್ಲಿ (Tribeca Festival) ಪ್ರೀಮಿಯರ್ ಶೋ ನಡೆಸುವುದರೊಂದಿಗೆ ಮತ್ತೊಂದು ಮೈಲಿಗಲ್ಲು ಸಾಧಿಸುತ್ತಿದೆ. ನ್ಯೂಯಾರ್ಕ್‌ದಲ್ಲಿ (New York) ಜೂನ್ 7 ರಿಂದ 18ರವರೆಗೆ ನಡೆಯುವ ಪ್ರದರ್ಶನದಲ್ಲಿ ’ಆದಿಪುರುಷ್’ ಜೂನ್ 13ರಂದು ವಿಶ್ವ ಪ್ರಥಮ ಪ್ರದರ್ಶನ ನಡೆಸಲು ಗೌರವಾನ್ವಿತ ತೀರ್ಪುಗಾರರು ಇದನ್ನು ಆಯ್ಕೆ ಮಾಡಿರುತ್ತಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಓಂ ರಾವುತ್ (Om Raut)ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಟಿ ಸೀರೀಸ್‌ನ ಭೂಷಣ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. ವಾಲ್ಮೀಕಿ ಬರೆದ ರಾಮಾಯಣದ ಅಂಶಗಳನ್ನು ಚಿತ್ರದಲ್ಲಿ ಬಳಸಲಾಗಿದೆ.
ಉತ್ಸವದಲ್ಲಿ ’ಮಿಡ್ ನೈಟ್ ಆಫರಿಂಗ್’ ಆಗಿ 3D ಸ್ವರೂಪದಲ್ಲಿ ದೃಶ್ಯ ಹಬ್ಬದಂತೆ ತೋರಿಸುತ್ತಿರುವುದು ವಿಶೇಷ. ಇದರಿಂದ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ಕ್ಷಣವಾಗುತ್ತಿದೆ. ಇದರ ಕುರಿತಂತೆ ಮಾತನಾಡಿರುವ ನಾಯಕ ಪ್ರಭಾಸ್ (Prabhas) ‘ಇದು ನನಗಲ್ಲದೆ ಭಾರತೀಯ ಸಿನಿಮಾಗೆ ಸಂದ ಗೌರವವಾಗಿದೆ. ಅದರಲ್ಲೂ ನಮ್ಮ ಚಿತ್ರವು ವಿದೇಶದಲ್ಲಿ ಪ್ರದರ್ಶನವಾಗುತ್ತಿರುವುದು ಸಂತಸ ತಂದಿದೆ. ಒಬ್ಬ ಭಾರತೀಯನಾಗಿ ಅಲ್ಲಿನ ಪ್ರೇಕ್ಷಕರೊಂದಿಗೆ ಕುಳಿತು ನೋಡಲು ಕಾತುರನಾಗಿದ್ದೇನೆ’ ಎನ್ನುತ್ತಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ಶಾಕ್ – ಬಳ್ಳಾರಿ ಪ್ರವೇಶಕ್ಕೆ ಅನುಮತಿ ನೀಡದ ಸುಪ್ರೀಂ
ತಾರಗಣದಲ್ಲಿ ಕೃತಿ ಸನೂನ್, ಸೈಫ್ ಆಲಿಖಾನ್ ಮತ್ತು ಸನ್ನಿ ಸಿಂಗ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರೊಂದಿಗೆ ದೇವದತ್ತ ನಾಗೆ, ವತ್ಸಲ್ ಸೇತ್, ಸೋನಾಲ್ ಚೌಹಾಣ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಸಂಗೀತ ಅಜಯ್-ಅತುಲ್, ಛಾಯಾಗ್ರಹಣ ಕಾರ್ತಿಕ್‌ಪಳನಿ, ಸಂಕಲನ ಅಪೂರ್ವ ಮೋತಿವಾಲೆ, ಸಹಾಯ- ಆಶಿಷ್ ಮಾತ್ರ. ಅಂದಹಾಗೆ ಸಿನಿಮಾ ಜೂನ್ 16ರಂದು ವಿಶ್ವದಾದ್ಯಂತ ಹಿಂದಿ, ತೆಲುಗು, ಕನ್ನಡ, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ 3D ಮಾದರಿಯಲ್ಲಿ ಬಿಡುಗಡೆಯಾಗಲಿದೆ.